ಸಮಾಜದ ಅತಿಬಡ ಜನರ ಜೀವನಮಟ್ಟದಿಂದ ದೇಶದ ಅಭಿವೃದ್ಧಿಯನ್ನು ಅಳೆಯಲಿ: ಡಾ.ಸುದರ್ಶನ ಬಲ್ಲಾಳ್

Update: 2018-11-16 14:44 GMT

ಮಣಿಪಾಲ, ನ.16: ಯಾವುದೇ ದೇಶದ ಅಭಿವೃದ್ಧಿಯನ್ನು ಅಳೆಯುವಾಗ, ಆ ದೇಶದಲ್ಲಿರುವ ಸಮಾಜದ ಅತಿ ಬಡಜನರ ಜೀವನಮಟ್ಟವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೇ ಹೊರತು ಅಲ್ಲಿನ ಶ್ರೀಮಂತರ ಜೀವನಮಟ್ಟವನ್ನಲ್ಲ. ಇದರಿಂದಾಗಿಯೇ ನಾವು ವೈಫಲ್ಯತೆಯನ್ನು ಕಾಣುತಿದ್ದೇವೆ. ದೇಶದ ‘ಉಳ್ಳವರು ಹಾಗೂ ಇಲ್ಲದವರ’ ನಡುವಿನ ಅಸಮಾನತೆಯನ್ನು ಬದಲಿಸದೇ ಹೋದರೆ ಅದು ಅತೀ ದೊಡ್ಡ ದುರಂತ ಹಾಗೂ ಕ್ರಾಂತಿಗೆ ಕಾರಣವಾಗಬಹುದು ಎಂದು ಬೆಂಗಳೂರಿನ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಡಾ.ಎಚ್. ಸುದರ್ಶನ್ ಬಲ್ಲಾಳ್ ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶುಕ್ರವಾರ ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ 26ನೇ ಘಟಿಕೋತ್ಸವ ದಲ್ಲಿ ಮೊದಲ ದಿನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡುತಿದ್ದರು.

ನಮ್ಮ ದೇಶದಲ್ಲಿ ಪ್ರಪಂಚದ ಅತೀ ದೊಡ್ಡ ಕೊಳೆಗೇರಿಯ ಪಕ್ಕದಲ್ಲೇ ಪ್ರಪಂಚದಲ್ಲೇ ಅತ್ಯಂತ ದುಬಾರಿಯಾದ ಬಂಗ್ಲೆ ತಲೆಎತ್ತಿರುವುದನ್ನು ನಾವು ನೋಡ ಬಹುದು. ಅದೇ ರೀತಿ ಅತ್ಯಾಧುನಿಕ ಸೆವೆನ್‌ಸ್ಟಾರ್ ಆಸ್ಪತ್ರೆಯ ಸನಿಹದಲ್ಲಿ, ಅಪೌಷ್ಠಿಕತೆ ಹಾಗೂ ಅತಿಸಾರದಿಂದ ಮಕ್ಕಳು ಸಾಯುತ್ತಿರುವ ಕುಸಿಯುವ ಸ್ಥಿತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಮ್ಮಲ್ಲಿವೆ. ಮಹಾತ್ಮಗಾಂಧಿ ಜನಿಸಿದ ಈ ನಾಡಲ್ಲಿ ನಾವು ಅಸಹ್ಯಕರ ಅಪರಾಧ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತೇವೆ ಎಂದವರು ನುಡಿದರು.

ನಮ್ಮೀ ಸಮಾಜದ ಒಂದು ವರ್ಗದ ಅಸಹಿಷ್ಣುತೆ, ಲಿಂಗ ಅಸೂಕ್ಷ್ಮತೆ, ಮತ್ತೊಬ್ಬರ ಹಕ್ಕಿನ ಕುರಿತಂತೆ ತೀವ್ರವಾದ ಅಸಡ್ಡೆ, ವೌಲ್ಯ ರಹಿತ ಜೀವನ, ನೈತಿಕತೆ ಹಾಗೂ ನಾಗರಿಕತೆಯ ಕೊರತೆಯ ಸ್ವಭಾವವನ್ನು ನೋಡಿ ನನಗೆ ದಿಗಿಲಾಗುತ್ತಿದೆ. ಈ ವಿಷಯಗಳೆಲ್ಲವೂ ನಮ್ಮ ಶಾಲಾ-ಕಾಲೇಜುಗಳ ಪಠ್ಯಕ್ರಮಗಳಲ್ಲಿರಬೇಕೆಂದು ನಾನು ಬಯಸುತ್ತೇನೆ ಎಂದು ಡಾ.ಬಲ್ಲಾಳ್ ಹೇಳಿದರು.

ದೇಶದ ಭವಿಷ್ಯವಾಗಿರುವ ನೀವು ನಿಮ್ಮ ಕಾಲುಗಳನ್ನು ಗಟ್ಟಿಯಾಗಿ ನೆಲದಲ್ಲಿಟ್ಟು ನಕ್ಷತ್ರದತ್ತ ಕಣ್ಣು ನೆಡಬೇಕು. ನೀವೇನಾಗಿದ್ದೀರೊ ಅದಕ್ಕೆ ತೃಪ್ತಿ ಪಡಿ. ಇನ್ನೊಬ್ಬರನ್ನು ಅನುಸರಿಸಲು ಯಾವತ್ತೂ ಹೋಗಬೇಡಿ. ಪ್ರಾಮಾಣಿಕ ಹಾಗೂ ಕಠಿಣ ಪ್ರಯತ್ನ ನಿಮ್ಮ ಬೀಜಮಂತ್ರವಾಗಿರಲಿ ಎಂದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.

ಮಾಹೆಯ 26ನೇ ಘಟಿಕೋತ್ಸವದಲ್ಲಿ ಒಟ್ಟು 5084 ಮಂದಿ ಪದವಿಗಳನ್ನು ಸ್ವೀಕರಿಸಲಿದ್ದಾರೆ. ಮೊದಲ ದಿನವಾದ ಇಂದು 1387 ಮಂದಿ ತಮ್ಮ ಪದವಿಗಳನ್ನು ಸ್ವೀಕರಿಸಿದರು. ಆರು ಮಂದಿ ಡಾ.ಟಿಎಂಎ ಪೈ ಚಿನ್ನದ ಪದಕ ಸ್ವೀಕರಿಸಿದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಘಟಿಕೋತ್ಸವದ ಆರಂಭ ಘೋಷಿಸಿದರೆ, ಸಹ ಕುಲಪತಿ ಡಾ.ಪೂರ್ಣಿಮಾ ಬಾಳಿಗಾ ಸ್ವಾಗತಿಸಿದರು. ಕುಲಪತಿ ಡಾ.ಎಚ್.ವಿನೋದ್ ಭಟ್ ಮಾಹೆ ನಡೆದು ಬಂದ ದಾರಿಯನ್ನು ವಿವರಿಸಿದರೆ, ಕೆಎಂಸಿಯ ಡೀನ್ ಡಾ.ಪಗ್ನಾ ರಾವ್ ಅತಿಥಿಗಳನ್ನು ಪರಿಚಯಿಸಿ ದರು. ರಿಜಿಸ್ಟ್ರಾರ್ ಡಾ.ವಿನೋದ್ ನಾಯಕ್ ಘಟಿಕೋತ್ಸವದ ವಿವರಗಳನ್ನೂ ನೀಡಿದರೆ, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಂದಿಸಿದರು. ಡಾ.ಅಪರ್ಣ ರಘು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News