ಪಟಾಕಿ ಕಾರ್ಖಾನೆ ಮುಚ್ಚುವುದರಿಂದ 16 ಶತಕೋಟಿ ಅನುತ್ಪಾದಕ ಆಸ್ತಿ ಸೃಷ್ಟಿಗೆ ಕಾರಣವಾಗಬಹುದು: ಪಟಾಕಿ ಉದ್ಯಮ

Update: 2018-11-13 15:36 GMT

ಚೆನ್ನೈ, ನ. 13: ಪಟಾಕಿ ಕಾರ್ಖಾನೆಗಳನ್ನು ಮುಚ್ಚುವುದರಿಂದ ಅದನ್ನು ನಂಬಿಕೊಂಡಿರುವ ಸುಮಾರು 8 ಲಕ್ಷ ಕುಟುಂಬಗಳ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಬ್ಯಾಂಕ್‌ಗಳಲ್ಲಿ ಮುಖ್ಯವಾಗಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿ ಸುಮಾರು 16 ಶತಕೋಟಿ ರೂ. ಅನುತ್ಪಾದಕ ಆಸ್ತಿ ಸೃಷ್ಟಿಯಾಗಲಿದೆ. ದೇಶದಲ್ಲಿ ಪರಿಸರ ಸ್ನೇಹಿ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ನಿರ್ಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ವಿರೋಧಿಸಿ ಚೆನ್ನೈಯಿಂದ 550 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಸುಮಾರು 1400 ಪಟಾಕಿ ಕಾರ್ಖಾನೆಗಳು ಸೋಮವಾರದಿಂದ ಬಂದ್ ನಡೆಸಲು ಆರಂಭಿಸಿವೆ. ‘‘ನಾವು ಕಾರ್ಖಾನೆ ನಡೆಸಲು ಬಯಸುತ್ತೇವೆ. ಆದರೆ, ನ್ಯಾಯಾಲಯದ ಆದೇಶದಂತೆ ನಡೆಸಲು ಸಾಧ್ಯವಿಲ್ಲ’’ ಎಂದು ದೇಶಕ್ಕೆ ಶೇ. 95ರಷ್ಟು ಪಟಾಕಿಯನ್ನು ಉತ್ಪಾದಿಸುವ ಇಲ್ಲಿನ ಎಲ್ಲ ಕಾರ್ಖಾನೆಗಳನ್ನು ಪ್ರತಿನಿಧಿಸುವ ಸರ್ವೋಚ್ಛ ಸಂಸ್ಥೆ ತಮಿಳುನಾಡು ಫೈರ್‌ವರ್ಕ್ಸ್ ಆ್ಯಂಡ್ ಅಮೋರ್ಸಸ್ ಮ್ಯಾನುಫ್ಯಾಕ್ಟರರ್ಸ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಇ. ಮರಿಯಪ್ಪನ್ ತಿಳಿಸಿದ್ದಾರೆ.

ಪಟಾಕಿ ಕಾರ್ಖಾನೆಗಳನ್ನು ಮುಚ್ಚುವುದರಿಂದ ಬ್ಯಾಂಕ್‌ಗಳಲ್ಲಿ ಮುಖ್ಯವಾಗಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿ 16 ಶತಕೋಟಿ ರೂ.ನ ಅನುತ್ಪಾದಕ ಆಸ್ತಿ ಸೃಷ್ಟಿಯಾಗಬಹುದು ಎಂದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪಟಾಕಿ ಕಾರ್ಖಾನೆ ನಡೆಸಲು ಸಾಧ್ಯವಿಲ್ಲ. ಪರಿಸರ ಸ್ನೇಹಿ ಪಟಾಕಿಯ ವ್ಯಾಖ್ಯಾನ ಒಂದು ಬಾರಿ ಬದಲಾದರೆ, ಅನಂತರ ನಾವು ಕೆಲಸ ಆರಂಭಿಸಬಹುದು ಎಂದು ಶಿವಕಾಶಿಯ ಅತಿ ಹಳೆಯ ಬ್ರಾಂಡ್ ಸೋನಿ ಫಯರ್ ವರ್ಕ್ಸ್‌ನ ಪಿ. ಗಣೇಶನ್ ಹೇಳಿದ್ದಾರೆ. ಈ ನಡುವೆ ಸಂಘಟನೆ ಪರಿಸರ ಸಚಿವಾಲಯಕ್ಕೆ ಪತ್ರ ಬರೆದಿದೆ ಹಾಗೂ ಪರ್ಯಾಯ ರಾಸಾಯನಿಕ ಸಿಗುವ ವರೆಗೆ ಬೇರಿಯಂ ಉಪ್ಪಿನ ಮೇಲೆ ಹೇರಿದ ನಿಷೇಧ ತೆಗೆಯಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News