ಗಜ ಚಂಡಮಾರುತ: ಅಧಿಕಾರಿಗಳ ಸಭೆ ನಡೆಸಿದ ಪುದುಚೇರಿ ಸಿಎಂ

Update: 2018-11-14 16:57 GMT

ಚೆನ್ನೈ, ನ.14: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಗಜ ಚಂಡಮಾರುತ ಗುರುವಾರ ಪುದುಚೇರಿಗೆ ಅಪ್ಪಳಿಸಲಿದೆ ಎಂಬ ಹವಾಮಾನ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಬುಧವಾರ ಕಾರೈಕಲ್ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೃಷಿ ಸಚಿವ ಆರ್.ಕಮಲಕಣ್ಣನ್, ಕಾರೈಕಲ್ ಜಿಲ್ಲಾಧಿಕಾರಿ ಆರ್.ಕೇಶವನ್, ವರಿಷ್ಠ ಪೊಲೀಸ್ ಅಧಿಕಾರಿ ರಾಹುಲ್ ಅಲ್ವಾಲ್, ವಿವಿಧ ಇಲಾಖೆಗಳಾದ ಪಿಡಬ್ಲ್ಯೂಡಿ, ಆರೋಗ್ಯ, ವಿದ್ಯುತ್, ಮೀನುಗಾರಿಕೆ, ಅಗ್ನಿಶಾಮಕ ದಳದ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪರಿಹಾರ ಸಾಮಾಗ್ರಿಗಳನ್ನು ಸಾಕಷ್ಟು ದಾಸ್ತಾನು ಇರಿಸುವಂತೆ ಮುಖ್ಯಮಂತ್ರಿ ಸೂಚಿಸಿದರು. ಅಲ್ಲದೆ ಅಗತ್ಯಬಿದ್ದರೆ ಕಾರೈಕಲ್‌ನಲ್ಲೇ ತಾನು ವಾಸ್ತವ್ಯ ಹೂಡಿ ಪರಿಹಾರ ಕಾರ್ಯಾಚರಣೆಯನ್ನು ಸಂಯೋಜಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ತುರ್ತು ನೆರವು ನೀಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಮೂರು ತಂಡಗಳು ಪುದುಚೇರಿಗೆ ಆಗಮಿಸಿವೆ. ಮಾಹಿತಿ ನೀಡಿದ ನಾಗಪಟ್ಟಿನಂ ಜಿಲ್ಲಾಧಿಕಾರಿ ಸಿ.ಸುರೇಶ್ ಕುಮಾರ್, ಸಂತ್ರಸ್ತರಿಗೆ ಆಶ್ರಯ ನೀಡುವ ಉದ್ದೇಶದಿಂದ 22 ಶಿಬಿರಗಳನ್ನು ಸಿದ್ಧಗೊಳಿಸಲಾಗಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ನಿಯಂತ್ರಣಾ ಕೊಠಡಿಯನ್ನು ಸ್ಥಾಪಿಸಲಾಗಿದೆ. ಗುರುವಾರ ಜಿಲ್ಲೆಯ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News