ಯೆನೆಪೊಯ ಸ್ಥಾಪಕರ ದಿನಾಚರಣೆ, ಶಿಕ್ಷಕ ಪ್ರಶಸ್ತಿ ಪ್ರದಾನ

Update: 2018-11-14 12:51 GMT

ಮಂಗಳೂರು, ನ.14: ಯೆನೆಪೊಯ ಸಂಸ್ಥೆಯ ಸ್ಥಾಪಕರ ದಿನಾಚರಣೆ ಮತ್ತು ಯೆನೆಪೊಯ ಶಿಕ್ಷಕ ಪ್ರಶಸ್ತಿ-2018 ಪ್ರದಾನ ಕಾರ್ಯಕ್ರಮವು ನಗರದ ಜಪ್ಪಿನಮೊಗರಿನಲ್ಲಿರುವ ಯೆನೆಪೊಯ ಶಾಲೆ ಮತ್ತು ಯೆನೆಪೊಯ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಸುರತ್ಕಲ್ ಎನ್‌ಐಟಿಕೆ ನಿರ್ದೇಶಕ ಪ್ರೊ.ಕರಣಂ ಉಮಾಮಹೇಶ್ವರ ರಾವ್, ಸಮಾಜದಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿದೆ. ಜಗತ್ತು ಇಂದು ಮೊಬೈಲ್‌ಮಯವಾಗಿದೆ. ಎಲ್ಲವೂ ಸ್ಮಾರ್ಟ್ ಆಗುತ್ತಿದೆ. ಕಾಲ ಬದಲಾಗುತ್ತಿದ್ದಂತೆಯೇ ಶಿಕ್ಷಕ ಮತ್ತು ವಿದ್ಯಾರ್ಥಿ ಕೂಡಾ ಅದಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ. ಶಿಕ್ಷಕ ಶಿಕ್ಷಣದ ಪದವಿ ಪಡೆದ ತಕ್ಷಣ ಕಲಿಕೆ ಅಥವಾ ಅಧ್ಯಯನಕ್ಕೆ ತೆರೆ ಎಳೆಯಬೇಕಿಲ್ಲ. ಸಮಾಜಕ್ಕೆ ಪ್ರಯೋಜನಕಾರಿಯಾಗುವಂತಹ ಸೇವೆಯನ್ನು ಮಾಡಬೇಕಿದೆ ಎಂದರು.

ಮನುಷ್ಯನಿಗೆ ಮಾನವೀಯತೆ ಮುಖ್ಯ. ಮನುಷ್ಯತ್ವವಿಲ್ಲದ, ಮಾನವೀಯತೆಯಿಲ್ಲದ ಬದುಕು ಹಸನಾಗದು. ಬದುಕಿನಲ್ಲಿ ನಿರ್ದಿಷ್ಟ ಗುರಿ ಇದ್ದವರಿಗೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ‘ಮುಂದೇನು?’ ಎಂಬುದರ ಬಗ್ಗೆ ಆಯ್ಕೆ ಮಾಡುವ ವಿಶಾಲ ಸ್ವಾತಂತ್ರವನ್ನು ಬಳಸಿಕೊಂಡು ಸಾಧಿಸಲು ಮುನ್ನುಗ್ಗಬೇಕಿದೆ ಎಂದ ಪ್ರೊ.ಕರಣಂ ಉಮಾಮಹೇಶ್ವರ ರಾವ್, 8 ವರ್ಷವಾದರೂ ಪಂಪ್‌ವೆಲ್‌ನ ಓವರ್‌ಬ್ರಿಡ್ಜ್ ಮೇಲಕ್ಕೆತ್ತಲಾಗದ ಇಂಜಿನಿಯರ್‌ಗಳು, ರೋಗಿಗಳ ಬಗ್ಗೆ ಕರುಣೆ ಇಲ್ಲದ ವೈದ್ಯರನ್ನು ಸಮಾಜಕ್ಕೆ ಅರ್ಪಿಸುವ ಶಿಕ್ಷಕರು ನಾವಾಗಬಾರದು ಎಂದರು.

ಯೆನೆಪೊಯ ಗ್ರೂಪ್‌ನ ನಿರ್ದೇಶಕ ಯೆನೆಪೊಯ ಅಬ್ದುಲ್ಲಾ ಜಾವೇದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಯೆನೆಪೊಯ ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಮತ್ತವರ ಪತ್ನಿ ನಸ್ರೀನಾ ಅಬ್ದುಲ್ಲಾ, ಯೆನೆಪೊಯ ವಿವಿ ರಿಜಿಸ್ಟ್ರಾರ್ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ, ಯೆನೆಪೊಯ ವಿವಿ ಉಪಕುಲಪತಿ ಡಾ.ಸಿ.ವಿ.ರಘುವೀರ್, ಯೆನೆಪೊಯ ಸ್ಕೂಲ್‌ನ ಕ್ಯಾಂಪಸ್ ನಿರ್ದೇಶಕಿ ಮಿಸ್ರಿಯಾ ಜಾವೇದ್, ಕಣ್ಣೂರು ಮತ್ತು ಕಲ್ಲಿಕೋಟೆ ವಿವಿ ವಿಶ್ರಾಂತ ಉಪಕುಲಪತಿ ಪ್ರೊ.ಅಬ್ದುಲ್ ರಹ್ಮಾನ್, ಡಾ.ಅರುಣ್ ಭಾಗವತ್, ಡಾ.ಕೆ.ಕೆ.ಆಚಾರ್, ಪುರುಷೋತ್ತಮ್ ಉಪಸ್ಥಿತರಿದ್ದರು.

ಯೆನೆಪೊಯ ಶಾಲೆ ಮತ್ತು ಪ.ಪೂ. ಕಾಲೇಜಿನ ಪ್ರಾಂಶುಪಾಲ ಜೋಸೆಫ್ ಮೆಚಿರತ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಮ್ನಾ ವಂದಿಸಿದರು.

*ಪ್ರಶಸ್ತಿ ಪ್ರದಾನ: ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಕಾವಳಪಡೂರು ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶೇಖ್ ಆದಂ ಸಾಹೇಬ್ ಮತ್ತು ಅನಂತಾಡಿಯ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ದೊಡ್ಡ ಕೆಂಪಯ್ಯರಿಗೆ ತಲಾ 10 ಸಾವಿರ ರೂ. ನಗದು, ಸ್ಮರಣಿಕೆಯೊಂದಿಗೆ ಯೆನೆಪೊಯ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

*ಯೆನೆಪೊಯ ಸಂಸ್ಥೆಯ ಸ್ಥಾಪಕ ದಿ. ಅಲ್ಹಾಜ್ ಯೆನೆಪೊಯ ಮೊಯ್ದಿನ್ ಕುಂಞಿ ಸ್ಮಾರಕ ಉಪನ್ಯಾಸ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News