ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 2ನೇ ದ್ವಿಶತಕದ ಸಾಧನೆಗೆ ನಾಲ್ಕು ವರ್ಷ

Update: 2018-11-13 18:22 GMT

ಕೋಲ್ಕತಾ, ನ.13: ಟೀಮ್ ಇಂಡಿಯಾದ ಅಗ್ರ ಸರದಿಯ ದಾಂಡಿಗ ರೋಹಿತ್ ಶರ್ಮಾ ಗಾಯದ ಕಾರಣದಿಂದಾಗಿ ಹತ್ತು ವಾರಗಳ ಬಳಿಕ ಏಕದಿನ ಕ್ರಿಕೆಟ್‌ಗೆ ವಾಪಸಾಗಿ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವದಾಖಲೆಯ ಎರಡನೆ ದ್ವಿಶತಕ ದಾಖಲಿಸಿದ್ದ ಸಾಧನೆಗೆ ನವೆಂಬರ್ 13ಕ್ಕೆ ನಾಲ್ಕು ವರ್ಷಗಳು ಸಂದಿವೆ. 150ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನ.13, 2014ರಂದು ಶ್ರೀಲಂಕಾ ವಿರುದ್ಧ ನಾಲ್ಕನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆರಂಭಿಕ ದಾಂಡಿಗನಾಗಿ ಅಜಿಂಕ್ಯ ರಹಾನೆ ಜೊತೆ ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮ ಲಂಕಾದ ಬೌಲರ್‌ಗಳ ದಾಳಿಯನ್ನು ಪುಡಿಗಟ್ಟಿದ್ದರು. 173 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 33 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಲ್ಲಿ 264 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ವೈಯಕ್ತಿಕ ಮೊತ್ತದ ದಾಖಲೆಯನ್ನು ತನ್ನ ಹೆಸರಲ್ಲಿ ಬರೆದರು.

ಮೂರು ಜೀವದಾನ ಪಡೆದು ಲಂಕಾದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದ ರೋಹಿತ್ ಅವರು ಕುಲಶೇಖರ ಅವರ ಅಂತಿಮ ಓವರ್‌ನ ಅಂತಿಮ ಎಸೆತದಲ್ಲಿ ಜಯವರ್ಧನೆಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಅಷ್ಟರ ಹೊತ್ತಿಗೆ ಟೀಮ್ ಇಂಡಿಯಾದ ಸ್ಕೋರ್ 404ಕ್ಕೆ ತಲುಪಿತ್ತು.

  

ರೋಹಿತ್ ಶರ್ಮಾ 4 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದರು ರೋಹಿತ್ ಶರ್ಮಾ ತನ್ನ ಹೆಸರಲ್ಲಿ ಎರಡನೇ ದ್ವಿಶತಕ ದಾಖಲಿಸಿದ್ದರು. ಶರ್ಮಾ ಶತಕ ತಲುಪುವ ಸ್ವಲ್ಪ ಹೊತ್ತಿನ ಮೊದಲು ಸ್ಪೋಟಕ ಬ್ಯಾಟಿಂಗ್‌ಗೆ ಒತ್ತು ನೀಡಿದ್ದರು. 29ನೆ ಓವರ್ ಮುಕ್ತಾಯಗೊಂಡಾಗ ಶರ್ಮ ಸ್ಕೋರ್ 78 ಆಗಿತ್ತು. 30ನೇ ಓವರ್‌ನಲ್ಲಿ ಕುಲಶೇಖರ್ ಓವರ್‌ನ 4 ಎಸೆತಗಳಲ್ಲಿ 15 ರನ್(4+6+4+1) ರನ್ ಕಬಳಿಸಿ ಸ್ಕೋರ್‌ನ್ನು 93ಕ್ಕೆ ಏರಿಸಿದ್ದರು.

ರೋಹಿತ್ ಶರ್ಮಾ 31.1ನೇ ಓವರ್‌ನಲ್ಲಿ ಶಮಿಂದಾ ಎರಂಗ ಅವರ ಎಸೆತದಲ್ಲಿ 1 ರನ್ ಗಳಿಸಿ 5ನೇ ಶತಕ ಪೂರೈಸಿದ್ದರು. 100 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅವರು ಶತಕ ಗಳಿಸಿದ್ದರು.

►ದ್ವಿತೀಯ ದ್ವಿಶತಕ: ರೋಹಿತ್ ಶರ್ಮ 45.3ನೇ ಓವರ್‌ನಲ್ಲಿ ಕುಲಶೇಖರ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಬಾರಿ ದ್ವಿಶತಕ ದಾಖಲಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದರು.151 ಎಸೆತಗಳಲ್ಲಿ 25 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಲ್ಲಿ ಶರ್ಮಾ ದ್ವಿಶತಕ ಗಳಿಸಿದ್ದರು. ರೋಹಿತ್ ಶರ್ಮಾ ದ್ವಿಶತಕ ಗಳಿಸಿದ ಬೆನ್ನಲ್ಲೆ ಇನ್ನೊಂದು ಜೀವದಾನ ಪಡೆದರು. ಕುಲಶೇಖರ ಓವರ್‌ನಲ್ಲಿ ಪ್ರಸನ್ನ ಜೀವದಾನ ನೀಡಿದರು. ಎರಂಗ ಎಸೆತದಲ್ಲಿ ಬೌಂಡರಿ ಬಾರಿಸಿ ಸ್ಕೋರ್‌ನ್ನು 210ಕ್ಕೆ ತಲುಪಿಸಿ ತನ್ನ ಹಿಂದಿನ ದಾಖಲೆಯನ್ನು ಉತ್ತಮಪಡಿಸಿದ್ದರು.

48ನೇ ಓವರ್‌ನಲ್ಲಿ 19(4+1+4+4+6) ಮತ್ತು 49ನೇ ಓವರ್‌ನಲ್ಲಿ 12 ರನ್(4+1+6+1) ಗಳಿಸಿ ತನ್ನ ಸ್ಕೋರ್‌ನ್ನು 258ಕ್ಕೆ ಏರಿಸಿದರು.ಅಂತಿಮ ಓವರ್‌ನಲ್ಲಿ 6 ರನ್ ಗಳಿಸಿದ ರೋಹಿತ್ ಶರ್ಮ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸುವ ಯತ್ನದಲ್ಲಿ ಎಡವಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News