ವಾಯು ಮಾಲಿನ್ಯದಿಂದ ಪಾರಾಗಲು ವಿದೇಶಿ ಬಾಕ್ಸರ್ಗಳ ಪರದಾಟ

Update: 2018-11-13 18:15 GMT

ಹೊಸದಿಲ್ಲಿ, ನ.13: ಗುರುವಾರ ಆರಂಭ ವಾಗಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಮಹಿಳಾ ಬಾಕ್ಸರ್‌ಗಳು ತರಬೇತಿ ಆರಂಭಿಸಿದ್ದಾರೆ. ದಿಲ್ಲಿಯಲ್ಲಿ ಸುರಕ್ಷತೆಯ ಮಿತಿಗಿಂತ ಹಲವುಪಟ್ಟು ಏರುತ್ತಿರುವ ವಾಯು ಮಾಲಿನ್ಯದಿಂದ ಪಾರಾಗಲು ಆಟಗಾರ್ತಿಯರು ಮುಖ ಹಾಗೂ ತಲೆಗೆ ವಸ್ತ್ರ ಸುತ್ತಿಕೊಳ್ಳುತ್ತಿದ್ದಾರೆ.

ಎಐಬಿಎ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನ.15 ರಿಂದ 24ರ ತನಕ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸಲಿರುವ ತಂಡಗಳು ವಾಹನ ಹಾಗೂ ಕೈಗಾರಿಕೆಗಳು ಉಗುಳುವ ಹೊಗೆಯಿಂದ ಉಂಟಾದ ವಾಯು ಮಾಲಿನ್ಯದ ಬಗ್ಗೆ ದೂರು ಸಲ್ಲಿಸಿವೆ. ‘‘ಕುಟುಂಬಸ್ಥರು ನನ್ನ ಬಗ್ಗೆ ಚಿಂತಿತರಾಗಿದ್ದಾರೆ. ಇದು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದೆ. ಇಲ್ಲಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ. ನಾನು ಸ್ಕಾರ್ಫ್ ಧರಿಸಿ ಅಭ್ಯಾಸ ನಡೆಸುತ್ತಿದ್ದೇನೆ’’ ಎಂದು 2014ರ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತ ಬಲ್ಗೇರಿಯ ಬಾಕ್ಸರ್ ಸ್ಟಾನಿಮಿರಾ ಪೆಟ್ರೋವಾ ಹೇಳಿದ್ದಾರೆ.

ಯುರೋಪಿನ ಏಳು ಬಾಕ್ಸರ್‌ಗಳು ವಾಯು ಮಾಲಿನ್ಯದಿಂದಾಗಿ ಕಣ್ಣಿಗೆ ಕಿರಿಕಿರಿಯಾಗುತ್ತಿದೆ ಎಂದು ದೂರಿದ್ದಾರೆ. ನಾವು ಕೆಟ್ಟ ಗಾಳಿಯ ಬಗ್ಗೆ ದೂರು ನೀಡಿದ್ದರೂ ಆಯೋಜಕರು ನಮಗೆ ಯಾವುದೇ ಸುರಕ್ಷತಾ ವಸ್ತುಗಳನ್ನು ನೀಡಿಲ್ಲ ಎಂದು ಆಟಗಾರ್ತಿಯರ ಕೋಚ್‌ಗಳು ಹೇಳುತ್ತಿದ್ದಾರೆ.

‘‘ಟೂರ್ನಮೆಂಟ್‌ನ್ನು ದಿಲ್ಲಿಯಿಂದ ಹೊರಗೆ ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದೆವು. ಆದರೆ ನಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ. ಇಲ್ಲಿನ ಗಾಳಿ ಚೆನ್ನಾಗಿಲ್ಲ. ಬಾಕ್ಸರ್‌ಗಳ ಹೆತ್ತವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೊರಗಡೆ ಹೆಚ್ಚು ಸಮಯ ಇರದಂತೆ ನಮ್ಮ ಆಟಗಾರ್ತಿಯರಿಗೆ ನಿರ್ಬಂಧ ವಿಧಿಸಿದ್ದೇವೆ’’ ಎಂದು ಫ್ರಾನ್ಸ್ ಕೋಚ್ ಆ್ಯಂಥೊನಿ ವೆನಿಯಂಟ್ ಹೇಳಿದ್ದಾರೆ.

ತರಬೇತಿ ಸ್ಥಳಗಳು, ಬಾಕ್ಸಿಂಗ್ ಸ್ಥಳಗಳು ಹಾಗೂ ಹೊಟೇಲ್‌ಗಳ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟದತ್ತ ಗಮನ ನೀಡುತ್ತಿದ್ದೇವೆ. ದಿಲ್ಲಿಯಿಂದ ಬೇರೆಡೆಗೆ ಟೂರ್ನಿಯನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ದಿಲ್ಲಿ ದೇಶದಲ್ಲಿ ಉತ್ತಮ ಕ್ರೀಡಾ ಸೌರ್ಕಯಗಳನ್ನು ಹೊಂದಿದೆ’’ ಎಂದು ಭಾರತದ ಬಾಕ್ಸಿಂಗ್ ಸಂಘಟನೆಯ ಕಾರ್ಯದರ್ಶಿ ಜಾಯ್ ಕೊವ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News