ಮಣಿಪುರ ನಕಲಿ ಎನ್‌ಕೌಂಟರ್ ಪ್ರಕರಣಗಳು: ವಿಚಾರಣಾ ಪೀಠದ ಬದಲಾವಣೆ ಕೋರಿದ್ದ ಪೊಲೀಸ್ ಸಿಬ್ಬಂದಿಗಳ ಅರ್ಜಿ ವಜಾ

Update: 2018-11-12 17:01 GMT

ಹೊಸದಿಲ್ಲಿ,ನ.12: ಸಿಬಿಐ ವಿಶೇಷ ತನಿಖಾ ತಂಡ(ಸಿಟ್)ವು ತನಿಖೆಯನ್ನು ನಡೆಸುತ್ತಿರುವ ಮಣಿಪುರ ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ವಿಚಾರಣಾ ಪೀಠದಲ್ಲಿಯ ನ್ಯಾಯಧೀಶರು ವಿಚಾರಣೆ ನಡೆಸುವುದನ್‌ನು ಆಕ್ಷೇಪಿಸಿ ಮಣಿಪುರದ ಕೆಲವು ಪೊಲೀಸ್ ಸಿಬ್ಬಂದಿಗಳು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ. ಸಿಟ್ ಮತ್ತು ಈ ಪ್ರಕರಣಗಳಲ್ಲಿ ಅದು ನಡೆಸುತ್ತಿರುವ ತನಿಖೆಯನ್ನು ಶಂಕಿಸಲು ಈ ಪೊಲೀಸರಿಗೆ ಯಾವುದೇ ಕಾರಣಗಳಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ಪೀಠವು,ನ್ಯಾಯಾಂಗ ಮತ್ತು ಸಿಬಿಐನ ಸಾಂಸ್ಥಿಕ ಸಮಗ್ರತೆಯನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿತು.

ಸಿಟ್‌ನ ದೋಷಾರೋಪಣ ಪಟ್ಟಿಯಲ್ಲಿನ ಕೆಲವು ಆರೋಪಿಗಳನ್ನು ಪೀಠವು ಈ ಹಿಂದೆ ‘ಕೊಲೆಗಾರರು’ ಎಂದು ಬಣ್ಣಿಸಿದೆ ಎಂದು ತಿಳಿಸಿದ್ದ ಅರ್ಜಿದಾರರು, ಪೀಠದಲ್ಲಿಯ ನ್ಯಾಯಾಧಿಶರು ವಿಚಾರಣೆ ನಡೆಸುವುದನ್ನು ಆಕ್ಷೇಪಿಸಿದ್ದರು.

ಸೆ.28ರಂದು ಮಣಿಪುರ ಪೊಲೀಸರ ಅರ್ಜಿಯನ್ನು ಬೆಂಬಲಿಸಿದ್ದ ಕೇಂದ್ರವು ‘ಕೊಲೆಗಾರರು’ ಹೇಳಿಕೆಗಾಗಿ ಸರ್ವೋಚ್ಚ ನ್ಯಾಯಾಲಯವನ್ನು ಪ್ರಶ್ನಿಸಿತ್ತು. ಇದರಿಂದಾಗಿ ಬಂಡಾಯ ಪೀಡಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಸಿಬ್ಬಂದಿಗಳ ನೈತಿಕ ಸ್ಥೈರ್ಯ ಉಡುಗಿದೆ ಎಂದು ಹೇಳಿತ್ತು.

ಮಣಿಪುರದಲ್ಲಿ ಕಾನೂನು ಬಾಹಿರ ಹತ್ಯೆಗಳ 1,528 ಪ್ರಕರಣಗಳಲ್ಲಿ ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News