ಉತ್ತರ ಕೊರಿಯದ 13 ಕ್ಷಿಪಣಿ ಉಡಾವಕ ನೆಲೆಗಳು ಪತ್ತೆ: ವರದಿ
ವಾಶಿಂಗ್ಟನ್, ನ. 13: ಉತ್ತರ ಕೊರಿಯ ಈವರೆಗೆ ಬಹಿರಂಗಪಡಿಸದಿರುವ 13 ಕ್ಷಿಪಣಿ ಉಡಾವಣಾ ನೆಲೆಗಳನ್ನು ಪತ್ತೆ ಹಚ್ಚಿರುವುದಾಗಿ ನೂತನ ವರದಿಯೊಂದು ತಿಳಿಸಿದೆ.
ಉತ್ತರ ಕೊರಿಯದಾದ್ಯಂತ ಇರುವ 20 ಸಣ್ಣ ಕ್ಷಿಪಣಿ ಉಡಾವಣಾ ನೆಲೆಗಳಲ್ಲಿ ಈ 13 ನೆಲೆಗಳೂ ಸೇರಿವೆ ಎಂದು ವಾಶಿಂಗ್ಟನ್‌ನ ‘ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್‌ನ್ಯಾಶನಲ್ ಸ್ಟಡೀಸ್’ನಲ್ಲಿರುವ ‘ಬಿಯಾಂಡ್ ಪ್ಯಾರಲಲ್’ ಎಂಬ ಗುಂಪು ತಿಳಿಸಿದೆ.
ಈ ನೆಲೆಗಳು ಭೂಗತ ವ್ಯವಸ್ಥೆಗಳನ್ನು ಹೊಂದಿವೆ ಹಾಗೂ ಅಲ್ಲಿ ಚಲಿಸುವ ಉಡಾವಕಗಳಿವೆ ಎಂದು ವರದಿ ತಿಳಿಸಿದೆ. ಈ ಉಡಾವಕಗಳನ್ನು ಕ್ಷಿಪ್ರವಾಗಿ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಬಹುದಾಗಿದೆ ಎಂದಿದೆ.
ಈ ನೆಲೆಗಳನ್ನು ಉಡಾವಣಾ ನೆಲೆಗಳಂತೆ ವಿನ್ಯಾಸಗೊಳಿಸದಿದ್ದರೂ, ಕಿರು ವ್ಯಾಪ್ತಿಯ ಹಾಗೂ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಗಳನ್ನು ಉಡಾಯಿಸಲು ಅವುಗಳನ್ನು ಬಳಸಬಹುದಾಗಿದೆ.
ಉತ್ತರ ಕೊರಿಯದ ಪರಮಾಣು ನಿಶ್ಶಸ್ತ್ರೀಕರಣವನ್ನು ಸಾಧಿಸುವ ಅಮೆರಿಕದ ಯೋಜನೆಯ ಪ್ರಕಾರ, ಇಂಥ ಕ್ಷಿಪಣಿ ನೆಲೆಗಳನ್ನು ಮೊದಲು ಘೋಷಿಸಿ, ಬಳಿಕ ಅವುಗಳನ್ನು ನಾಶಪಡಿಸಬೇಕು. ಕೆಲವು ಗೊತ್ತಿರುವ ಕ್ಷಿಪಣಿ ಉಡಾವಕ ನೆಲೆಗಳು ಮತ್ತು ಪರಮಾಣು ಸ್ಥಾವರಗಳನ್ನು ಉತ್ತರ ಕೊರಿಯ ಈಗಾಗಲೇ ನಾಶಪಡಿಸಿದೆ. ಆದರೆ, ಈ ಕ್ಷಿಪಣಿ ನೆಲೆಗಳು ಈಗಲೂ ಮುಂದುವರಿದಿರುವುದನ್ನು ಗಣನೆಗೆ ತೆಗೆದುಕೊಂಡರೆ, ಅದು ಈ ಹಿಂದೆ ತೆಗೆದುಕೊಂಡಿರುವ ಕ್ರಮಗಳು ಅದರ ಪರಮಾಣು ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ವರದಿ ಹೇಳಿದೆ.