ಮನುಷ್ಯತ್ವದ ಉದ್ದೀಪನಕ್ಕೆ ವಿದ್ಯಾರ್ಥಿಸಿರಿ ಸಾಕ್ಷಿಯಾಗಲಿ: ವಿನಯ ಪ್ರಸಾದ್

Update: 2018-11-15 10:23 GMT

ಮೂಡುಬಿದಿರೆ, ನ.15: ಕಲೆಯು ನಮ್ಮಲ್ಲಿ ಸಜ್ಜನಿಕೆಯನ್ನು ತುಂಬುವುದಲ್ಲದೆ ಕಲಾವಿದನಾದವನು ಸರ್ವರಿಗೂ ಸೇರಿದವನು ಎಂಬ ಮನೋಭಾವವನ್ನು ಬೆಳೆಸುತ್ತದೆ. ಎಲ್ಲರ ಜೊತೆ, ತುಂಬುವಿಕೆಯ ಜೊತೆ ಎಲ್ಲವೂ ನನಗೆ ಸಂಬಂಧಿಸಿದೆಂದು ತಿಳಿದು ಜೀವನ ಸಾಗಿಸಿದರೆ ಮಾತ್ರ ವ್ಯಕ್ತಿ ಪ್ರಜೆಯಾಗಲು ಸಾಧ್ಯ. ಆ ನಿಟ್ಟಿನಲ್ಲಿರುವ ವಿದ್ಯಾರ್ಥಿಸಿರಿ ಮನುಷ್ಯತ್ವದ ಉದ್ದೀಪನಕ್ಕೆ ಸಾಕ್ಷಿಯಾಗಲಿ ಎಂದು ಚಲನಚಿತ್ರ ನಟಿ, ಕಲಾವಿದೆ ವಿನಯ ಪ್ರಸಾದ್ ನುಡಿದರು.

ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಗುರುವಾರ ನಡೆದ ಆಳ್ವಾಸ್ ವಿದ್ಯಾರ್ಥಿ ಸಿರಿ-2018 ವಿದ್ಯಾರ್ಥಿ ಸಾಹಿತ್ಯ- ಸಂಸ್ಕೃತಿ ಸಮ್ಮೇಳನವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮುಂದಿನ ಸಮಾಜದ ಸಾವಯವ ಗೊಬ್ಬರಗಳಿದ್ದಂತೆ. ವಿದ್ಯಾರ್ಥಿಗಳು ಅವಹೇಳನದ ತುಂಟತನವನ್ನು ಕಲಿಯದೆ ಅಂದವನ್ನು ಹೊಗಳದೆ, ನಿಕೃಷ್ಟತೆಯನ್ನು ತೆಗಳದೆ, ಕಪ್ಪು-ಬಿಳುಪಿನ ಬಗ್ಗೆ ಯೋಚಿಸದೆ ಮುನ್ನುಗ್ಗಬೇಕು. ಎಲ್ಲ ಕೆಲಸಕ್ಕೂ ಸೈ ಎಂದುಕೊಂಡು ಮುಂದುವರಿದರೆ ಮಾತ್ರ ಪ್ರಪಂಚವನ್ನು ಅರಿಯಲು ಸಾಧ್ಯ ಎಂದರು.

ನಮ್ಮ ಮನಸ್ಸಿಗೆ ತೋಚಿದ ಒಳ್ಳೆಯತನದ ಮೂಲಕ ಜೀವನವನ್ನು ಸಾಗಿಸಬೇಕು. ಕಲಿತ ಪಾಠವನ್ನು ಆಚರಣೆಯನ್ನಾಗಿಸುವ ಜೊತೆಗೆ ನಮ್ಮ ಕನ್ನಡ ನೆಲ, ಜಲ, ಸಂಸ್ಕೃತಿಯನ್ನು ಆಲಂಗಿಸಿ ಅದನ್ನು ಬೆಳೆಸುವ ಗುಣ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಅದು ಇಂತಹ ವಿದ್ಯಾರ್ಥಿ ಸಿರಿಗಳಿಂದ ಸಾಧ್ಯ ಎಂದು ತಿಳಿಸಿದರು.

‘ಆಳ್ವಾಸ್ ವಿದ್ಯಾರ್ಥಿ ಸಿರಿ’ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಸರಗೋಡು ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ ಸನ್ನಿಧಿ ಟಿ. ರೈ ಪೆರ್ಲ, ನಮ್ಮ ರಾಷ್ಟ್ರದ ಕುರಿತಾದ ವಿಸ್ಮಯಗಳಲ್ಲಿ ಬಿಚ್ಚಿಟ್ಟಿದ್ದಕ್ಕಿಂತ ಬಚ್ಚಿಟ್ಟವುಗಳೇ ಹೆಚ್ಚಾಗಿದ್ದು ಭಾರತದ ಇತಿಹಾಸವನ್ನು ಪಶ್ಚಿಮದ ಕನ್ನಡಕವನ್ನು ಧರಿಸಿ ನೋಡಲು ಯತ್ನಿಸಿ ಇತ್ತ ಭಾರತವೂ ದಕ್ಕದೆ, ಅತ್ತ ಪಶ್ಚಿಮವೂ ಕಾಣದೆ ಹೆಣಗಾಡುವ ಪರಿಸ್ಥಿಯಲ್ಲಿದ್ದೇವೆ ಎಂದರು.

ಆಧುನಿಕತೆಯಿಂದಾಗಿ ಕಲ್ಪವೃಕ್ಷದಂತಿರುವ ಭಾರತೀಯ ಸಂಸ್ಕೃತಿ ನಶಿಸಲ್ಪಡುತ್ತಿದ್ದು, ಆಧುನಿಕ ಯಾಂತ್ರಿಕ ಜೀವನವು ಮಾನವ ಜೀವನದ ಮೂಲಭೂತ ತರ್ಕಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಭಾರತೀಯ ವೈಭವ ಗತವೈಭವವಾಗುತ್ತಿದ್ದು ನಮ್ಮ ದೇಶ ಪ್ರೇಮ ಅಧಿಕಾರ ಚಲಾಯಿಸುವ ಭೂಮಿಯಾಗಿದೆ ಎಂದು ತಿಳಿಸಿದರು.

ಇಂದಿನ ಯುವ ಜನಾಂಗ ಹೊಸತನ್ನು ಹುಟ್ಟು ಹಾಕುವ ಭರದಲ್ಲಿ ಫಲಿತಾಂಶದ ಒಳಿತು ಕೆಡುಕಿನ ವಿಮರ್ಶೆಯಲ್ಲಿ ಸೋತುಬಿಟ್ಟಿದೆ ಎಂದರು.

ಆಳ್ವಾಸ್ ನುಡಿಸಿರಿ ರೂವಾರಿ ಡಾ.ಎಂ.ಮೋಹನ್ ಆಳ್ವ ಪ್ರಾಸ್ತಾವಿಕ ನುಡಿಗಳನ್ನಾಡಿ, ವಿದ್ಯಾರ್ಥಿ ಸಿರಿಯನ್ನು ರಾಜ್ಯ ಮಟ್ಟಕ್ಕೆ ಪಸರಿಸುವ ಅಭಿಲಾಷೆ ಇದೆ. ನಮ್ಮ ನಾಡು, ನುಡಿ, ಸಂಸ್ಕೃತಿ ಕಲಾ ಪ್ರಕಾರಗಳು ಮುಂದುವರಿಯಬೇಕಾದರೆ ಇಂದಿನ ವಿದ್ಯಾರ್ಥಿಗಳ ಮನಸ್ಸಲ್ಲಿ ನಮ್ಮ ನಾಡಿನೊಲುಮೆಯನ್ನು ಬಿತ್ತುವುದು ಅನಿವಾರ್ಯ. ಮಕ್ಕಳಲ್ಲಿ ಅಮೂಲ್ಯವಾದ ಜ್ಞಾನ ಸಂಪತ್ತು ಇದ್ದು, ಅದನ್ನು ಬೆಳೆಸುವ ಬದಲಿಗೆ ಮಕ್ಕಳ ಮನಸ್ಸನ್ನು ಕೆಡಿಸುವಂತಹ ದಾರಿ ಸೃಷ್ಟಿಯಾಗುತ್ತಿರುವುದು ಖೇದಕರವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪರಿಪೂರ್ಣ ಮಾರ್ಗದರ್ಶನ ದೊರೆತರೆ ಅವರ ವಿಸ್ಮಯದ ಬುದ್ಧಿಮತ್ತೆಯನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ವಿಟ್ಲದ ಮಕ್ಕಳ ರಂಗ ವಿನ್ಯಾಸಕಾರ ಮೂರ್ತಿ ದೇರಾಜೆ (ಮಕ್ಕಳ ರಂಗಭೂಮಿ), ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆಯ ಪರವಾಗಿ ಸಂಚಾಲಕ ವಸಂತ ಶೆಟ್ಟಿ (ಮಕ್ಕಳ ವ್ಯಕ್ತಿತ್ವ ಸಂವರ್ಧನೆ) ಹಾಗೂ ಶಾರದಾ ವಿದ್ಯಾಲಯದ ವಿದ್ಯಾರ್ಥಿ ಸದ್ಗುಣ ಐತಾಳ್ (ಬಾಲಪ್ರತಿಭೆ)ರಿಗೆ ‘ಆಳ್ವಾಸ್ ವಿದ್ಯಾರ್ಥಿ ಪುರಸ್ಕಾರ-2018’ನ್ನು ಹಾಗೂ ಹಿರಿಯ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರರಿಗೆ ‘ಆಳ್ವಾಸ್ ವಿದ್ಯಾರ್ಥಿ ಸಿರಿ’ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಚಿನ್ಮಯಿ ರಾಜೇಶ್ ವಿರಚಿತ ಅಂಬರದ ಕಂಬನಿ (ಕವನ ಸಂಕಲನ), ಅಥರ್ವ ಹೆಗ್ಡೆ ವಿರಚಿತ ಮೋಡಗಳು (ಕಥಾ ಸಂಕಲನ)ವನ್ನು ಕಲಾವಿದೆ ವಿನಯಪ್ರಸಾದ್ ಬಿಡುಗಡೆಗೊಳಿಸಿದರು. ಇದಕಕೂ ಮೊದಲು ಅತಿಥಿಗಳನ್ನು ಚೆಂಡೆ, ಕೊಂಬು ಹಾಗೂ ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಗಳನ್ನೊಳಗೊಂಡ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು.

ರೋಟರಿ ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಸ್ವಾಗತಿಸಿದರು. ಡಿ. ಜೆ ವಿದ್ಯಾರ್ಥಿನಿ ತೇಜಸ್ವನಿ ನಾಯಕ್ ವಂದಿಸಿದರು. ಆಳ್ವಾಸ್ ವಿದ್ಯಾರ್ಥಿನಿ ಧಾತ್ರಿ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.



 ನಮಗೆ ನಮ್ಮನ್ನು ಬಳಸುವಂತಹ ಸಮಾಜವಲ್ಲ, ಬದಲಾಗಿ ನಮ್ಮನ್ನು ಬೆಳೆಸುವಂತಹ ಸಮಾಜ ಬೇಕು. ಉನ್ನತವಾದ ಬದುಕಿಗೆ ಮಾತುಗಳಲ್ಲ, ಮಾದರಿಗಳು ಬೇಕು.

 ಶಿಕ್ಷಣ ಪದ್ಧತಿ ಮತ್ತು ಆಧುನಿಕತೆಯನ್ನು ಅಭಿವೃದ್ಧಿ ಎಂದು ಪರಿಗಣಿಸುವ ಭರಾಟೆಯಲ್ಲಿ ನಮ್ಮ ಮನುಷ್ಯ ಸಹಜ ಸಂವೇದನೆಗಳನ್ನು ಮರೆಯುತ್ತಿದ್ದೇವೆ. ಈ ಬಗ್ಗೆ ನಮ್ಮ ಪಠ್ಯಪುಸ್ತಕಗಳಲ್ಲಿ ಪ್ರಶ್ನೆಯೋ ವಿಮರ್ಶೆಯೋ ಆಕ್ಷೇಪವೋ ಆಗಿ ಒಂದೇ ಒಂದು ವಾಕ್ಯವೂ ನಮೂದಿಸಲ್ಪಟ್ಟಿಲ್ಲ ಯಾಕೆ?

-ಸನ್ನಿಧಿ ಟಿ. ರೈ ಪೆರ್ಲ ಸರ್ವಾಧ್ಯಕ್ಷೆ ಆಳ್ವಾಸ್ ವಿದ್ಯಾರ್ಥಿ ಸಿರಿ-2018

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News