×
Ad

ರಣಜಿ ಟ್ರೋಫಿ: ವಿದರ್ಭ ವಿರುದ್ಧ ಕರ್ನಾಟಕ 208/5

Update: 2018-11-13 23:48 IST

ನಾಗ್ಪುರ, ನ.13: ಆರಂಭಿಕ ಆಟಗಾರ ದೇಗ ನಿಶ್ಚಲ್(ಔಟಾಗದೆ 66,209 ಎಸೆತ)ತಾಳ್ಮೆಯ ಅರ್ಧಶತಕ ಹಾಗೂ ಶರತ್(ಔಟಾಗದೆ 46)ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿಯ ಎರಡನೇ ದಿನದಾಟದಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ.

ವಿದರ್ಭ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 307 ರನ್‌ಗೆ ನಿಯಂತ್ರಿಸಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಆರ್.ಸಮರ್ಥ್(1)ಇನಿಂಗ್ಸ್‌ನ 2ನೇ ಎಸೆತದಲ್ಲಿ ಸರ್ವಾಟೆಗೆ ವಿಕೆಟ್ ಒಪ್ಪಿಸಿದರು. ಸಿದ್ದಾರ್ಥ್(19)ಹಾಗೂ ಕರಣ್ ನಾಯರ್(15) ಬೇಗನೆ ಔಟಾದಾಗ ಕರ್ನಾಟಕದ ಸ್ಕೋರ್ 3 ವಿಕೆಟ್‌ಗೆ 54.

ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ(20) ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಇನ್ನೋರ್ವ ಆಲ್‌ರೌಂಡರ್ ಶ್ರೇಯಸ್ ಗೋಪಾಲ್(30) ಅವರೊಂದಿಗೆ ಕೈಜೋಡಿಸಿದ ನಿಶ್ಚಲ್ 5ನೇ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 149ಕ್ಕೆ ತಲುಪಿಸಿದರು.

ಗೋಪಾಲ್ 61 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 30 ರನ್ ಗಳಿಸಿ ನಲ್ಕಾಂಡೆಗೆ ವಿಕೆಟ್ ಒಪ್ಪಿಸಿದರು. ಬಿಆರ್ ಶರತ್(ಔಟಾಗದೆ 46, 76 ಎಸೆತ, 9 ಬೌಂಡರಿ)ಅವರೊಂದಿಗೆ 6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 57 ರನ್ ಸೇರಿಸಿದ ನಿಶ್ಚಲ್ ಬ್ಯಾಟಿಂಗನ್ನು ಮೂರನೇ ದಿನಕ್ಕೆ ಕಾಯ್ದಿರಿಸಿದರು. ಹಾಲಿ ಚಾಂಪಿಯನ್ ವಿದರ್ಭದ ಪರ ಸರ್ವಾಟೆ(2-44)ಹಾಗೂ ವಖಾರೆ(2-55)ತಲಾ ಎರಡು ವಿಕೆಟ್ ಪಡೆದರು.

<ವಿದರ್ಭ 307/10: ಇದಕ್ಕೆ ಮೊದಲು 8 ವಿಕೆಟ್‌ಗಳ ನಷ್ಟಕ್ಕೆ 245 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ವಿದರ್ಭ ನಿನ್ನೆಯ ಮೊತ್ತಕ್ಕೆ 62 ರನ್ ಸೇರಿಸುವಷ್ಟರಲ್ಲಿ ಉಳಿದೆರಡು ವಿಕೆಟ್ ಕಳೆದುಕೊಂಡಿತು.

37 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಎಸ್‌ಬಿ ವಾಘ್ ನಿನ್ನೆಯ ಮೊತ್ತಕ್ಕೆ ಸರಿಯಾಗಿ 20 ರನ್ ಸೇರಿಸಿ ಕರ್ನಾಟಕದ ನಾಯಕ ವಿನಯಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಮಂಗಳವಾರ 7 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ್ದ ವಖಾರೆ ಔಟಾಗದೆ 35 ರನ್(99ಎಸೆತ, 4ಬೌಂಡರಿ)ಗಳಿಸಿದರು.

100ನೇ ರಣಜಿ ಪಂದ್ಯವನ್ನಾಡುತ್ತಿರುವ ವಿನಯ್ ಬಿಗಿ ಬೌಲಿಂಗ್ ಮಾಡಿದ್ದರೂ 51 ರನ್‌ಗೆ 2 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಇನ್ನೋರ್ವ ವೇಗಿ ಅಭಿಮನ್ಯು ಮಿಥುನ್(3-53) ಹಾಗೂ ಎಡಗೈ ಸ್ಪಿನ್ನರ್ ಜಗದೀಶ್ ಸುಚಿತ್(4-33) ಏಳು ವಿಕೆಟ್‌ಗಳನ್ನು ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್

►ವಿದರ್ಭ ಮೊದಲ ಇನಿಂಗ್ಸ್: 102.2 ಓವರ್‌ಗಳಲ್ಲಿ 307/10

(ಗಣೇಶ್ ಸತೀಶ್ 57,ವಾಘ್ 57, ವಖಾರೆ ಔಟಾಗದೆ 35, ಸುಚಿತ್ 4-33, ಮಿಥುನ್ 3-53, ವಿನಯಕುಮಾರ್ 2-51)

►ಕರ್ನಾಟಕ ಮೊದಲ ಇನಿಂಗ್ಸ್: 72 ಓವರ್‌ಗಳಲ್ಲಿ 208/5

(ನಿಶ್ಚಲ್ ಔಟಾಗದೆ 66,ಶರತ್ ಔಟಾಗದೆ 46, ಎಸ್,ಗೋಪಾಲ್ 30, ಸರ್ವಾಟೆ 2-44,ವಖಾರೆ 2-55)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News