ಉಡುಪಿ ಜಿಲ್ಲೆಯಲ್ಲಿ ಶಿಶು ಮರಣದ ಹೆಚ್ಚಳಕ್ಕೆ ದಿಶಾ ಸಭೆ ಕಳವಳ

Update: 2018-11-16 14:41 GMT

ಉಡುಪಿ, ನ.16: ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಮುಂಚೂಣಿ ಯಲ್ಲಿರುವ ಉಡುಪಿ ಜಿಲ್ಲೆಯಲ್ಲೆ ಕಳೆದ ವರ್ಷ 135 ಹಾಗೂ ಈ ವರ್ಷ ಇದುವರೆಗೆ 68 ಶಿಶು ಮರಣಗಳು ಸಂಭವಿಸಿರುವ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಜಿಲ್ಲೆಯಲ್ಲಿ ಶಿಶು ಮರಣದ ಬಗ್ಗೆ ವಿವರಗಳನ್ನು ನೀಡುತ್ತಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಜಿಲ್ಲೆಯಲ್ಲಿ ಶಿಶುಮರಣದ ಪ್ರಮಾಣ ಕಳೆದ ವರ್ಷ ಶೇ.9 ಹಾಗೂ ಈ ವರ್ಷ ಶೇ.7.67 ಆಗಿದ್ದರೂ, ರಾಜ್ಯದ ಪ್ರಮಾಣಕ್ಕಿಂತ (ಶೇ.24) ತುಂಬಾ ಕಡಿಮೆ ಇದೆ ಎಂದರು.

ಆದರೆ ಉಡುಪಿಯಂಥ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದ ಜಿಲ್ಲೆಯಲ್ಲಿ ಈ ಪ್ರಮಾಣ ನಿರೀಕ್ಷೆಗಿಂತ ಅಧಿಕವಾಗಿದೆ. ಗರ್ಭಿಣಿ ಸ್ತ್ರೀಯರಿಗೆ, ಅಪೌಷ್ಠಿಕತೆ ಹೊಂದಿರುವ ಮಹಿಳೆಯರಿಗೆ ಮಾತೃಶ್ರೀ, ಮಾತೃಪೂರ್ಣ ಹಾಗೂ ಮಾತೃ ವಂದನದಂಥ ಕಾರ್ಯಕ್ರಮಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅನುಷ್ಠಾನಗೊಳಿಸಿದ ಬಳಿಕವೂ ಇದು ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ಶೋಭಾ ಕರಂದ್ಲಾಜೆ ನುಡಿದರು.

ಕಳೆದ ವರ್ಷ ಸತ್ತ 135 ಮಕ್ಕಳಲ್ಲಿ 103 ಮಕ್ಕಳು ಬಿಪಿಎಲ್ ಹಾಗೂ ಉಳಿದ 32 ಎಪಿಎಲ್ ವರ್ಗಕ್ಕೆ ಸೇರಿದವು. ವಲಸೆ ಬಂದ ಹೆತ್ತವರ ಇಬ್ಬರು ಮಕ್ಕಳು ಮೃತಪಟ್ಟರೆ, ಜಿಲ್ಲೆಯವರೇ ಆದ ಹೆತ್ತವರ 133 ಮಕ್ಕಳು ಮೃತಪಟ್ಟಿದ್ದಾವೆ. ಸತ್ತ ಮಕ್ಕಳಲ್ಲಿ 16 ಮಗು ಕಡಿಮೆ ತೂಕ ಹೊಂದಿದ್ದರೆ, 12ಅವಧಿಪೂರ್ವ ಜನನದಿಂದ, 11 ಉಸಿರಾಟದ ತೊಂದರೆಯಿಂದ, 7 ನ್ಯೂಮೇನಿಯಾದಿಂದ, ಹೃದಯದ ತೊಂದರೆಯಿಂದ 16 ಹಾಗೂ ಇತರ ಕಾರಣಗಳಿಂದ 27 ಮಕ್ಕಳು ಮೃತಪಟ್ಟಿವೆ ಎಂದು ಡಾ.ರೋಹಿಣಿ ಮಾಹಿತಿ ನೀಡಿದರು.

ಈ ವರ್ಷದ ಶಿಶು ಮರಣದಲ್ಲಿ 33 ಗಂಡುಮಗು ಹಾಗೂ 35 ಹೆಣ್ಣು ಮಗು ಮೃತಪಟ್ಟಿವೆ. ಹುಟ್ಟಿದ ಒಂದು ದಿನದೊಳಗೆ 12 ಮಕ್ಕಳು ಮೃತಪಟ್ಟರೆ, 29ದಿನದಿಂದ ಒಂದು ವರ್ಷದೊಳಗೆ 28 ಮಕ್ಕಳು ಮೃತಪಟ್ಟಿವೆ. 7ಕಡಿಮೆ ತೂಕದ 6 ಅವಧಿಗೆ ಪೂರ್ವ ಜನಿಸಿದ ಮಕ್ಕಳು ಮೃತಪಟ್ಟಿವೆ ಎಂದು ಅವರು ವಿವರಿಸಿದರು. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 7 ಮಂದಿ ತಾಯಂದಿರುವ ಮೃತಪಟ್ಟಿದ್ದಾರೆ ಎಂದು ಡಾ.ರೋಹಿಣಿ ವಿವರಿಸಿದರು.

ಹೆದ್ದಾರಿ ಯೋಜನೆ: ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳನ್ನು ಹಾಗೂ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಶೋಭಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಿತ ಗುತ್ತಿಗೆದಾರ ಕಂಪೆನಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದರು.

ಹೆದ್ದಾರಿ ಕಾಮಗಾರಿಗಳಿಗೆ ಸಂಬಂಧಪಟ್ಟ ಯಾವುದೇ ಯೋಜನೆಗಳು ಕೇಂದ್ರ ಸರಕಾರದ ಹಂತದಲ್ಲಿ ಬಾಕಿ ಇದ್ದರೆ ತನ್ನ ಗಮನಕ್ಕೆ ತರಬೇಕು. ಕೇಂದ್ರ ಸರಕಾರವು ರಾಜ್ಯದ ಹೆದ್ದಾರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ನಡೆಸಲು ಉನ್ನತ ಅಧಿಕಾರಿಯೊಬ್ಬರನ್ನು ಬೆಂಗಳೂರಿನಲ್ಲಿ ನಿಯೋಜಿಸಿದೆ. ಈ ನಿಟ್ಟಿನಲ್ಲಿ ಕಾಮಗಾರಿ ಪೂರ್ವ ಯಾವುದೇ ಪ್ರಕ್ರಿಯೆಗಳು ವಿಳಂಬವಾಗಿದ್ದರೆ, ಅಧಿಕಾರಿ ಗಳು ಆ ಬಗ್ಗೆ ನಿರಂತರವಾಗಿ ಗಮನಹರಿಸಬೇಕು. ನಾನು ಕೇಳಿದ ಬಳಿಕ ಸಬೂಬುಗಳನ್ನು ಹೇಳಬಾರದು ಎಂದು ಸಂಸದರು ತಿಳಿಸಿದರು.

ಈಗಾಗಲೇ ಕೈಗೆತ್ತಿಕೊಂಡಿರುವ ಉಡುಪಿ-ಮಣಿಪಾಲ ಚತುಷ್ಪಥ ರಸ್ತೆ ಕಾಮಗಾರಿ, ಜನರಿಗೆ ಸಮಸ್ಯೆಯಾಗದಂತೆ, ಸುಗಮವಾಗಿ ನಡೆಯಲು ಕೆಲವು ಸಲಹೆ-ಸೂಚನೆಗಳನ್ನು ನೀಡಿದ ಅವರು ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಬೇಕು ಎಂದು ನಿರ್ದೇಶನ ನೀಡಿದರು.

ವಸತಿ ನಿರ್ಮಾಣದಲ್ಲಿ ಬಡವರ ಮನೆ ನಿರ್ಮಾಣ ಯೋಜನೆಯಲ್ಲಿ ಫಲಾನುಭವಿಗಳಿಗೆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು. ಇದರಲ್ಲಿ ವಿಳಂಭ ಸಲ್ಲದು. 94 ಸಿ ಹಕ್ಕು ಪತ್ರ ಮಂಜೂರು ಸಂದರ್ದಲ್ಲಿ ಭೂಮಿಯ ಒಡೆತನದ ಬಗ್ಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಮಧ್ಯೆ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟೀ ಸರ್ವೇ ನಡೆಸಿ, ಅದನ್ನು ಪರಿಹರಿಸಿಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಪ್ರತೀ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ಆರೋಗ್ಯ ಮೇಳವನ್ನು ನಡೆಸಲಾಗುತ್ತಿದ್ದು, ಇದಕ್ಕಾಗಿ 12 ಲಕ್ಷ ರೂ. ಬಜೆಟ್‌ನ್ನು ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಮೇಳ ನಡೆಸಲು ಯೋಚಿಸ ಲಾಗಿದ್ದು, ಎಲ್ಲಾ ವಿಧದ ತಪಾಸಣೆ ಹಾಗೂ ವಿವಿಧ ಆರೋಗ್ಯ ಯೋಜನೆಗಳ ಮಾಹಿತಿಯನ್ನು ಇದರಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News