ಮುಡಿಪು: ಕುರ್ನಾಡು ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ

Update: 2018-11-16 13:34 GMT

ಕೊಣಾಜೆ, ನ. 16: ಬಂಟ್ವಾಳ ತಾಲೂಕಿನ ಮುಡಿಪುವಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಯು.ಟಿ.ಖಾದರ್ ಅವರು , ಕಡಿಮೆ ಅಂಕ ಗಳಿಸಿದ ಅಥವಾ ಮೂಲ ಸೌಲಭ್ಯ ಕೊರತೆಯ ಕಾರಣದಿಂದ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಇತರ ಕಾಲೇಜಿನಲ್ಲಿ ಕಲಿಯಲು ಡೊನೇಶನ್, ಶುಲ್ಕ ಸೇರಿದಂತೆ ಬಹಳಷ್ಟು ಸಮಸ್ಯೆ ಎದುರಾಗುವುದನ್ನು ಮನಗಂಡು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಇದೇ ಕಾಲೇಜಿನಲ್ಲಿ ಶಿಕ್ಷಣ ಸಿಗಬೇಕು ಎಂಬ ನೆಲೆಯಲ್ಲಿ ಎಲ್ಲ ಸೌಲಭ್ಯಗಳನ್ನೊಳಗೊಂಡ ನೂತನ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಮಾಡಲಾಗಿದೆ. ನಾಲ್ಕು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದುಈಗಾಗಲೇ ಎರಡು ಕೋಟಿ ರೂ. ಮಂಜೂರಾತಿ ಆಗಿದೆ. ಮುಂದಿನ ದಿನಗಳಲ್ಲಿ ಎರಡು ಕೋಟಿ ರೂ. ಮಂಜೂರಾತಿ ಆಗಲಿದೆ ಎಂದರು.

ಮುಡಿಪು ಕಾಲೇಜಿಗೆ ಉತ್ತಮ ಹೆಸರು ಇದ್ದು ನೂತನ ಕಟ್ಟಡ ನಿರ್ಮಾಣದ ಜವಬ್ದಾರಿ ಹೊತ್ತಿರುವ ಎಂಜಿನಿಯರ್‍ಗಳು ಸರಕಾರ ಮಂಜೂರು ಮಾಡಿರುವ ಹಣ ನೋಡಿ ಕಟ್ಟಡ ಕಟ್ಟಬೇಡಿ. ಮುಂದಿನ ಮುವತ್ತು ವರ್ಷದ ಮಕ್ಕಳ ಸಂಖ್ಯೆಗನುಗುಣವಾಗಿ ಎಲ್ಲ ಸೌಲಭ್ಯಗಳಿರುವ ಮುಂದಿನ ಕಾಲಘಟ್ಟಕ್ಕನುಗುಣವಾಗಿ ಕೊಡಬೇಕಾದ ಶಿಕ್ಷಣ ವಾಚನಾಲಯ, ಪ್ರಾಂಶುಪಾಲರ ಕೊಠಡಿ, ಶೌಚಾಲಯ, ಅಗಲವಾದ ಮೆಟ್ಟಿಲು, ವರಾಂಡ, ಕಚೇರಿ ನೆಲ ಅಂತಸ್ತು ಹಾಗೂ ಮೂರು ಅಂತಸ್ತುಗಳ ಕಟ್ಟಡದ ಸೇರಿದಂತೆ ಎಲ್ಲದರ ಬಗ್ಗೆ ದೂರದೃಷ್ಟಿ ಇಟ್ಟುಕೊಂಡು ಕಟ್ಟಡ ನಿರ್ಮಿಸಬೇಕಿದ್ದು ಅನುದಾನ ಕೊರತೆ ಎದುರಾದರೆ ಸರಕಾರದಿಂದ ಶಿಕ್ಷಣಕ್ಕಾಗಿ ಅನುದಾನ ಅಗತ್ಯವಿದೆ ಎಂದು ಹೇಳಿ ಇನ್ನಷ್ಟು ಅನುದಾನ ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಜವ ಅವರು ಮಾತನಾಡಿ,  ಸಚಿವ ಯು.ಟಿ. ಖಾದರ್ ಅವರು ಈ ಕ್ಷೇತ್ರಕ್ಕೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಟ್ಟಿದ್ದಾರೆ. ಹಾಗೆಯೇ ಮುಡಿಪು ಕಾಲೇಜಿನ ಬಗ್ಗೆಯೂ ಅಪಾರ ಒಲವು ಇದ್ದು ಅವರು ಈ ಕಾಲೇಜಿಗೆ ಎಲ್ಲ ಸೌಲಭ್ಯ ದೊರಕಿಸಿ ಕೊಡುವ ಭರವಸೆ ಇದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಸದಸ್ಯರುಗಳಾದ ಹೈದರ್ ಕೈರಂಗಳ, ನವೀನ್ ಪಾದಲ್ಪಾಡಿ, ಕುರ್ನಾಡು ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಅಬ್ದುಲ್ ಜಲೀಲ್ ಮೋಂಟುಗೋಳಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಉಮ್ಮರ್ ಪಜೀರು, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಸಿರ್ ನಡುಪದವು, ಜನಾರ್ದನ ಕುಲಾಲ್, ರಮೇಶ್ ಶೇಣವ, ನಿವೃತ್ತ ದೈಹಿಕ ಶಿಕ್ಷಕ ಶೀನ ಶೆಟ್ಟಿ, ನಿವೃತ್ತ ಉಪನ್ಯಾಸಕ ಕೆ.ಟಿ. ಅಳ್ವ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಷ್ಪಕ್ ಅಹ್ಮ್ಮದ್ ಮೇಗೇರಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು, ಮೊಂಟೆಪದವು ಪ್ರೌಢಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮುರಳೀಧರ ಶೆಟ್ಟಿ ಮೋರ್ಲ, ಬಂಟ್ವಾಳ ತಾಲೂಕು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಉಮೇಶ್ ಭಟ್, ಸಹಾಯಕ ಅಭೀಯಂತರ ರವೀಂದ್ರ ಶೆಟ್ಟಿ, ಜಗದೀಶ್ವರ ಭಟ್ ಕೊಡಕ್ಕಲ್ಲು ಉಪಸ್ಥಿತರಿದ್ದರು.   

ಕುರ್ನಾಡು ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಜವ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್ ರಾವ್ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News