ರಫೇಲ್ ವಿವಾದ: ಒಪ್ಪಂದದಲ್ಲಿ ಮೋದಿ ಮಾಡಿರುವ ಬದಲಾವಣೆ ಬಗ್ಗೆ ರಕ್ಷಣಾ ಸಚಿವರಿಗೂ ಮಾಹಿತಿಯಿಲ್ಲ

Update: 2018-11-14 17:14 GMT

ಹೊಸದಿಲ್ಲಿ,ನ.14: ಫ್ರಾನ್ಸ್‌ನಿಂದ 36 ರಫೇಲ್ ಯುದ್ಧವಿಮಾನಗಳ ಖರೀದಿ ಕುರಿತು ನ್ಯಾಯಾಲಯದ ಕಣ್ಗಾವಲಿನಲ್ಲಿ ತನಿಖೆ ನಡೆಸುವಂತೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಬುಧವಾರ ನಡೆಸಿದ ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ. ಒಪ್ಪಂದದಲ್ಲಿ ಅಕ್ರಮಗಳು ನಡೆದಿದ್ದು,ಅದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆಯೂ ಅರ್ಜಿದಾರರು ಕೋರಿದ್ದಾರೆ.

 ರಫೇಲ್ ಒಪ್ಪಂದದ ಕುರಿತು ಫ್ರೆಂಚ್ ಸರಕಾರವು ಯಾವುದೇ ಖಾತರಿಯನ್ನು ನೀಡಿಲ್ಲವೆಂದು ವಿಚಾರಣೆ ಸಂದರ್ಭ ಕೇಂದ್ರವು ಒಪ್ಪಿಕೊಂಡಿತಾದರೂ, ಫ್ರಾನ್ಸ್‌ ನ ಪ್ರಧಾನಿ ನೀಡಿರುವ ಭರವಸೆ ಪತ್ರ ತನ್ನ ಬಳಿಯಿದ್ದು, ಇದು ಸರಕಾರಿ ಖಾತರಿಗೆ ಸಮನಾಗಿದೆ ಎಂದು ಸಮಜಾಯಿಷಿ ನೀಡಿತು.

ಇದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ಪೀಠವು,ರಫೇಲ್ ವಿಮಾನಗಳ ಬೆಲೆ ವಿವರಗಳನ್ನು ಬಹಿರಂಗಗೊಳಿಸಬಹುದು ಎಂದು ತಾನು ನಿರ್ಧರಿಸುವವರೆಗೂ ನ್ಯಾಯಾಲಯದಲ್ಲಿ ಆ ಬಗ್ಗೆ ಚರ್ಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿತು.

ರಫೇಲ್ ಒಪ್ಪಂದದಲ್ಲಿ ಡಸಾಲ್ಟ್ ಕಂಪನಿಯ ಭಾರತೀಯ ಪಾಲುದಾರ ಕಂಪನಿಯ ಕುರಿತು ನ್ಯಾಯಾಲಯಕ್ಕೆ ಈವರೆಗೆ ಯಾವುದೇ ಮಾಹಿತಿಯನ್ನು ಸರಕಾರವು ನೀಡಿಲ್ಲ ಎಂದೂ ಪೀಠವು ಹೇಳಿತು.

ಅರ್ಜಿದಾರರಲ್ಲೋರ್ವರಾದ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು,ಎನ್‌ಡಿಎ ಸರಕಾರವು ವಿಮಾನಗಳ ಖರೀದಿಗೆ ಟೆಂಡರ್‌ಗಳನ್ನು ಕರೆಯುವುದನ್ನು ತಪ್ಪಿಸುವ ಉದ್ದೇಶದಿಂದ ಅಂತರ್ ಸರಕಾರಿ ಒಪ್ಪಂದವನ್ನು ಮಾಡಿಕೊಳ್ಳುವ ಮೂಲಕ ತುರ್ತಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಆರೋಪಿಸಿದರು. ಭೂಷಣ್ ಜೊತೆಗೆ ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅವರು ಜಂಟಿ ಅರ್ಜಿದಾರರಾಗಿದ್ದಾರೆ.

ಕೇಂದ್ರ ಕಾನೂನು ಸಚಿವಾಲಯವು ಮೊದಲು ಈ ವಿಷಯವನ್ನೆತ್ತಿತ್ತು,ಆದರೆ ಬಳಿಕ ಅಂತರ್ ಸರಕಾರಿ ಒಪ್ಪಂದವನ್ನು ಮಾಡಿಕೊಳ್ಳುವ ಪ್ರಸ್ತಾವಕ್ಕೆ ಶರಣಾಗಿತ್ತು ಎಂದು ವಾದಿಸಿದ ಭೂಷಣ್,ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಂದದಲ್ಲಿ ಮಾಡಿರುವ ಬದಲಾವಣೆಯ ಬಗ್ಗೆ ಯಾರಿಗೂ ತಿಳಿದಿಲ್ಲ,ರಕ್ಷಣಾ ಸಚಿವರಿಗೂ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದರು.

ಒಪ್ಪಂದದಲ್ಲಿ ಭಾರತೀಯ ಪಾಲುದಾರನಾಗಿ ರಿಲಯನ್ಸ್‌ನ್ನು ಸೇರಿಸಿರುವುದು ಕ್ರಿಮಿನಲ್ ಉದ್ದೇಶದಿಂದ ಕೂಡಿದೆ ಎಂದು ಪ್ರತಿಪಾದಿಸಿದ ಅವರು,ತನ್ನ ಆರೋಪಕ್ಕೆ ಸಮರ್ಥನೆಯಾಗಿ ಮಾಜಿ ಫ್ರೆಂಚ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಮತ್ತು ಇತರ ಡಸಾಲ್ಟ್ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿದರು.

ಇದಕ್ಕೂ ಮುನ್ನ ಇತರ ಅರ್ಜಿದಾರರಾದ ನ್ಯಾಯವಾದಿಗಳಾದ ಎಂ.ಎಲ್.ಶರ್ಮಾ ಮತ್ತು ವಿನೀತ್ ದಾಂಡಾ ಹಾಗೂ ಆಪ್ ಸಂಸದ ಸಂಜಯ ಸಿಂಗ್ ಅವರೂ ತಮ್ಮ ವಾದಗಳನ್ನು ಮಂಡಿಸಿ,ಅಂತರ ಸರಕಾರಿ ಒಪ್ಪಂದವು ಅಕ್ರಮವಾಗಿದ್ದು,ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News