ದಕ್ಷಿಣ ವಲಯ ಅಂತರ ವಿವಿ ಮಹಿಳೆಯರ ಕಬಡ್ಡಿ ಪಂದ್ಯಾಟ: ಮಂಗಳೂರು ವಿವಿಗೆ ಚಿನ್ನದ ಪದಕ

Update: 2018-11-16 14:04 GMT

ಮಂಗಳೂರು, ನ.16: ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನ.12ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವದ್ಯಾನಿಲಯವು ಪ್ರಥಮ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯವನ್ನು 36-16 ಅಂಕಗಳಿಂದ ಸೋಲಿಸಿ ಅಖಿಲ ಭಾರತ ಮಟ್ಟಕ್ಕೆ ತೇರ್ಗಡೆಗೊಂಡಿತು.

ಮಂಗಳೂರು ವಿವಿ ಕಳೆದ ಬಾರಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತ್ತು. ದಕ್ಷಿಣ ವಲಯ ಮಟ್ಟದಲ್ಲಿ ಲೀಗ್ ಪಂದ್ಯಾವಳಿಗೆ ಅರ್ಹತೆ ಪಡೆದು ಪ್ರಥಮ ಲೀಗ್ ಪಂದ್ಯಾವಳಿಯಲ್ಲಿ ಕೇರಳ ವಿಶ್ವವಿದ್ಯಾನಿಲಯವನ್ನು 33-20 ಅಂಕಗಳಿಂದ, ದ್ವಿತೀಯ ಲೀಗ್ ಪಂದ್ಯಾವಳಿಯಲ್ಲಿ ತಮಿಳುನಾಡು ಕ್ರೀಡಾ ವಿಶ್ವವಿದ್ಯಾನಿಲಯವನ್ನು 46-30 ಅಂಕಗಳಿಂದ ಹಾಗೂ ಕೊನೆಯ ಲೀಗ್ ಪಂದ್ಯಾವಳಿಯಲ್ಲಿ ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯವನ್ನು 42-14 ಅಂಕಗಳಿಂದ ಸೋಲಿಸಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಈ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕೇರಳ ವಿಶ್ವವಿದ್ಯಾನಿಲಯ, ತಮಿಳುನಾಡು ಕ್ರೀಡಾ ವಿಶ್ವವಿದ್ಯಾನಿಲಯ ತೃತೀಯ ಸ್ಥಾನವನ್ನು, ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯ ಚತುರ್ಥ ಸ್ಥಾನವನ್ನು ಪಡೆದಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ತಂಡದಲ್ಲಿ ಸೌಮ್ಯಾ ಎ., ಇಂಚರ ಕೆ. ಶೆಟ್ಟಿ, ಪ್ರಜ್ಞಾ, ನವ್ಯ ಜೆ.ಕೆ., ಆತ್ಮೀಯ ಎಂ.ಬಿ., ಧನಲಕ್ಷ್ಮೀ, ಶೋಭಾ ವಾಲಿಕರ್, ಸೌಜನ್ಯ ಪಿ. ಸೂರದ್, ಖತಿಜಥುಲ್ ಕುಬ್ರ, ತೇಜಶ್ರೀ, ತೃಪ್ತಿ ಪಿ.ಜಿ., ಪವಿತ್ರ ಹಾಗೂ ತರಬೇತುದಾರರಾಗಿ ಹಂಸಾವತಿ ಸಿ.ಎಚ್. ಹಾಗೂ ವ್ಯವಸ್ಥಾಪಕರಾಗಿ ಸಿದ್ದರಾಮಣ್ಣ ಕೆ.ಎಲ್. ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News