ವಿಕೋಪ ಸಂದರ್ಭದಲ್ಲಿ ಮಾನವ ಹಾನಿ ತಪ್ಪಿಸಲು ಆದ್ಯತೆ: ಡಾ.ರೋಹಿಣಿ

Update: 2018-11-14 14:59 GMT

ಉಡುಪಿ, ನ.14: ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂಭವಿಸುವ ಆಸ್ತಿ- ಪಾಸ್ತಿ ಹಾನಿ, ಜಾನುವಾರು ಹಾನಿ ಮತ್ತು ಮಾನವ ಜೀವ ಹಾನಿಯ ಸಂದರ್ಭದಲ್ಲಿ, ಮಾನವ ಜೀವ ಹಾನಿಯನ್ನು ಕಡಿಮೆ ವಾಡುವ ಉದ್ದೇಶದಿಂದ ತುರ್ತು ಕಾರ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ.

ಬುಧವಾರ ಉಡುಪಿಯ ತಾಪಂ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ), ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆ ಸಹಯೋಗ ದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಚಂಡ ಮಾರುತ ಮತ್ತು ಪ್ರವಾಹ ವಿಪತ್ತು ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ರಕ್ಷಿಸಲ್ಪಡುವ ನಾಗರಿಕರಿಗೆ ಅಗತ್ಯ ತುರ್ತು ಚಿಕಿತ್ಸೆ ನೀಡಿ, ಅವರನ್ನು ಪ್ರಾಣಾಪಾಯದಿಂದ ಕಾಪಾಡುವ ಗುರುತರ ಜವಾಬ್ದಾರಿ ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೇಲಿದೆ.ಪ್ರಾಕೃತಿಕ ವಿಕೋಪ ಗಳು ಒಂದೇ ರೀತಿಯಲ್ಲಿ ಸಂಭವಿಸುವುದಿಲ್ಲ. ವಿವಿಧ ರೀತಿಯ ವಿಕೋಪಗಳು ಯಾವುದೇ ಮುನ್ಸೂಚನೆ ನೀಡದೇ ಸಂಭವಿಸಲಿದ್ದು, ಯಾವ ರೀತಿಯ ವಿಕೋಪಗಳ ಸಂದರ್ಭದಲ್ಲಿ ಯಾವ ರೀತಿಯ ಅಗತ್ಯ ತುರ್ತು ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಸೂಕ್ತ ಅರಿವು ಹೊಂದಿರುವುದು ಅತ್ಯಂತ ಅಗತ್ಯ. ವಿಕೋಪ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ನೆರವು ಪಡೆದು ಮಾನವ ಜೀವ ಹಾನಿಯನ್ನು ತಪ್ಪಿಸಬೇಕು ಎಂದು ಡಿಎಚ್‌ಒ ಹೇಳಿದರು.

ಕಂದಾಯ ಇಲಾಖೆಯ ವಿಕೋಪ ನಿರ್ವಹಣಾ ತಜ್ಞ ಡಾ. ಜಿ.ವಿಶ್ವನಾಥ್ ಮಾತನಾಡಿ, ಪ್ರಾಕೃತಿಕ ವಿಕೋಪಗಳನ್ನು ನಿಲ್ಲಿಸಲು ಸಾಧ್ಯವಿಲ್ಲ.ಆದರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಗತ್ಯ ಸಿದ್ದತೆ ಮಾಡಿಕೊಂಡಿದ್ದರೆ ಹಾನಿಯ ಪ್ರಮಾಣ ಕಡಿಮೆಗೊಳಿಸಲು ಸಾಧ್ಯವಿದೆ. ಬರಗಾಲ, ಅತಿವೃಷ್ಠಿ, ಪ್ರವಾಹ, ೂಕಂಪ, ಸುನಾಮಿ, ಗುಡ್ಡ ಕುಸಿತ, ಸಮುದ್ರ ಕೊರೆತ ಮುಂತಾದ ವಿಕೋಪಗಳು ಕರ್ನಾಟಕದಲ್ಲಿದ್ದು, ಇವುಗಳನ್ನು ಸೂಕ್ತ ರೀತಿಯಲ್ಲಿ ಎದುರಿಸುವ ಉದ್ದೇಶದಿಂದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ ಎಂದರು.

ರಾಜ್ಯದಲ್ಲಿ 2009ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಠಿಯಿಂದ 23,000 ಕೋಟಿಗೂ ಅಧಿಕ ನಷ್ಠ ಸಂವಿಸಿದೆ. ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಕಂಡುಬಂದ ಅತಿವೃಷ್ಠಿಯಿಂದ 1,700 ಕೋಟಿಗೂ ಅಧಿಕ ನಷ್ಠ ಸಂವಿಸಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಭೂಕಂಪನ ಮುನ್ಸೂಚನಾ ಕೇಂದ್ರಗಳನ್ನು ತೆರೆಯಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಸಾಮೂಹಿಕ ಹಾನಿಯ ಸಂದರ್ಭದಲ್ಲಿ ನೀಡಬೇಕಾದ ಚಿಕಿತ್ಸಾ ವಿಧಾನಗಳು, ಶುದ್ಧ ಕುಡಿಯುವ ನೀರು ಬಳಕೆ ವಿಧಾನ, ಆಸ್ಪತ್ರೆಗಳಲ್ಲಿ ವಿಕೋಪ ನಿರ್ವಹಣೆಗಾಗಿ ಮಾಡಿಕೊಳ್ಳಬೇಕಾದ ಅಗತ್ಯ ಸಿದ್ದತೆಗಳ ಯೋಜನೆ ರೂಪಿುವ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಕಿಮ್ಸ್ ಹುಬ್ಬಳ್ಳಿಯ ಹಿರಿಯ ವೈದ್ಯಾಧಿಕಾರಿ ಡಾ. ಸಂಪತ್ ಸಿಂಗ್, ಕಂದಾಯ ಇಲಾಖೆಯ ವಿಕೋಪ ನಿರ್ವಹಣಾ ತಜ್ಞ ಮೋಹನ್, ಶ್ರೀಹರ್ಷ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News