‘ಗ್ರೀನ್ ಲಂಗರ್’ ತಂಡದ ಅನುಪಮ ಸೇವೆ

Update: 2018-11-15 14:44 GMT

►ವೆನ್ಲಾಕ್ ಮಕ್ಕಳ ಆರೋಗ್ಯ ರಕ್ಷಣಾ ಕೇಂದ್ರ

ಮಂಗಳೂರು, ನ.14: ಪಂಜಾಬ್ ರಾಜ್ಯದಲ್ಲೂ ಇತರ ಹಲವು ಕಡೆಗಳಲ್ಲೂ ಬಡವರು ಮತ್ತು ಪ್ರಯಾಣಿಕರಿಗೆ ಉಚಿತ ಆಹಾರ ಒದಗಿಸಲು ಸಿಖ್ಖರು ನಡೆಸುವ ‘ಲಂಗರ್’ಗಳು ಸಾಕಷ್ಟು ಜನಪ್ರಿಯವಾಗಿವೆ. ದೇಶದಲ್ಲಿ ಲಕ್ಷಾಂತರ ಮಂದಿ ಈ ಲಂಗರ್‌ಗಳಿಂದ ನಿತ್ಯ ಪ್ರಯೋಜನ ಪಡೆಯುತ್ತಿದ್ದಾರೆ. ಇದೀಗ ಮಂಗಳೂರಿನಲ್ಲಿ ಯುವಕರ ತಂಡವೊಂದು ‘ಗ್ರೀನ್ ಲಂಗರ್’ ಎಂಬ ಹೆಸರಲ್ಲಿ ಸೀಮಿತ ಪ್ರಮಾಣದಲ್ಲಿ ಅನ್ನದಾನದ ಸೇವೆ ಆರಂಭಿಸಿದೆ. ನಗರದ ವೆನ್ಲಾಕ್ ಆಸ್ಪತ್ರೆಯ ‘ಇನ್ಫೋಸಿಸ್ ಅತ್ಯಾಧುನಿಕ ಮಕ್ಕಳ ಆರೋಗ್ಯ ರಕ್ಷಣಾ ಕೇಂದ್ರ’ದಲ್ಲಿ ಹತ್ತಾರು ಮಕ್ಕಳು ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಈ ಮಕ್ಕಳನ್ನು ಉಪಚರಿಸುವುದಕ್ಕಾಗಿ ಅವರ ಜೊತೆ ಅವರ ಹೆತ್ತವರು ಅಥವಾ ಪೋಷಕರೂ ಇರುತ್ತಾರೆ. ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಸರಕಾರದ ವತಿಯಿಂದಲೇ ಉಚಿತ ಆಹಾರ ಪೂರೈಸಲಾಗುತ್ತಿದೆ. ಆದರೆ ಅವರನ್ನು ಉಪಚರಿಸುವವರು ಹೊರಗಡೆ ತೆರಳಿ ಆಹಾರ ಪಡೆಯಬೇಕಾಗುತ್ತದೆ. ಎಲ್ಲರಿಗೆ ಈ ರೀತಿ ಹೊರಗೆ ಹೋಗಿ ಆಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವರು ರೋಗಿಗಳಿಗೆ ನೀಡಿದ ಆಹಾರವನ್ನೇ ಹಂಚಿ ತಿನ್ನುತ್ತಾರೆ. ಸಾರ್ವಜನಿಕ ಬಂದ್/ಮುಷ್ಕರ ಮುಂತಾದ ಸಂದರ್ಭಗಳಲ್ಲಂತೂ ರೋಗಿಗಳನ್ನು ಉಪಚರಿಸುವವರಿಗೆ ಎಲ್ಲಿಂದಲೋ ಆಹಾರ ಸಿಗುವುದಿಲ್ಲ. ಈ ಸಂಕಷ್ಟವನ್ನು ಮನಗಂಡ ಮಂಗಳೂರಿನ ನಾಲ್ಕೈದು ಮಂದಿ ಸಮಾನ ಮನಸ್ಕ ಯುವಕರ ತಂಡವೊಂದು ಈ ಬಗ್ಗೆ ಪರಸ್ಪರ ಚರ್ಚಿಸಿ ರೋಗಿಗಳನ್ನು ಆರೈಕೆ/ಉಪಚರಿಸುವವರಿಗೂ ಆಹಾರ ಪೂರೈಕೆ ಮಾಡುವ ಬಗ್ಗೆ ನಿರ್ಧರಿಸಿತು. ಅದರಂತೆ ಕಳೆದ ರಮಝಾನ್ ಸಂದರ್ಭದಲ್ಲಿ ‘ಗ್ರೀನ್ ಲಂಗರ್’ ಎಂಬ ಹೆಸರಿನಲ್ಲಿ ಈ ತಂಡವು ತನ್ನ ಸೇವೆಯನ್ನು ಆರಂಭಿಸಿತು. ಸದ್ದಿಲ್ಲದೆ ಸಮಾಜ ಸೇವೆ ಮಾಡುವ ಈ ತಂಡ ಕಳೆದ 9 ತಿಂಗಳಿನಿಂದ ಪ್ರತಿನಿತ್ಯ ಸುಮಾರು 100 ಮಂದಿಗೆ ತಲಾ ಮೂರು ಚಪಾತಿ ಅಥವಾ ಇಡ್ಲಿ ಮತ್ತು ವೆಜ್ ಕೂರ್ಮವನ್ನು ಒದಗಿಸುತ್ತಿದೆ. ಇದರ ನಿರ್ವಹಣೆಗೆ ಒಬ್ಬ ಸಿಬ್ಬಂದಿಯನ್ನು ನೇಮಿಸಾಲಾಗಿದ್ದು, ಇವರ ವೇತನ ಸಹಿತ ಆಹಾರದ ಮಾಸಿಕ ವೆಚ್ಚ ಸುಮಾರು 50 ಸಾವಿರ ರೂ. ಯನ್ನು ಈ ತಂಡದ ಸದಸ್ಯರೇ ಭರಿಸುತ್ತಿದ್ದಾರೆ.

ಈ ತಂಡದ ಸದಸ್ಯರು ಪ್ರತೀ ದಿನ ಸಂಜೆ ಸುಮಾರು 6:30ಕ್ಕೆ ವೆನ್ಲಾಕ್ ಮಕ್ಕಳ ಆರೋಗ್ಯ ರಕ್ಷಣಾ ಕೇಂದ್ರ ತಲುಪುತ್ತಾರೆ. ಆಹಾರ ತಯಾರಿ ಮತ್ತು ಪೂರೈಕೆಯ ಜವಾಬ್ದಾರಿಯನ್ನು ಖಾಸಗಿ ಕ್ಯಾಂಟೀನೊಂದಕ್ಕೆ ನೀಡಲಾಗಿದ್ದು ಇದರ ಜವಾಬ್ದಾರಿ ಹೊತ್ತ ಸಿಬ್ಬಂದಿ ಪ್ರತಿದಿನ ಮಧ್ಯಾಹ್ನ ಆಸ್ಪತ್ರೆಗೆ ತೆರಳಿ ಮಕ್ಕಳನ್ನು ಆರೈಕೆ/ಉಪಚಾರ ಮಾಡುವವರು ಎಷ್ಟು ಮಂದಿ ಎಂದು ಅರಿತು ಅವರೆಲ್ಲರಿಗೂ ಕೂಪನ್ ನೀಡುತ್ತಾರೆ. ರಾತ್ರಿ ವೇಳೆ ಈ ಕೂಪನ್ ತೋರಿಸಿದರೆ ಆಹಾರ ಲಭಿಸುತ್ತದೆ. ಈ ಸಂದರ್ಭ ‘ಗ್ರೀನ್ ಲಂಗರ್’ ತಂಡದ ಒಬ್ಬ ಸದಸ್ಯ ಇಲ್ಲಿ ಹಾಜರಿರುತ್ತಾರೆ. ಈ ತಂಡದೊಂದಿಗೆ ಸ್ವಯಂ ಸೇವಕಿಯರೂ ಕೈ ಜೋಡಿಸಿದ್ದಾರೆ. ‘‘2016ರ ನವೆಂಬರ್ 8ರಂದು ಕೇಂದ್ರ ಸರಕಾರ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಹಾಗಾಗಿ ಅನೇಕ ಮಂದಿಯ ಕೈಯಲ್ಲಿ ಹಣವಿದ್ದರೂ ಇಲ್ಲದಂತಹ ಸ್ಥಿತಿ. ಇದೇ ವೇಳೆ ಸಿಖ್ ಸಮುದಾಯದ ಕೆಲವು ಯುವಕರು ನಗರದ ರೈಲು ನಿಲ್ದಾಣದ ಬಳಿ ನಿಂತು ಉಚಿತ ಆಹಾರ ಪೂರೈಕೆ ಮಾಡುವುದನ್ನು ನಾನು ಕಂಡೆ. ಹಣವಿದ್ದವರೂ ಆಹಾರಕ್ಕಾಗಿ ಕೈ ಚಾಚುವುದು ಆ ಕ್ಷಣ ಅನಿವಾರ್ಯವಾಗಿತ್ತು. ಇದನ್ನು ಗಮನಿಸಿದ ನಾನು ಹಸಿದವರಿಗೆ ಆಹಾರ ನೀಡುವ ವ್ಯವಸ್ಥೆಯನ್ನು ನಿರಂತರವಾಗಿ ಮಾಡಬೇಕು ಎಂದು ಅಂದೇ ನಿಶ್ಚಯಿಸಿದೆ’’ ಎನ್ನುತ್ತಾರೆ ‘ಗ್ರೀನ್ ಲಂಗರ್’ ತಂಡದ ಪ್ರಮುಖ ಡಾ.ಮುಬಶ್ಶಿರ್.

‘‘ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಉಪಚರಿಸುವವರು ಪ್ರತಿದಿನ ಆಹಾರಕ್ಕಾಗಿ ಪರದಾಡುವುದನ್ನು ವೈದ್ಯನಾಗಿದ್ದ ನಾನು ತಿಳಿದುಕೊಂಡಿದ್ದೆ. ಅದರಂತೆ ಸಮಾನಮನಸ್ಕ ಸ್ನೇಹಿತರ ಜೊತೆ ಈ ಬಗ್ಗೆ ಚರ್ಚಿಸಿದಾಗ ಅವರಿಂದಲೂ ಸಕಾರಾತ್ಮಕ ಸ್ಪಂದನ ಸಿಕ್ಕಿತು. ಅದರಂತೆ ಆರಂಭಗೊಂಡ ‘ಗ್ರೀನ್ ಲಂಗರ್’ ಸೇವೆಯು ಕಳೆದ 9 ತಿಂಗಳಿನಿಂದ ನಿರಂತರವಾಗಿ ಅಚ್ಚುಕಟ್ಟಾಗಿ ನಡೆಯುತ್ತಿದೆ. ಇದಕ್ಕಾಗಿ ಬೇಕಾಗುವ ಹಣವನ್ನು ನಾವು ನಮ್ಮ ನಡುವಿನಿಂದಲೇ ಹೊಂದಿಸುತ್ತಿದ್ದೇವೆ’’ ಎಂದು ಡಾ.ಮುಬಶ್ಶಿರ್ ವಿವರಿಸುತ್ತಾರೆ.

‘ಗ್ರೀನ್ ಲಂಗರ್’ ತಂಡ ಕಳೆದ 9 ತಿಂಗಳಿನಿಂದ ಈ ಆಸ್ಪತ್ರೆಯ ರೋಗಿಗಳನ್ನು ಉಪಚರಿಸುವವರಿಗೆ ಆಹಾರ ಪೂರೈಸುತ್ತಾ ಬಂದಿದೆ. ಆಹಾರ ಪಡೆದವರು ಧನ್ಯತಾಭಾವ ವ್ಯಕ್ತಪಡಿಸುವಾಗ ನಮಗಾಗುವ ಸಂತೃಪ್ತಿ ಅಪಾರ. ಇನ್ನು ಹಬ್ಬದ ಸಂದರ್ಭ, ದಾನಿಗಳ ಹುಟ್ಟಹಬ್ಬದ ವೇಳೆಯೂ ಬಿರಿಯಾನಿ ಮತ್ತಿತರ ವಿಶೇಷ ಆಹಾರದ ವ್ಯವಸ್ಥೆಯನ್ನು ಕೂಡಾ ಮಾಡಲಾಗುತ್ತದೆ. ಎಲ್ಲರೂ ಈ ಯೋಜನೆಗೆ ಸಹಕರಿಸಿದರೆ ಇದನ್ನು ಮತ್ತಷ್ಟು ವಿಸ್ತರಿಸಬಹುದು.

 ಅಲೀಫಾ ಫಾತಿಮಾ ಚಿಕ್ಕಮಗಳೂರು

(ಸ್ವಯಂ ಸೇವಕಿ)

ಮೊಗಲರ ಕಾಲದಲ್ಲಿ ಸೂಫಿ ಸಂತರು ಅಲ್ಲಲ್ಲಿ ಸಣ್ಣ ಸಣ್ಣ ಚಪ್ಪರ ನಿರ್ಮಿಸಿ ಹಸಿದವರಿಗೆ ಆಹಾರ ನೀಡುತ್ತಿದ್ದರು. ಕೆಲವರು ಅಲ್ಲಿ ಆಯಾಸ ನೀಗಿಸುವುದೂ ಇತ್ತು. ಆಲ್ಲಿ ಹಸಿದವರು ಯಾರು, ಯಾವ ಜಾತಿ, ಮತ ಎಂದು ನೋಡುತ್ತಿರಲಿಲ್ಲ. ಈ ವ್ಯವಸ್ಥೆಗೆ ‘ಲಂಗರ್’ ಎನ್ನಲಾಗುತ್ತ್ತಿತ್ತು. ಬಳಿಕ ಅದನ್ನು ಸಿಖ್ ಸಮುದಾಯದವರೂ ಮುಂದುವರಿಸಿದರು. ಇತಿಹಾಸ ಓದಿದಾಗಲೇ ಇದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿತ್ತು. ನೋಟು ಅಮಾನ್ಯದ ಬಳಿಕ ಹಸಿದವರಿಗೆ ಆಹಾರ ಪೂರೈಕೆ ಮಾಡುವ ಯೋಚನೆ ಮೂಡಿದಾಗ ನಾವು ಈ ವ್ಯವಸ್ಥೆಗೆ ‘ಲಂಗರ್’ ಎಂದು ಹೆಸರಿಸಲು ಬಯಸಿದೆವು. ಅದಕ್ಕೆ ‘ಗ್ರೀನ್’ ಸೇರಿಸಿ ಕಾರ್ಯಾಚರಿಸುತ್ತಿದ್ದೇವೆ.

 ಡಾ. ಮುಬಶ್ಶಿರ್

‘ಗ್ರೀನ್ ಲಂಗರ್’ ತಂಡದ ಪ್ರಮುಖ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News