ಕುಂದಾಪುರ: ಒಂದು ವಾರದಲ್ಲಿ ಬೋನಿಗೆ ಬಿದ್ದ ಎರಡನೇ ಚಿರತೆ

Update: 2018-11-16 09:14 GMT

ಕುಂದಾಪುರ, ನ.16: ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಕಾಳಾವರದ ದಯಾನಂದ ಹೆಗ್ಡೆ ಎಂಬವರ ಮನೆ ಸಮೀಪ ವಾರಗಳ ಹಿಂದೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಚಿರತೆಯೊಂದು ಗುರುವಾರ ರಾತ್ರಿ ಸೆರೆಯಾಗಿದೆ. ಈ ಮೂಲಕ ಒಂದೇ ಸ್ಥಳದಲ್ಲಿ ವಾರದೊಳಗೆ ಎರಡು ಚಿರತೆಗಳನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

ಕಾಳಾವರ ಗ್ರಾಮದ ಕಕ್ಕೇರಿ ಪರಿಸರದಲ್ಲಿ ಎರಡು ಚಿರತೆಗಳಿರುವ ಬಗ್ಗೆ ಗ್ರಾಮಸ್ಥರು ಎರಡು ವಾರಗಳ ಹಿಂದೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಇಲಾಖಾಧಿಕಾರಿಗಳು ಸ್ಥಳ ಪರಿಶೀಲಿಸಿ, ಸೂಕ್ತ ಎನಿಸಿದ ದಯಾನಂದ ಹೆಗ್ಡೆಯವರ ಜಾಗದಲ್ಲಿ ನಾಯಿಯೊಂದಿಗೆ ಬೋನ್‌ನ್ನು ಇರಿಸಿದ್ದರು. ನ.9ರಂದು ನಾಯಿಯ ಬೇಟೆಗೆ ಬಂದ ಹೆಣ್ಣು ಚಿರತೆ ಈ ಬೋನಿನೊಳಗೆ ಸೆರೆಯಾಯಿತು.

ಸೆರೆಯಾದ ಚಿರತೆಯನ್ನು ಅರಣ್ಯದಲ್ಲಿ ಬಿಟ್ಟು ಬಂದ ನಂತರ ಅದೇ ದಿನ ಅದೇ ಸ್ಥಳದಲ್ಲಿ ಮತ್ತೆ ನಾಯಿಯೊಂದಿಗೆ ಬೋನನ್ನು ಇರಿಸಲಾಯಿತು. ನ.15ರಂದು ತಡರಾತ್ರಿ ವೇಳೆ ನಾಯಿಯನ್ನು ಹಿಡಿಯಲು ಬಂದ ಗಂಡು ಚಿರತೆ ಬೋನಿನೊಳಗೆ ಬಿದ್ದಿದೆ. ಈ ಬಗ್ಗೆ ಸ್ಥಳೀಯರು ಇಂದು ಬೆಳಗ್ಗೆ 5:30ರ ಸುಮಾರಿಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೋನಿನಲ್ಲಿ ಸೆರೆಯಾದ 8ರಿಂದ 10 ವರ್ಷ ಪ್ರಾಯದ ಗಂಡು ಚಿರತೆಯನ್ನು ಅಭಯಾರಣ್ಯದಲ್ಲಿ ಬಿಟ್ಟಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯ ಅರಣಾಧಿಕಾರಿ ಪ್ರಭಾಕರ ಕುಲಾಲ್, ಉಪ ವಲಯ ಅರಣ್ಯಾಧಿಕಾರಿ ಉದಯ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News