ಇಂದಿರಾನಗರ-ನೆಕ್ಕಿಲು ರಸ್ತೆಗೆ ಖಾಸಗಿಯವರಿಂದ ಅಡ್ಡಿ: ಕಾನೂನಾತ್ಮಕ ಹೋರಾಟಕ್ಕಾಗಿ ಸಮಿತಿ ರಚನೆ

Update: 2018-11-12 12:05 GMT

ಪುತ್ತೂರು, ನ. 12: ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆಯಿಂದ ಇಂದಿರಾನಗರ-ನೆಕ್ಕಿಲು ಮೂಲಕವಾಗಿ ನರಿಮೊಗ್ರು ಸರ್ಕಾರಿ ಐಟಿಐ ಬಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸುಮಾರು 50 ವರ್ಷಗಳಿಂದ ಸಾರ್ವಜನಿಕ ಬಳಕೆಯಲ್ಲಿದ್ದು, ಖಾಸಗಿ ವ್ಯಕ್ತಿಯೊಬ್ಬರು ತನ್ನ ಸ್ವಂತ ಜಾಗವೆಂದು ಹೇಳುತ್ತಾ ಈ ರಸ್ತೆಗೆ ಬೇಲಿ ನಿರ್ಮಿಸಿ ಈ ಭಾಗದ ಸಾರ್ವಜನಿಕರಿಗೆ ತೊಂದರೆ  ನೀಡುತ್ತಿದ್ದು, ಈ ನಿಟ್ಟಿನಲ್ಲಿ ರಸ್ತೆ ಹೋರಾಟ ಸಮಿತಿ ರಚಿಸಿಕೊಂಡು ಕಾನೂನು ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಪುರುಷರಕಟ್ಟೆ-ಇಂದಿರಾನಗರ-ನೆಕ್ಕಿಲು ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರ ರೈ ನೆಕ್ಕಿಲು ತಿಳಿಸಿದ್ದಾರೆ. 

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 45 ವರ್ಷಗಳ ಹಿಂದೆ ಸರ್ವೆ ನಂಬರ್ 312ರಲ್ಲಿಯ ಜಾಗವನ್ನು ಇಸ್ಮಾಯಿಲ್ ಸಾಹೇಬ್ ಎಂಬವರಿಗೆ ಸರ್ಕಾರವು ಮಿಲಿಟರಿ ಕೋಟಾದಲ್ಲಿ ಮಂಜೂರುಗೊಳಿಸಿತ್ತು. ಈ ಜಾಗದಲ್ಲಿ ಹಾದು ಹೋಗುವ ಸುಮಾರು 20 ಲಿಂಕ್ಸ್ ರಸ್ತೆಯನ್ನು ಸಾರ್ವಜನಿಕರಿಗೆ ಊರ್ಜಿತ ಇಟ್ಟಿದೆ ಎಂಬ ಶರ್ತವನ್ನು ಇಟ್ಟು ಸರ್ಕಾರ ಅವರಿಗೆ ಮಂಜೂರು ಮಾಡಿತ್ತು. ಬಳಿಕ ಆ ಜಾಗವನ್ನು ಆದಂ ಎಂ ಎಂಬವರು ಕ್ರಯಕ್ಕೆ ಖರೀದಿಸಿದ್ದರು. ಕ್ರಯಪತ್ರದಲ್ಲಿಯೂ ಈ ರಸ್ತೆ ಷರತ್ತು ಊರ್ಜಿತದಲ್ಲಿತ್ತು. 2000ನೇ ಇಸವಿಯಲ್ಲಿ ಅದೇ ಜಾಗದ ಒಂದು ಭಾಗದ 5 ಸೆಂಟ್ಸ್ ಜಾಗವನ್ನು ಬಿ. ಕೃಷ್ಣರಾವ್ ಎಂಬವರು ರಸ್ತೆ ಹಾದು ಹೋಗುವ ಜಾಗವನ್ನು ಖರೀದಿಸಿದ್ದರು.  ಈ ಜಾಗವನ್ನು ಖರೀದಿಸಿರುವ ಕೃಷ್ಣರಾವ್ ಅವರು ಇದು ನನ್ನ ಜಾಗ. ಇಲ್ಲಿ ರಸ್ತೆ ಇಲ್ಲ ಎಂದು ವಾದಿಸುತ್ತಾ ಮತ್ತು ತಪ್ಪು ಮಾಹಿತಿ ನೀಡುತ್ತಾ ಬಳಕೆದಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿ. ಕೃಷ್ಣರಾವ್ ಅವರು ಖರೀದಿಸಿದ 5 ಸೆಂಟ್ಸ್ ಜಾಗದಲ್ಲಿ ರಸ್ತೆ ಜಾಗವು ಸೇರ್ಪಡೆಗೊಂಡಿದೆ. ಈ ರಸ್ತೆ ವಿಚಾರವಾಗಿ ಬಿ. ಕೃಷ್ಣರಾವ್ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆಯವರು ಸೇರಿ ಯಾರೂ ದುರಸ್ಥಿಪಡಿಸಬಾರದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದರಿಂದಾಗಿ ಸುಮಾರು 1.5 ಕಿಮೀ ಉದ್ದದ ಈ ರಸ್ತೆಯು ಉಳಿದ ಭಾಗದಲ್ಲಿ ಅಭಿವೃದ್ಧಿ ಕಂಡಿದ್ದರೂ, ಈ ಭಾಗದಲ್ಲಿ ಅಭಿವೃದ್ಧಿ ಕಾಣದೆ ತೀರಾ ದುಸ್ಥಿತಿಯಲ್ಲಿದೆ. ಈ ಭಾಗದಲ್ಲಿ ವಾಹನಗಳು ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರಕರಣ ನ್ಯಾಯಾಲಯ ಹಂತದಲ್ಲಿರುವುದರಿಂದ ನಾವೂ ಕಾನೂನಾತ್ಮಕ ರೀತಿಯಲ್ಲೇ ಕಾನೂನು ಹೋರಾಟ ನಡೆಸುತ್ತೇವೆ. ಈ ಹಿನ್ನಲೆಯಲ್ಲಿ ಈಗಾಗಲೇ `ಪುರುಷರಕಟ್ಟೆ ಇಂದಿರಾನಗರ ನೆಕ್ಕಿಲು' ರಸ್ತೆ ಹೋರಾಟ ಸಮಿತಿ ರಚಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಸ್ತೆ ಹೋರಾಟ ಸಮಿತಿಯ ಪ್ರಮುಖರಾದ ಬೇಬಿ ಜಾನ್, ಅವಿನಾಶ್ ಇಂದಿರಾನಗರ, ಉಮೇಶ್ ಇಂದಿರಾನಗರ ಮತ್ತು ಶರೀಫ್ ಇಂದಿರಾನಗರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News