ಸಹಕಾರಿ ಕ್ಷೇತ್ರಕ್ಕೆ ಸರಕಾರದಿಂದ ಅಸಹಕಾರ: ಡಾ.ರಾಜೇಂದ್ರ ಕುಮಾರ್

Update: 2018-11-14 14:52 GMT

ಉಡುಪಿ, ನ.14: ಸಹಕಾರಿ ಕ್ಷೇತ್ರಕ್ಕೆ ಸರಕಾರದ ಕೊಡುಗೆ ಬಹಳ ಕಡಿಮೆ. ಸರಕಾರ ನಮ್ಮಿಂದ ದುಡಿಸಿಕೊಳ್ಳುವಷ್ಟು ಸಹಕಾರ ನಮಗೆ ನೀಡಲ್ಲ. ಸಾಲ ಮನ್ನಾ, ಬಡ್ಡಿ ಮನ್ನಾವನ್ನು ಸಹಕಾರಿ ಕ್ಷೇತ್ರದವರು ಮಾತ್ರ ಮಾಡುತ್ತಾರೆ. ಸಮ್ಮಿಶ್ರ ಸರಕಾರ ಮಾಡಿರುವ ಸಾಲ ಮನ್ನಾಕ್ಕೆ ವಾಣಿಜ್ಯ ಬ್ಯಾಂಕಿನವರು ಯಾವುದೇ ಸಹಕಾರ ನೀಡುತ್ತಿಲ್ಲ. ಆದರೆ ನಾವು ಎಲ್ಲ ಲೆಕ್ಕಾಚಾರವನ್ನು ಮಾಡಿ ಸರಕಾರಕ್ಕೆ ನೀಡಿದ್ದೇವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಬುಧವಾರ ಆಯೋಜಿಸಲಾದ 65ನೆ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸರಕಾರ ಇಂದು ಸಹಕಾರಿ ಕ್ಷೇತ್ರವನ್ನು ನಂಬುತ್ತಿಲ್ಲ. ಕೇಂದ್ರ ಅಥವಾ ರಾಜ್ಯ ಸರಕಾರಗಳು ತಮ್ಮ ಹಣವನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಮಾತ್ರ ಇಡು ತ್ತದೆಯೇ ಹೊರತು ಯಾವುದೇ ಸಹಕಾರಿ ಸಂಸ್ಥೆಗಳಲ್ಲಿ ಅಲ್ಲ. ಅವರ ಎಲ್ಲ ಕೆಲಸ ಮಾಡಲು ನಾವು ಬೇಕು. ಆದರೆ ನಮ್ಮ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರಗಳು ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಕಷ್ಟು ಅನುದಾನಗಳನ್ನು ನೀಡಿವೆ. ಆದರೆ ಸಹಕಾರಿ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ಸಹಕಾರಿ ಕ್ಷೇತ್ರ ಯಾರ ಕೊಡುಗೆಯಿಂದ ಮೇಲೆ ಬಂದಿಲ್ಲ. ಅದರ ಸ್ವಂತ ಶಕ್ತಿಯಿಂದಲೇ ಅವು ಬೆಳೆದು ಜನರಿಗೆ ಸೇವೆ ಜೊತೆಗೆ ಸರಕಾರದ ಕೆಲಸಗಳನ್ನು ಮಾಡುತ್ತಿವೆ.

ಇದರೊಂದಿಗೆ ಸರಕಾರ ಸಹಕಾರ ನೀಡಿದರೆ ಸಹಕಾರ ಕ್ಷೇತ್ರ ಇನ್ನಷ್ಟು ಬಲಾಢ್ಯವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅವಿಭಜಿತ ದ.ಕ. ಇಡೀ ದೇಶದಲ್ಲಿ ಕಳೆದ 23ವರ್ಷಗಳಿಂದ ಕೃಷಿ ಸಾಲ 100ಕ್ಕೆ 100 ಮರುಪಾವತಿ ಮಾಡಿದ ಏಕೈಕ ಜಿಲ್ಲೆಯಾಗಿದೆ. ಸಹಕಾರಿ ಕ್ಷೇತ್ರವು ಕೇವಲ ಠೇವಣಿ ಪಡೆದುಕೊಳ್ಳುವುದು, ಸಾಲ ನೀಡುವುದು, ಸಾಲ ವಸೂ ಲಾತಿಗೆ ಸೀಮಿತವಾಗದೆ ಹೊಸತನವನ್ನು ಹುಡುಕಬೇಕಾಗಿದೆ. ರಾಜಕೀಯ ವನ್ನು ದೂರ ಇಟ್ಟು ಸಹಕಾರಿ ಕ್ಷೇತ್ರವನ್ನು ಬೆಳೆಸುವ ಮೂಲಕ ನಾವು ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದರು.

ಸಹಕಾರಿ ಮಾರಾಟ, ಸಂಸ್ಕರಣ ಮತ್ತು ಶೇಖರಣೆ ದಿನದ ಕುರಿತು ಬೆಂಗಳೂರು ಆರ್‌ಐಸಿಎಂ ನಿವೃತ್ತ ನಿರ್ದೇಶಕ ಡಾ.ಎಸ್.ಎ.ಸಿದ್ಧಾಂತಿ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದ ಹಿರಿಯ ಸಹಕಾರಿ ಕೃಷ್ಣರಾಜ ಸರಳಾಯ ಅವರನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಸಹಕಾರ ಸಂಘಗಳ ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಮಾತನಾಡಿದರು. ಹಿರಿಯ ಸಹಕಾರಿ ಗಳಾದ ಎಸ್.ಕೆ.ಮಂಜುನಾಥ್, ಶಿವಾಜಿ ಸುವರ್ಣ, ದೇವಿಪ್ರಸಾದ್ ಶೆಟ್ಟಿ, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಡಗಬೆಟ್ಟು ಸೊಸೈಟಿ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹಕಾರಿ ಯೂನಿಯನ್‌ನ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿ ಕಾರಿ ಪುರುಷೋತ್ತಮ ಎಸ್.ಪಿ. ವಂದಿಸಿದರು. ಸೊಸೈಟಿಯ ಮಲ್ಪೆ ಶಾಖೆಯ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು.

ಸಹಕಾರಿ ಕ್ಷೇತ್ರದ ಕುರಿತು ಅಧ್ಯಯನ

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರಗಳ ಬೆಳವಣಿಗೆ, ಇದರಿಂದ ಜನರಿಗೆ ಆಗಿರುವ ಸಹಕಾರ, ಈ ಕ್ಷೇತ್ರದಿಂದ ಜನ ಜೀವನವನ್ನು ಬೆಳೆಸಿಕೊಂಡ ರೀತಿ ಸೇರಿದಂತೆ ವಿವಿಧ ಆಯಾಮಗಳ ಕುರಿತು ಅಧ್ಯಯನ ನಡೆಸಿ, ಕೈಪಿಡಿ ಯನ್ನು ತಯಾರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಹೊಸ ಪೀಳಿಗೆಯನ್ನು ಸಹಕಾರಿ ಕ್ಷೇತ್ರದಲ್ಲಿ ಸೇರಿಸಿಕೊಳ್ಳಬೇಕಾಗಿದೆ. ಇದರಿಂದ ಮಾತ್ರ ಸಹಕಾರಿ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News