ಭಟ್ಕಳ: ನ.16ರಿಂದ ‘ಮಾನವಕುಲದ ಮಾರ್ಗದರ್ಶಕ’ ಅಭಿಯಾನ

Update: 2018-11-15 05:11 GMT

ಭಟ್ಕಳ, ನ.15: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕವು ನ.16ರಿಂದ 30ರ ವರೆಗೆ ‘ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ರಾಜ್ಯವ್ಯಾಪಿ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಮಾಜದಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ಪೂರ್ವಾಗ್ರಹಗಳನ್ನು ಹೋಗಲಾಡಿಸಿ, ಶಾಂತಿ, ಸೌಹಾರ್ದ ಮತ್ತು ಮಾನವೀಯತೆಯನ್ನು ಬೆಳೆಸುವುದೇ ಈ ಅಭಿಯಾನದ ಉದ್ದೇಶ ಎಂದವರು ವಿವರಿಸಿದರು. ಅಭಿಯಾನದ ಜಿಲ್ಲಾ ಸಂಚಾಲಕ ಎಂ.ಆರ್.ಮಾನ್ವಿ ಮಾತನಾಡಿ, ಪ್ರವಾದಿ ಮುಹಮ್ಮದ್(ಸ)ರ ಜೀವನ ಮತ್ತು ಸಂದೇಶ ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾದುದು. ಅವರ ಸಂದೇಶ ಮತ್ತು ಬೋಧನೆಗಳನ್ನು ಸರ್ವಮಾನವ ಕುಲಕ್ಕೆ ಪ್ರಸ್ತುತವೆಂಬುದನ್ನು ಸಾರ್ವಜನಿಕರಿಗೆ ಪರಿಚಯಿಸುವ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ರಾಜ್ಯದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಅಭಿಯಾನದ ಭಟ್ಕಳ ತಾಲೂಕು ಸಂಚಾಲಕ ವೌಲಾನ ಸೈಯದ್ ಝುಬೈರ್ ಎಸ್.ಎಂ. ಮಾತನಾಡಿ, ಭಟ್ಕಳ ತಾಲೂಕಿನಾದ್ಯಂತ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿಚಾರಗೋಷ್ಠಿ, ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ, ಮನೆಮನೆ ಭೇಟಿ, ಕಾರ್ನರ್ ಮೀಟಿಂಗ್ ಮತ್ತಿತರರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News