ರಾಜಕೀಯ ಸಂಘರ್ಷಕ್ಕೆ ಕಾರಣವಾದ ಬಂಟ್ವಾಳ 'ಇಂದಿರಾ ಕ್ಯಾಂಟೀನ್' : ಪ್ರತಿಭಟನೆ

Update: 2018-11-14 14:20 GMT

ಬಂಟ್ವಾಳ, ನ. 14: ಬಂಟ್ವಾಳ ತಾಲೂಕಿನ ಕೇಂದ್ರ ಬಿಂದುವಾದ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಪಕ್ಕದಲ್ಲಿ ಇನ್ನೂ ಲೋಕಾರ್ಪಣೆಯಾಗದ ಇಂದಿರಾ ಕ್ಯಾಂಟೀನ್‍ಗೆ ಕಂಪೌಂಡ್ ನಿರ್ಮಿಸುವ ವಿಚಾರ ಬುಧವಾರವೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಬಹಿರಂಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಎರಡೂ ಪಕ್ಷಗಳಿಂದ ಪರಸ್ಪರ ಪ್ರತಿಭಟನೆ ಹಾಗೂ ಧರಣಿ ನಡೆಯಿತು.

ಬೆಳಗ್ಗೆ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ, ಸಂಜೆ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಧರಣಿ ನಡೆಯಿತು. ತದನಂತರ ಎರಡೂ ಗುಂಪುಗಳ ನಡುವೆ ಸಂಘರ್ಷವೇರ್ಪಡುವ ಸ್ಥಿತಿ ನಿರ್ಮಾಣವಾಯಿತಾದರೂ ಬಂಟ್ವಾಳ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.

ಸಂಜೆ ನಡೆದ ಮಾತುಕತೆಯ ಬಳಿಕ ಸಮಸ್ಯೆ ಇತ್ಯರ್ಥಕ್ಕೆ ಎರಡು ದಿನಗಳ ಕಾಲಾವಕಾಶವನ್ನು ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಕೋರಿದ್ದು, ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಘಟನೆ

ಬಿ.ಸಿ.ರೋಡ್ ಮಿನಿ ವಿಧಾನಸೌಧದ ಪಕ್ಕ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದ್ದು, ಇದಕ್ಕೆ ಕಂಪೌಂಡ್ ನಿರ್ಮಿಸುವ ಸಂದರ್ಭ ರಸ್ತೆಯನ್ನು ಅತಿಕ್ರಮಿಸಲಾ ಗಿದೆ ಎಂದು ಆರೋಪಿಸಿ ಪುರಸಭೆ ಸದಸ್ಯ ಎ.ಗೋವಿಂದ ಪ್ರಭು ನೇತೃತ್ವದಲ್ಲಿ ಕಳೆದ ವಾರ ಪ್ರತಿರೋಧ ವ್ಯಕ್ತವಾಗಿದ್ದು, ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಅವರೂ ಈ ಕುರಿತು ಆಕ್ಷೇಪ ಸಲ್ಲಿಸಿದ್ದರು. ಮಂಗಳವಾರ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸ್ಥಳ ಪರಿಶೀಲನೆ ನಡೆಸಿದ್ದು, ಈ ಸಂದರ್ಭ ಸೂಕ್ತ ದಾಖಲೆಗಳನ್ನು ಗಮನಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದರು.

ಕಾಮಗಾರಿಗೆ ಮತ್ತೆ ಅಡ್ಡಿ

ಬುಧವಾರ ಬೆಳಗ್ಗಿನಿಂದಲೇ ಕ್ಯಾಂಟೀನ್ ಆವರಣದಲ್ಲಿ ಬ್ಯಾರಿಕೇಡ್ ಹಾಕಿ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸದಂತೆ ಪೊಲೀಸರು ಪಹರೆ ನಿಯೋಜಿಸಲಾ ಗಿತ್ತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪುರಸಭೆ ಸದಸ್ಯ ಗೋವಿಂದ ಪ್ರಭು, ವಿಷಯ ಇತ್ಯರ್ಥವಾಗದೆ ಕೆಲಸ ನಿರ್ವಹಿಸಬಾರದು ಎಂದು ಪಟ್ಟುಹಿಡಿದು, ಇದರ ಎದುರು ತಾನೂ ಕಟ್ಟಡ ನಿರ್ಮಿಸುತ್ತೇನೆ ಅದಕ್ಕೇನು ಮಾಡುವಿರಿ ಎಂದು ಪ್ರಶ್ನಿಸಿದರು.ಕೆಲ ಹೊತ್ತಿನಲ್ಲಿ ಶಾಸಕ ರಾಜೇಶ್ ನಾಯಕ್ ಸಹಿತ ಬಿಜೆಪಿ ನಾಯಕರು ಆಗಮಿಸಿ ಪ್ರತಿಭಟನೆ ಕಾವು ಏರಿಸಿದರು.

ಈ ಸಂದರ್ಭ ಎಎಸ್ಪಿ ಋಷಿಕೇಶ್ ಸೋನಾವಣೆ, ತಹಶೀಲ್ದಾರ್ ಪುರಂದರ ಹೆಗ್ಡೆ, ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕ, ತಾನು ಇಂದಿರಾ ಕ್ಯಾಂಟೀನ್ ಆರಂಭಕ್ಕೆ ವಿರೋಧವಿಲ್ಲ. ಆದರೆ ಕಂಪೌಂಡ್ ನಿರ್ಮಿಸುವಾಗ ಸ್ಥಳ ಅತಿಕ್ರಮಿಸಬಾರದು ಎಂದರು. ಸ್ಥಳದಲ್ಲೇ ಕಂಪೌಂಡ್ ನಿರ್ಮಿಸು ವುದಿಲ್ಲ ಎಂದು ಆಶ್ವಾಸನೆ ನೀಡಬೇಕು, ತಾನು ಯಾವುದೇ ಅಕ್ರಮ ಅತಿಕ್ರಮಣ ನಿರ್ಮಾಣವನ್ನೂ ಬೆಂಬಲಿಸುವುದಿಲ್ಲ ಎಂದು ಹೇಳಿದರು.

ಅಧಿಕಾರಿಗಳ ಮನವೊಲಿಕೆಗೂ ಬಗ್ಗದ ಶಾಸಕ ಸ್ಥಳದಲ್ಲೇ ವಿಷಯ ಇತ್ಯರ್ಥವಾಗಬೇಕು ಎಂದರು. ಈ ಸಂದರ್ಭ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರೊಂದಿಗೆ ಶಾಸಕ ದೂರವಾಣಿಯಲ್ಲಿ ಮಾತನಾಡಿದರು.

ಸಹಾಯಕ ಕಮಿಷನರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ

ಮಧ್ಯಾಹ್ನ ಸುಮಾರು 1.30ರ ವೇಳೆ ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಶಾಸಕರನ್ನು ಮಿನಿ ವಿಧಾನಸೌಧಕ್ಕೆ ಕರೆದರು. ಪ್ರತಿಭಟನೆ ಸ್ಥಗಿತಗೊಳಿಸಿದ ಶಾಸಕ ತನ್ನ ಬೆಂಬಲಿಗದೊಂದಿಗೆ ಮಿನಿ ವಿಧಾನಸೌಧಕ್ಕೆ ತೆರಳಿದರು. ಅಲ್ಲಿ ಮಾಧ್ಯಮದವರನ್ನು ಹೊರಗಿಟ್ಟು ಮಾತುಕತೆ ನಡೆಯಿತು.

ಪ್ರತಿಭಟನೆ ಸಂದರ್ಭ ಬಿಜೆಪಿ ಮುಖಂಡರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ಜಿ.ಆನಂದ, ಉದಯಕುಮಾರ್ ರಾವ್, ರಮಾನಾಥ ರಾಯಿ ಈ ಸಂದರ್ಭ ಉಪಸ್ಥಿತರಿದ್ದರು.

ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಕೈ ಕಾರ್ಯಕರ್ತರು

ಸಂಜೆ ಸುಮಾರು 4 ಗಂಟೆ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಿನಿ ವಿಧಾನಸೌಧ ಪ್ರವೇಶಿಸಿ ಬಿಜೆಪಿಯ ಕ್ರಮವನ್ನು ಖಂಡಿಸಿದರು. ಇಂದಿರಾ ಕ್ಯಾಂಟೀನ್‍ಗೆ ಅಡ್ಡಿ ನಿರ್ಮಿಸುವುದು ಸರಿಯಲ್ಲ, ಇದು ಬಿಜೆಪಿ ನಾಯಕರ ಸಂಕುಚಿತ ಮನೋಭಾವವನ್ನು ಪ್ರದರ್ಶಿಸು ತ್ತದೆ ಎಂದು ರಮಾನಾಥ ರೈ ಈ ಸಂದರ್ಭ ಹೇಳಿದರು.

ಉದ್ವಿಗ್ನ ಪರಿಸ್ಥಿತಿ

ಮಿನಿ ವಿಧಾನಸೌಧದ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ಬಿಜೆಪಿ ಕಾರ್ಯಕರ್ತರೂ ಇನ್ನೊಂದು ಬದಿಯಲ್ಲಿ ಸೇರಿದರು. ಈ ಹಂತದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಎರಡೂ ಬದಿಯಿಂದ ಧಿಕ್ಕಾರ ಘೋಷಣೆಗಳು, ಜೈಕಾರಗಳು ಮೊಳಗಿದವು.

ಈ ಸಂದರ್ಭ ಪ್ರತಿಭಟನಾಕಾರರ ಮನವೊಲಿಸಲು ಬಂಟ್ವಾಳ ಎಎಸ್ಪಿ ಋಷಿಕೇಶ್ ಸೋನಾವಣೆ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಎಸ್ಸೈಗಳಾದ ಚಂದ್ರಶೇಖರ್, ಹರೀಶ್, ಪ್ರಸನ್ನ ಸೇರಿದಂತೆ ಪೊಲೀಸ್ ಪಹರೆಯೇ ಯಶಸ್ವಿಯಾಯಿತು.

ಕಾಂಗ್ರೆಸ್ ವತಿಯಿಂದ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಜೆಡಿಎಸ್ ಪ್ರಮುಖರಾದ ಬಿ.ಮೋಹನ್, ಮಹಮ್ಮದ್ ಶಫಿ, ಹಾರೂನ್ ರಶೀದ್, ಅಬೂಬಕ್ಕರ್ ಮತ್ತಿತರರು ಇದ್ದರು.

ಆವರಣಗೋಡೆ ಮಾಡಿಯೇ ಸಿದ್ಧ: ರಮಾನಾಥ ರೈ

ಬಿಜೆಪಿಯವರು ಯಾವ ಅಭಿವೃದ್ಧಿಯನ್ನೂ ಅಪೇಕ್ಷಿಸುತ್ತಿಲ್ಲ. ಎಲ್ಲ ಅಬಿವೃದ್ಧಿ ಕಾರ್ಯಗಳಿಗೆ ತಡೆ ತಂದಿದ್ದರು. ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಬೇಕು ಎಂಬ ಇಚ್ಛೆ ಇವರಿಗಿಲ್ಲ. ಇದಕ್ಕೆ ಆವರಣಗೋಡೆ ನಿರ್ಮಾಣ ಬೇಕೇ ಬೇಕು. ಇದನ್ನು ಮಾಡಿಯೇ ಸಿದ್ಧ. ಆವರಣಗೋಡೆ ಕ್ಯಾಂಟೀನ್ ಸ್ವಚ್ಛತೆ ಕಾಪಾಡಲು ಇದು ಸಹಕಾರಿ. ಪಾರ್ಕಿಂಗ್‍ಗೆ ತೊಂದರೆ ಆಗುತ್ತದೆ ಎಂದಾದರೆ ಬಿ.ಸಿ.ರೋಡಿನಲ್ಲಿ ಇರುವ ಎಲ್ಲ ಅಕ್ರಮ ಕಟ್ಟಡಗಳು, ಅತಿಕ್ರಮಣಗಳನ್ನು ತೆರವುಗೊಳಿಸಲಿ. 

- ಬಿ.ರಮಾನಾಥ ರೈ, ಮಾಜಿ ಸಚಿವ

ಕಂಪೌಂಡ್ ಅಕ್ರಮವಾಗಿ ನಿರ್ಮಿಸಲು ಬಿಡುವುದಿಲ್ಲ: ರಾಜೇಶ್ ನಾಯ್ಕ್

ಕಂಪೌಂಡ್ ನಿರ್ಮಾಣ ಸಂದರ್ಭ ನಿಯಮವನ್ನು ಉಲ್ಲಂಘಿಸಿದ್ದ ಕುರಿತು ಮುಖ್ಯಾಧಿಕಾರಿಗೆ ಸೂಚಿಸಿದರೂ ಅವರು ಅದನ್ನು ಪಾಲಿಸಿಲ್ಲ. ಇಂದಿರಾ ಕ್ಯಾಂಟೀನ್ ನಿರ್ಮಿಸಲು ನಮ್ಮ ಆಕ್ಷೇಪ ಇಲ್ಲ. ಆದರೆ, ಕಂಪೌಂಡ್ ಸರಿಯಾದ ಜಾಗದಲ್ಲಿ ನಿರ್ಮಿಸಿ ಎಂದು ಹೇಳಿದರೆ ಕೇಳುತ್ತಿಲ್ಲ. ಪುರಸಭೆಗೆ ಕಂಪೌಂಡ್ ಅನ್ನು ಅಕ್ರಮವಾಗಿ ನಿರ್ಮಿಸುವ ಹಠವೇಕೆ, ಇಲ್ಲಿ ನಿರ್ಮಿಸಲು ನಾವು ಬಿಡುವುದಿಲ್ಲ.

- ರಾಜೇಶ್ ನಾಯ್ಕ್, ಬಂಟ್ವಾಳ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News