ಸಮಯ ಮಿತಿಯೊಳಗೆ ಪ್ರಕರಣಗಳ ಇತ್ಯರ್ಥ: ಸಚಿವ ಖಾದರ್

Update: 2018-11-16 13:28 GMT

ಮಂಗಳೂರು, ನ.16: ಕಂದಾಯ ಇಲಾಖೆಗೆ ಸಂಬಂಧಿಸಿದ ಜನಸಾಮಾನ್ಯರ ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವ ಮೂಲಕ ಹಾಗೂ ಉಳಿದ ಅರ್ಜಿಗಳನ್ನು ಸಮಯ ಮಿತಿಯೊಳಗೆ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಪುರಭವನದಲ್ಲಿ ಇಂದು ನಡೆದ ದ.ಕ. ಜಿಲ್ಲಾ ಮಟ್ಟದ ಕಂದಾಯ ಅದಾಲತನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಂದಾಯ ಅದಾಲತ್ ನಡೆಸುವ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ಮೂಲವಾಗಿ ಅರಿಯಲು ಸಾಧ್ಯವಾಗುತ್ತದೆ. ಆರ್‌ಟಿಸಿ, ಭೂಪರಿವರ್ತನೆ ಸೇರಿದಂತೆ ಕೆಲವೊಮ್ಮೆ ಮಾಹಿತಿ ಕೊರತೆ ಅಥವಾ ತಪ್ಪು ಮಾಹಿತಿಯಿಂದಾಗಿ ಸಮಸ್ಯೆಗಳು ಇತ್ಯರ್ಥವಾಗಿರುವುದಿಲ್ಲ. ಹಾಗಾಗಿ ಜನರು ಇಲಾಖಾ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗುತ್ತದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಕಂದಾಯ ಅದಾಲತ್ ಮೂಲಕ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ಈ ವ್ಯವಸ್ಥೆ ಮಾಡಲಾಗಿದೆ. ಕೆಲವೊಂದು ಸಮಸ್ಯೆಗಳಿಗೆ ಸಂಬಂಧಿಸಿ ಕಾನೂನು ತಿದ್ದುಪಡಿಗೂ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಅದಾಲತ್‌ಗೆ ಸಚಿವರ ಆಗಮನ ತಡವಾದರೂ, ಕ್ಲಪ್ತ ಸಮಯದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರವರು ಸಾರ್ವಜನಿಕರ ಅಜಿಗರ್ಳ ಪರಿಶೀಲನೆ ನಡೆಸಿದರು.

ಆಸ್ತಿ ಸರ್ವೆ ಬಗ್ಗೆ ಚಿಂತೆ ಬೇಡ, ಪ್ರಾಪರ್ಟಿ ಕಾರ್ಡ್ ಮಾಡಿಸಿ !

ಮಂಗಳೂರು ನಗರದಲ್ಲಿ ಆಸ್ತಿ ಸರ್ವೇ ಬದಲು ಪ್ರಾಪರ್ಟಿ ಕಾರ್ಡ್ ನೀಡಲಾಗುತ್ತಿದೆ. ಇದರಿಂದಾಗಿ ಮಹಾನಗರ ಪಾಲಿಕೆ ಹಾಗೂ ಮಂಗಳೂರು ನಗರಾಭಿ ವೃದ್ಧಿ ಪ್ರಾಧಿಕಾರದಲ್ಲಿ ಖಾತಾವನ್ನು ಸುಲಭದಲ್ಲಿ ಪಡೆಯಬಹುದಾಗಿದೆ. ಅಲ್ಲದೆ ಆಸ್ತಿ ವರ್ಗಾವಣೆ, ಮಾರಾಟಕ್ಕೆ ಇನ್ನು ಮುಂದೆ ಪಿಆರ್ ಕಾರ್ಡ್ ಕಡ್ಡಾಯವಾಗಲಿದೆ. ಸುಮಾರು 7 ಪುಟಗಳಲ್ಲಿ ಆಸ್ತಿಗೆ ಸಂಬಂಧಿಸಿ ಸಮಗ್ರ ದಾಖಲೆ ಒಂದೇ ಕಡೆ ಸಿಗಲಿದೆ. ಆದ್ದರಿಂದ ಸಾರ್ವಜನಿಕರು ಈ ಪ್ರಾಪರ್ಟಿ ಕಾರ್ಡ್ ಮಾಡಿಸಿಕೊಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.

ಭ್ರಷ್ಟಾಚಾರ ಕಂಡು ಬಂದರೆ ಎಸಿಬಿಗೆ ದೂರು ನೀಡಿ

ಕಂದಾಯ ಕೆಲಸಗಳನ್ನು ಮಾಡಿಕೊಡಬೇಕಾದರೆ ಹಣ ಕೇಳುತ್ತಾರೆ. ನಾನು ಕೂಡ ಲಂಚ ನೀಡಿ ಕೆಲಸ ಮಾಡಿಸಬೇಕಾದ ಪ್ರಮೇಯ ಬಂದಿದೆ ಎಂದು ಹಿರಿಯ ನಾಗರಿಕರೊಬ್ಬರು ದೂರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಭ್ರಷ್ಟಾಚಾರ ಕಂಡುಬಂದರೆ ಎಸಿಬಿಗೆ ದೂರು ನೀಡಬೇಕು. ಎಸಿಬಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.

ತಪ್ಪು ಮಾಹಿತಿ ನೀಡಿ ಭೂಪರಿವರ್ತನೆ ಮಾಡಿರುವುದನ್ನು ರದ್ದುಪಡಿಸುವಂತೆ ಹಿರಿಯ ನಾಗರಿಕರೊಬ್ಬರು ಆಕ್ಷೇಪಣಾ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ, ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್, ಪ್ರೊಬೆಷನರಿ ತಹಸೀಲ್ದಾರ್ ಮದನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News