ಡಿ.9ರಂದು ಕಣ್ಣೂರು ವಿಮಾನ ನಿಲ್ದಾಣದ ಉದ್ಘಾಟನೆ

Update: 2018-11-13 16:28 GMT

ಕೊಚ್ಚಿ,ನ.13: ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಡಿ.9ರಂದು ಬೆಳಿಗ್ಗೆ ಉದ್ಘಾಟಿಸಲಿದ್ದಾರೆ. ಇದರ ಬೆನ್ನಲ್ಲೇ 10 ಗಂಟೆಗೆ ಮೊದಲ ವಿಮಾನಯಾನವನ್ನು ಅಬುಧಾಬಿಗೆ ನಿಗದಿಗೊಳಿಸಲಾಗಿದ್ದು,ಏರ್ ಇಂಡಿಯಾ ಎಕ್ಸ್ ಪ್ರೆಸ್ ಈ ಯಾನವನ್ನು ನಿರ್ವಹಿಸಲಿದೆ. ಡಿ.9ರಿಂದ ಕಣ್ಣೂರಿನಿಂದ ದೋಹಾಕ್ಕೆ ವಿಮಾನಯಾನಗಳು ಆರಂಭಗೊಳ್ಳಲಿವೆ.

ಕೆ ಐಎಎಲ್ ಕೇರಳದ ನಾಲ್ಕನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಕೊಝಿಕೋಡ್,ತಿರುವನಂತಪುರಂ ಮತ್ತು ಕೊಚ್ಚಿ ಇತರ ಮೂರು ವಿಮಾನ ನಿಲ್ದಾಣಗಳಾಗಿವೆ. ಕಣ್ಣೂರು ವಿಮಾನ ನಿಲ್ದಾಣದಿಂದ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹಾಲಿ ಈ ಭಾಗದ ಜನರು ಪ್ರಯಾಣಕ್ಕಾಗಿ ಕೊಝಿಕೋಡ್ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ಅವಲಂಬಿಸಿದ್ದಾರೆ. ಕಣ್ಣೂರು ನಗರದಿಂದ 25 ಕಿ.ಮೀ.ದೂರದ ಮಟ್ಟನ್ನೂರಿನ ವಿಮಾನ ನಿಲ್ದಾಣದ ಮುಖ್ಯ ಪ್ಯಾಸೆಂಜರ್ ಟರ್ಮಿನಲ್‌ನಲ್ಲಿ ಡಿ.9ರಂದು ಬೆಳಿಗ್ಗೆ ಒಂಭತ್ತು ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಯನ್ನು ಮೊದಲು ನಿಗದಿಗೊಳಿಸಲಾಗಿತ್ತಾದರೂ,ಈಗ ಕೇಂದ್ರ ನಾಗರಿಕ ವಾಯುಯಾನ ಸಚಿವ ಸುರೇಶ ಪ್ರಭು ಅವರು ಉದ್ಘಾಟನೆಯಲ್ಲಿ ಪಿಣರಾಯಿ ಅವರೊಂದಿಗೆ ಕೈಜೋಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News