ಡಿ. 5ರಂದು ‘ಅಡಿಕೆ ಕೌಶಲ್ಯ ಪಡೆ’ ತರಬೇತಿ: ಕ್ಯಾಂಪ್ಕೋದಿಂದ ಅಡಿಕೆ ಮರ ಏರುವ ಬಗ್ಗೆ ಶಿಬಿರ

Update: 2018-11-16 13:38 GMT

ಮಂಗಳೂರು, ನ.16: ಕ್ಯಾಂಪ್ಕೋ ಸಂಸ್ಥೆಯು ಕಾಸರಗೋಡು ಸಿಪಿಸಿಆರ್‌ಐ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ, ತೋಟಗಾರಿಕಾ ಇಲಾಖೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಅಡಿಕೆ ಪತ್ರಿಕೆ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದಲ್ಲಿ ಡಿ. 5ರಿಂದ ಐದು ದಿನಗಳ ‘ಅಡಿಕೆ ಕೌಶಲ್ಯ ಪಡೆ’ ತರಬೇತಿ ಶಿಬಿರವನ್ನು ಆಯೋಜಿಸಿದೆ.

ವಿಟ್ಲದ ಸಿಪಿಸಿಆರ್‌ಐನಲ್ಲಿ ನಡೆಯಲಿರುವ ಶಿಬಿರದಲ್ಲಿ ವಿಷಯ ಸಂಬಂಧಿಸಿ ವೈವಿಧ್ಯಮಯ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಅಡಿಕೆ ಹಾಗೂ ತೆಂಗು ಕೃಷಿಯಲ್ಲಿ ಮರ ಹತ್ತಿ ಕಾಯಿಗಳನ್ನು ಕೊಯ್ಯುವ, ಔಷಧಿ ಸಿಂಪಡಿಸಲು ಕುಶಲ ಕಾರ್ಮಿಕರ ಕೊರತೆ ಇದೆ. ಇದನ್ನು ಮನಗಂಡು ಈ ತರಬೇತಿಯನ್ನು ನಡೆಸಲಾಗುತ್ತಿದೆ. ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ನಡೆಸಲಾದ ಶಿಬಿರ ಯಶಸ್ವಿಯಾಗಿದೆ. ರಂಜನ್ ಸುಬ್ರಹ್ಮಣ್ಯ ಹೊರಬೈಲು ಮೊದಲಾದ ಯುವಕರು ದಿನಕ್ಕೆ ಕನಿಷ್ಠ ಒಂದು ಸಾವಿರ ರೂ. ಸಂಪಾದಿಸುವ ಕಲೆಯನ್ನು ಅರಿತುಕೊಂಡಿದ್ದಾರೆ. ತರಬೇತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ‘ಫಾಲ್ ಅರೆಸ್ಟರ್’ ಅಳವಡಿಕೆಯೊಂದಿಗೆ ಸುರಕ್ಷಾ ಉಪಕರಣ ಜೋಡಣೆಯ ಅಧ್ಯಯನ ನಡೆಸುತ್ತಿದ್ದಾರೆ. ಶಿಬಿರಾರ್ಥಿಗಳಿಗೆ ಶಿಷ್ಯವೇತನ, ಸಮವಸ್ತ್ರ ಹಾಗೂ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.

ಶಿಬಿರದ ಹೆಚ್ಚಿನ ಮಾಹಿತಿಗಾಗಿ ಡಾ. ಕೇಶವ ಭಟ್- 8277085489 ಅಥವಾ, ಕಿಶನ್ ಪಳ್ಳತ್ತಡ್ಕ- 9495096848ನ್ನು ಸಂಪರ್ಕಿಸಬಹುದು.
ಈ ಸಂದರ್ಭ ಶಿಬಿರದ ಲೋಗೆವನ್ನು ಬಿಡುಗಡೆಗೊಳಿಸಲಾಯಿತು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಶಂಕರ ನಾರಾಯಣ ಭಟ್, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ಎ.ಆರ್.ಡಿ.ಎಫ್. ಕಾರ್ಯನಿರ್ವಾಹಕ ಅಧಿಕಾರಿ ಾ. ಕೇಶವ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News