ಶ್ರೀಲಂಕಾ ಸಂಸತ್ತು ವಿಸರ್ಜನೆ ರದ್ದು: ಸುಪ್ರೀಂ ಕೋರ್ಟ್ ತೀರ್ಪು

Update: 2018-11-13 14:50 GMT

ಕೊಲಂಬೊ, ನ. 13: ಶ್ರೀಲಂಕಾದ ಸಂಸತ್ತನ್ನು ವಿಸರ್ಜಿಸುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರ ಆದೇಶವನ್ನು ದೇಶದ ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಪಡಿಸಿದೆ ಹಾಗೂ ಮುಂದಿನ ವರ್ಷ ಮಧ್ಯಂತರ ಚುನಾವಣೆ ನಡೆಸಲು ಮಾಡಲಾಗುತ್ತಿರುವ ಸಿದ್ಧತೆಗಳನ್ನು ನಿಲ್ಲಿಸುವಂತೆ ಆದೇಶಿಸಿದೆ.

ಅಕ್ಟೋಬರ್ 26ರಂದು ದಿಢೀರ್ ಬೆಳವಣಿಗೆಯೊಂದರಲ್ಲಿ, ಅಧ್ಯಕ್ಷ ಸಿರಿಸೇನ ಪ್ರಧಾನಿ ರನಿಲ್ ವಿಕ್ರಮೆಸಿಂಘೆಯನ್ನು ವಜಾಗೊಳಿಸಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ನೇಮಿಸಿದ್ದರು.

ಆದರೆ, ಅಧಿಕಾರದಿಂದ ನಿರ್ಗಮಿಸಲು ವಿಕ್ರಮೆಸಿಂಘೆ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿತ್ತು.

ಅದೂ ಅಲ್ಲದೆ, ಅಧ್ಯಕ್ಷರು 225 ಸದಸ್ಯ ಬಲದ ಸಂಸತ್ತನ್ನು ಅಮಾನತಿನಲ್ಲಿಟ್ಟಿದ್ದರು. ಸಂಸತ್ತಿನಲ್ಲಿ ತಾನು ಬಹುಮತ ಸಾಬೀತುಪಡಿಸುವೆ ಎಂಬುದಾಗಿ ವಿಕ್ರಮೆಸಿಂಘೆ ಪ್ರತಿಪಾದಿಸುತ್ತಾ ಬಂದಿದ್ದರು.

ಸಂಸತ್ತಿನಲ್ಲಿ ಬಲಾಬಲ ಪರೀಕ್ಷೆ ಏರ್ಪಟ್ಟರೆ ತನ್ನ ಸರಕಾರ ಉರುಳುವುದು ಖಚಿತ ಎಂದು ಭಾವಿಸಿದ ಸಿರಿಸೇನ, ಶುಕ್ರವಾರ ಸಂಸತ್ತನ್ನೇ ವಿಸರ್ಜಿಸಿದರು ಹಾಗೂ ಜನವರಿ 5ರಂದು ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಘೋಷಿಸಿದರು.

ಅಧ್ಯಕ್ಷರು ಸಂಸತ್ತನ್ನು ವಿಸರ್ಜಿಸಿರುವುದನ್ನು ಪ್ರಶ್ನಿಸಿ ವಿಕ್ರಮೆಸಿಂಘೆಯ ಪಕ್ಷ ಸುಪ್ರೀಂ ಕೋರ್ಟ್‌ನ ಮೆಟ್ಟಿಲು ಹತ್ತಿದೆ. ಮುಖ್ಯ ನ್ಯಾಯಾಧೀಶ ನಳಿನ್ ಪೆರೇರ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಕಿಕ್ಕಿರಿದ ನ್ಯಾಯಾಲಯದಲ್ಲಿ ಮಂಗಳವಾರ ತನ್ನ ತೀರ್ಪು ಓದಿ ಹೇಳಿತು.

ಸಂಸತ್ತನ್ನು ವಿಸರ್ಜಿಸಿ ಹಾಗೂ ಜನವರಿ 5ರಂದು ಮಧ್ಯಂತರ ಚುನಾವಣೆ ನಿಗದಿಪಡಿಸಿ ಶುಕ್ರವಾರ ಸಿರಿಸೇನ ಹೊರಡಿಸಿದ ಘೋಷಣೆಯನ್ನು ನ್ಯಾಯಾಲಯ ರದ್ದುಗೊಳಿಸಿತು.

ಈ ತೀರ್ಪಿನ ಹಿನ್ನೆಲೆಯಲ್ಲಿ, ಹೊಸದಾಗಿ ನೇಮಕಗೊಂಡಿರುವ ಪ್ರಧಾನಿ ಮಹಿಂದ ರಾಜಪಕ್ಸ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಂಸತ್ತಿನಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News