×
Ad

ಝಿಂಬಾಬ್ವೆ 304 ರನ್‌ಗೆ ಆಲೌಟ್

Update: 2018-11-13 23:49 IST

2ನೇ ಟೆಸ್ಟ್

ಢಾಕಾ, ನ.13: ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಸತತ ಮೂರನೇ ಬಾರಿ ಕಬಳಿಸಿದ 5 ವಿಕೆಟ್ ಗೊಂಚಲು ನೆರವಿನಿಂದ ಬಾಂಗ್ಲಾದೇಶ ತಂಡ ಮಂಗಳವಾರ ಇಲ್ಲಿ ನಡೆದ ಎರಡನೇ ಟೆಸ್ಟ್ ನ 3ನೇ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ.

ಬ್ರೆಂಡನ್ ಟೇಲರ್ ಶತಕ ಬಾರಿಸಿದ ಹೊರತಾಗಿಯೂ ಝಿಂಬಾಬ್ವೆ ತಂಡ ಮೊದಲ ಇನಿಂಗ್ಸ್‌ನಲ್ಲಿ 304 ರನ್‌ಗೆ ಆಲೌಟಾಯಿತು. ಆತಿಥೇಯ ಬಾಂಗ್ಲಾಕ್ಕೆ 218 ರನ್ ಮುನ್ನಡೆ ಬಿಟ್ಟುಕೊಟ್ಟಿತು. ಬಾಂಗ್ಲಾದೇಶ ಮೊದಲ ಇನಿಂಗ್ಸನಲ್ಲಿ 7 ವಿಕೆಟ್‌ಗೆ 522 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಮೊದಲ ಟೆಸ್ಟ್ ಪಂದ್ಯವನ್ನು 151 ರನ್‌ಗಳಿಂದ ಗೆದ್ದುಕೊಂಡಿರುವ ಝಿಂಬಾಬ್ವೆಗೆ 7 ವರ್ಷಗಳ ಬಳಿಕ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಜಯಿಸಲು ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅಗತ್ಯವಿದೆ.

ರೆಗಿಸ್ ಚಕಬ್ವಾ(10)ವಿಕೆಟ್ ಉರುಳಿಸಿದ ತೈಜುಲ್ 107 ರನ್‌ಗೆ ಒಟ್ಟು 5 ವಿಕೆಟ್ ಪಡೆದರು. ಝಿಂಬಾಬ್ವೆ ಫಾಲೋ-ಆನ್‌ನಿಂದ ಪಾರಾಗಲು 19 ರನ್ ಅಗತ್ಯವಿದ್ದಾಗ ತನ್ನ ಹೋರಾಟ ಮುಗಿಸಿತು. ಕೊನೆಯ ಆಟಗಾರ ಟೆಂಡೈ ಚಟಾರ ಗಾಯದ ಸಮಸ್ಯೆಯಿಂದಾಗಿ ಬ್ಯಾಟಿಂಗ್‌ಗೆ ಇಳಿಯಲಿಲ್ಲ.

ಝಿಂಬಾಬ್ವೆ ಒಂದು ಹಂತದಲ್ಲಿ 131 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. ಆಗ ಟೇಲರ್ (110,144 ಎಸೆತ, 10 ಬೌಂಡರಿ) ಹಾಗೂ ಜೀವನಶ್ರೇಷ್ಠ 83 ರನ್ ಕಲೆ ಹಾಕಿದ್ದ ಪೀಟರ್ ಮೂರ್(144 ಎಸೆತ, 12 ಬೌಂಡರಿ, 1 ಸಿಕ್ಸರ್) 194 ಎಸೆತಗಳಲ್ಲಿ 110 ರನ್ ಜೊತೆಯಾಟ ನಡೆಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.

ಟೇಲರ್ ಹಾಗೂ ಮೂರ್ 6ನೇ ವಿಕೆಟ್‌ಗೆ 139 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ವೇಗಿ ಆರಿಫುಲ್ ಹಕ್ ಬೇರ್ಪಡಿಸಿದರು.

75 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಮೂರ್ 81 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ ಟೆಸ್ಟ್ ನಲ್ಲಿ 5ನೇ ಬಾರಿ 50 ರನ್ ಪೂರೈಸಿದರು. ಸರಣಿಯಲ್ಲಿ ಸತತ ಎರಡನೇ ಬಾರಿ ಅರ್ಧಶತಕ ಸಿಡಿಸಿದರು.

ಇದಕ್ಕೆ ಮೊದಲು ಝಿಂಬಾಬ್ವೆ 1 ವಿಕೆಟ್ ನಷ್ಟಕ್ಕೆ 25 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. 128 ಎಸೆತಗಳಲ್ಲಿ 53 ರನ್ ಗಳಿಸಿದ ಬ್ರಿಯಾನ್ ಚಾರಿ ಝಿಂಬಾಬ್ವೆಗೆ ಉತ್ತಮ ಆರಂಭ ನೀಡಿದರು.

ತೈಜುಲ್ ನೈಟ್ ವಾಚ್‌ಮ್ಯಾನ್ ಡೊನಾಲ್ಡ್ ಟಿರಿಪಾನೊರನ್ನು 8 ರನ್‌ಗೆ ಔಟ್ ಮಾಡಿದರು. ಆಗ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ಬ್ರಿಯಾನ್ ಚಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ 2ನೇ ಬಾರಿ ಅರ್ಧಶತಕ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News