ಬೀಡಿ ಕಾರ್ಮಿಕ ಸಂಘಟನೆಯಿಂದ ಕನಿಷ್ಠ ಕೂಲಿ ಹಾಗೂ ತುಟ್ಟಿಭತ್ಯೆ ನೀಡುವಂತೆ ಆಗ್ರಹಿಸಿ ಧರಣಿ

Update: 2018-11-15 18:40 GMT

ಬೆಳ್ತಂಗಡಿ,ನ.15: ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ 1000 ಬೀಡಿಗೆ ರೂ. 220ನ್ನು ಕೂಡಲೇ ಜ್ಯಾರಿಗೊಳಿಸುವಂತೆ ಮತ್ತು ಬಾಕಿಯಾದ ತುಟ್ಟಿಭತ್ಯೆಯನ್ನು ನೀಡಲು ಒತ್ತಾಯಿಸಿ ಗುರುವಾರ ಇಲ್ಲಿನ ಭಾರತ್ ಬೀಡಿ ವರ್ಕ್ಸ್ ಡಿಪ್ಪೋ ಮುಂಭಾಗದಲ್ಲಿ ಸಿಐಟಿಯು ಹಾಗೂ ಬೀಡಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಅವರು, ಕಾರ್ಮಿಕರಿಗೆ ಸಿಗುವ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಬಾರದು. ಬೀಡಿ ಕಾರ್ಮಿಕರಿಗೆ ಸಿಗಬೇಕಾದ ತುಟ್ಟಿಭತ್ಯೆ ಹಾಗೂ ಕನಿಷ್ಠ ಕೂಲಿ ನೀಡುವಂತೆ ಪ್ರತಿಭಟನೆಗಳು, ವಾಹನ ಜಾಥಾ ಹಾಗೂ ಧರಣಿ ಸತ್ಯಾಗ್ರಹಗಳನ್ನು ಮಾಡಿದ್ದೇವೆ. ಕಾರ್ಮಿಕರ ವಿವಿಧ ಸಂಘಟನೆಗಳು ಸಭೆ ನಡೆಸಿ ಮಾಲಕರ ಸಹಮತ ವ್ಯಕ್ತಪಡಿಸಿದ್ದರೂ ಇಷ್ಟರ ವರೆಗೂ ಕಾರ್ಮಿಕರಿಗೆ ನ್ಯಾಯ ಸಿಕ್ಕಿಲ್ಲ. ಕಾರ್ಮಿಕರನ್ನು ಮೋಸ ಮಾಡುವ ಹುನ್ನಾರ ನಡೆಯುತ್ತಾ ಇದೆ. ಇದರ ವಿರುದ್ಧ ಇನ್ನೂ ತೀವ್ರ ಹೋರಾಟ ನಡೆಸಲಾಗುತ್ತದೆ ಎಂದರು. 

ರಾಜಸ್ತಾನದಲ್ಲಿ ತಂಬಾಕು ಉತ್ಪನ್ನಗಳಿಗೆ ನಿಷೇಧ ಮಾಡಲಾಗಿದ್ದು, ಉಳಿದ ರಾಜ್ಯಗಳು ಇದನ್ನೇ ಮುಂದುವರಿಸಿದರೆ ಬೀಡಿ ಕಾರ್ಮಿಕರನ್ನು ಬೀದಿಪಾಲು ಮಾಡುವ ಕೆಲಸ ನಡೆಯುತ್ತಿದೆ. ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಕೆಲಸಕ್ಕೂ ಯಾರು ಪ್ರಯತ್ನ ಮಾಡುತ್ತಿಲ್ಲ. ಜಿಲ್ಲೆಯ ಸಂಸದ ಹಾಗೂ ಎಂಟು ಮಂದಿ ಶಾಸಕರು ಬೀಡಿ ಕಾರ್ಮಿಕರ ಪರವಾಗಿ ಸದನಗಳಲ್ಲಿ ಮಾತನಾಡುತ್ತಿಲ್ಲ. ಅವರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ನಮ್ಮ ಕಡೆಯಿಂದ ಬೀಡಿ ಕಾರ್ಮಿಕರಿಗೆ ನ್ಯಾಯ ಸಿಗುವ ತನಕ ಹೋರಾಟವನ್ನು ಇನ್ನು ತೀತ್ರವಾಗಿ ಮಾಡುತ್ತೇವೆ ಎಂದರು. 
ಸಿಐಟಿಯು ಅಧ್ಯಕ್ಷ ವಕೀಲ ಶಿವಕುಮಾರ್ ಎಸ್.ಎಂ., ಕಾರ್ಯದರ್ಶಿ ವಸಂತ ನಡ, ಬೀಡಿ ಕಾರ್ಮಿಕರ ಸಂಘದ ಮುಖಂಡರಾದ ರೋಹಿಣಿ, ಜಯಂತಿ ನೆಲ್ಲಿಂಗೇರಿ, ಪದ್ಮಾವತಿ ಮೊದಲಾವರು ಇದ್ದರು. 

'ತಂತ್ರಗಾರಿಕೆಯ ಮುಖಂಡರಿಂದ ದೂರವಿರಿ'
ಕಾರ್ಮಿಕ ಸಂಘಟನೆಯ ಹೆಸರಲ್ಲಿ ಕಾರ್ಮಿಕ ಮುಖಂಡರ ಮುಖವಾಡವನ್ನು ಹಾಕಿಕೊಂಡು ಕಾರ್ಮಿಕರನ್ನು ವಂಚಿಸುವವರ ಕುರಿತು ಜಾಗ್ರತೆ ವಹಿಸಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಅವರು ಪ್ರತಿಭಟನೆ ಸಂದರ್ಭ ಬೆಳ್ತಂಗಡಿಯ ಕಾರ್ಮಿಕ ಮುಖಂಡರೊಬ್ಬರ ವಿರುದ್ಧ ವಾಗ್ದಳಿ ನಡೆಸಿದರು.  
ಕಾರ್ಮಿಕ ಸಂಘಟನೆಯವರು ಪ್ರತಿಭಟನೆ, ಧರಣಿಯ ನೆಪದಲ್ಲಿ 47 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಬೆಳ್ತಂಗಡಿಯಲ್ಲಿ ಕಾರ್ಮಿಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಕಾರ್ಮಿಕ ಮುಖಂಡರೊಬ್ಬರು ಆರೋಪ ಮಾಡಿದ್ದರು. ಇದನ್ನು ಕಾರ್ಮಿಕ ಇಲಾಖೆಯಲ್ಲಿ ನಡೆದ ಅವರು ಭಾಗವಹಿಸಿದ್ದ ಸಭೆಯೊಂದರಲ್ಲಿ ಪ್ರಸ್ತಾವಿಸಿದಾಗ ಚಕಾರ ಎತ್ತದೆ ತಲೆ ಕೆಳಗೆ ಹಾಕಿ ಸುಮ್ಮನಿದ್ದರು. ಕಾರ್ಮಿಕರನ್ನು ಬ್ಲಾಕ್ ಮೇಲ್ ಮಾಡುವ ಅವರ ತಂತ್ರವನ್ನು ಖಂಡಿಸುವೆ. ಕಾರ್ಮಿಕರಿಗೆ ಮೋಸ ಮಾಡುವ ಕೆಲಸವನ್ನು ಬಿಡಬೇಕು ಎಂದ ಅವರು, ಕಾರ್ಮಿಕ ಸಂಘಟನೆಯಿಂದ, ನಾಯಕತ್ವದಿಂದ ಅವರನ್ನು ತೆಗೆದು ಹಾಕಿದ್ದೇವೆ. ಅಲ್ಲದೆ ಅವರ ವಿರುದ್ಧ ಸಿಐಟಿಯು ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News