ಆರ್‌ಟಿಒ ನೇಮಕಾತಿಗಾಗಿ ಜನವರಿಯಲ್ಲಿ ಕಾಯ್ದೆಗೆ ತಿದ್ದುಪಡಿ: ತಮ್ಮಣ್ಣ

Update: 2018-11-16 14:48 GMT

ಉಡುಪಿ, ನ.16: ರಾಜ್ಯದಲ್ಲಿ ಆರ್‌ಟಿಓ ಹಾಗೂ ಬ್ರೇಕ್ ಇನ್‌ಸ್ಪೆಕ್ಟರ್‌ಗಳ ಕೊರತೆ ಇದ್ದು, ಈ ಹುದ್ದೆಗಳಿಗೆ ಇಲಾಖೆಯಿಂದಲೇ ನೇಮಕಾತಿ ಮಾಡಿ ಕೊಳ್ಳುವ ನಿಟ್ಟಿನಲ್ಲಿ ಮೋಟಾರು ವಾಹನ ಕಾಯಿದೆಗೆ ಜನವರಿ ತಿಂಗಳಲ್ಲಿ ತಿದ್ದುಪಡಿ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಉಡುಪಿ ನಗರದಲ್ಲಿರುವ ನಗರ ಸಾರಿಗೆ ಹಾಗೂ ಬನ್ನಂಜೆಯಲ್ಲಿರುವ ಗ್ರಾಮಾಂತರ ಸಾರಿಗೆ(ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮ ದವರೊಂದಿಗೆ ಮಾತನಾಡುತಿದ್ದರು.

ಆರ್‌ಟಿಒ ಹಾಗೂ ಬ್ರೇಕ್ ಇನ್‌ಸ್ಪೆಕ್ಟರ್ ನೇಮಕಾತಿಗೆ ಸಂಬಂಧಿಸಿ 150 ಹುದ್ದೆಗಳು ಸುಪ್ರೀಂ ಕೋರ್ಟ್‌ನಲ್ಲಿ ಹಾಗೂ 130 ಹುದ್ದೆಗಳು ಕೆಪಿಎಸ್‌ನಲ್ಲಿ ಬಾಕಿ ಇವೆ. ಒಟ್ಟು 746 ಹುದ್ದೆಗಳಲ್ಲಿ ಸಾಕಷ್ಟು ಆರ್‌ಟಿಓ ಹಾಗೂ ಬ್ರೇಕ್ ಇನ್‌ಸ್ಪೆಕ್ಟರ್‌ಗಳ ಕೊರತೆ ಇದೆ. ಕಾನೂನಿಗೆ ತಿದ್ದುಪಡಿ ತಂದ ನಂತರ ನಾವೇ ನೇರವಾಗಿ ಅರ್ಜಿ ಆಹ್ವಾನಿಸಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬಹುದು ಎಂದರು.

ರಾಜ್ಯ ಸರಕಾರ 3000 ಹೊಸ ಬಸ್‌ಗಳ ಖರೀದಿಗೆ ಅನುಮತಿ ನೀಡಿದೆ. ಕುಂದಾಪುರ ಘಟಕದಲ್ಲಿರುವ ಹಳೆಯ ಬಸ್‌ಗಳನ್ನು ಬದಲಾಯಿಸಿ ಹೊಸದಾಗಿ ನಾಲ್ಕು ರಾಜಹಂಸ, ಮೂರು ಸ್ಲೀಪರ್ ಬಸ್‌ಗಳನ್ನು ನೀಡಲಾಗಿದೆ. ಡಿಸೆಂಬರ್ ಅಂತ್ಯದಲ್ಲಿ ಮತ್ತಷ್ಟು ಹೊಸ ಬಸ್‌ಗಳನ್ನು ನೀಡಲಾಗುವುದು. ಹೊಸ ಬಸ್‌ಗಳ ಖರೀದಿ ನಂತರ ಈ ಭಾಗಕ್ಕೂ ಹೊಸ ಗ್ರಾಮಾಂತರ ಸಾರಿಗೆ ಬಸ್‌ಗಳನ್ನು ನೀಡಲಾುವುದು ಎಂದು ಅವರು ತಿಳಿಸಿದರು.

ಹೊಸ ತಾಲೂಕು ಹಾಗೂ ಸರಕಾರಿ ಕಚೇರಿಗಳು ಇಲ್ಲದ ಹಳೆಯ ತಾಲೂಕು ಗಳಲ್ಲಿ ಹೈಟೆಕ್ ಬಸ್ ನಿಲ್ದಾಣಗಳನ್ನು ನಿರ್ಮಿಸಿ, ಕೆಳಗಡೆ ಪಾರ್ಕಿಂಗ್ ಹಾಗೂ ಬಸ್ ನಿಲ್ದಾಣಕ್ಕೆ ಅವಕಾಶ ಕಲ್ಪಿಸಿ, ಮೇಲಿನ ಮಹಡಿಗಳಲ್ಲಿ ಸರಕಾರಿ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಲೋಕೋಪಯೋಗಿ ಇಲಾಖೆಯವರು ನಿಗದಿಪಡಿಸುವ ದರದಲ್ಲಿಯೇ ಸರಕಾರಿ ಕಚೇರಿಗಳಿಗೆ ಸ್ಥಳಾವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

ಬಸ್ ನಿಲ್ದಾಣಗಳ ಮೇಲಿನ ಕೊನೆಯ ಮಹಡಿಯಲ್ಲಿ ಮಲ್ಟಿಫೆಕ್ಸ್ ಹಾಗೂ ಫುಡ್ ಕೋರ್ಟ್ ನಿರ್ಮಿಸಲು ಅವಕಾಶ ಕಲ್ಪಿಸಲಾಗುತ್ತದೆ. ಹೀಗೆ ಉಡುಪಿ ಯಲ್ಲಿ ಎರಡು ಮಲ್ಪಿಫೆಕ್ಸ್‌ಗೆ ಅವಕಾಶ ನೀಡಲಾಗಿದೆ. ನಾವು ಕಟ್ಟಡ ನಿರ್ಮಿಸಿ ಮಹಡಿಯನ್ನು ನೀಡುತ್ತೇವೆ. ಆಸಕ್ತರು ಅದರಲ್ಲಿ ಮಲ್ಟಿಫೆಕ್ಸ್ ಹಾಗೂ ಫುಡ್ ಕೋರ್ಟ್‌ಗಳನ್ನು ನಿರ್ಮಿಸಬಹುದಾಗಿದೆ. ಆಯಾ ತಾಲೂಕುಗಳ ಜನಸಂಖ್ಯೆಗೆ ಅನುಗುಣವಾಗಿ ಮಲ್ಟಿಫೆಕ್ಸ್ ನಿರ್ಮಿಸಲು ಅವಕಾಶ ಮಾಡಿಕೊಡಲಾಗುವುದು. ಈಗಾಗಲೇ ಎಂಎಸ್‌ಐಎಲ್ ಸೇರಿದಂತೆ ಕೆಲವರು ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಕ ದೀಪಕ್ ಕುಮಾರ್, ವಿಭಾಗೀಯ ಸಂಚಾರ ನಿಯಂತ್ರಕ ಜೈಶಾಂತ್, ಮುಖ್ಯ ಇಂಜಿನಿಯರ್ ಜಗದೀಶ್‌ಚಂದ್ರ, ವಿಸ್ತರಣ್ ಕನ್ಸ್‌ಸ್ಟಕ್ಷನ್‌ನ ವಿಶಾಲ್, ಉಡುಪಿ ಆರ್‌ಟಿಓ ರಮೇಶ್ ವರ್ಣೆಕರ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಒಟ್ಟು 45ಕೋಟಿ ವೆಚ್ಚದ ಕಾಮಗಾರಿ

ಬನ್ನಂಜೆಯ ಗ್ರಾಮಾಂತರ ಬಸ್ ನಿಲ್ದಾಣದ ಕಾಮಗಾರಿಯು 31.34 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡಿದ್ದು, ಇದರ ಕಾಮಗಾರಿಯು 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಉಡುಪಿಯಲ್ಲಿ ನಗರ ಸಾರಿಗೆ ಬಸ್ ನಿಲ್ದಾಣವು 4ಕೋಟಿ ರೂ. ವೆಚ್ಚದಲ್ಲಿ ಮೂರು ಮಹಡಿಗೆ ಟೆಂಡರ್ ಆಗಿದ್ದು, ಈಗಾಗಲೇ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ನಿಲ್ದಾಣ ಮತ್ತೆ ಎರಡು ಮಹಡಿಯನ್ನು ಹೆಚ್ಚುವರಿಯಾಗಿ ನಿರ್ಮಿಸಿ ವಾಣಿಜ್ಯ ಸಂಕೀರ್ಣಕ್ಕೆ ಅವಕಾಶ ಮಾಡಿಕೊಡಲಾಗುವುದು. ಒಂದು ಕೋಟಿ ರೂ. ವೆಚ್ಚದಲ್ಲಿ ಉಡುಪಿ ಡಿಪೋ ಆವರಣಕ್ಕೆ ಕಾಂಕ್ರೀಟ್ ಆಳವಡಿಸಲಾಗುವುದು. ಬೈಂದೂರಿನಲ್ಲಿ 5ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ಮತ್ತು 4.43ಕೋಟಿ ರೂ. ವೆಚ್ಚದಲ್ಲಿ ಕುಂದಾಪುರ ಘಟಕದ ಮರುನಿರ್ಮಾಣ ಮಾಡಲಾಗುವುದು. ಹೀಗೆ ಸಾರಿಗೆ ಇಲಾಖೆ ಜಿಲ್ಲೆಯಲ್ಲಿ ಒಟ್ಟು 45ಕೋಟಿ ರೂ. ಅನುದಾನವನ್ನು ಮೂಲಭೂತ ಸೌಕರ್ಯ ಗಳಿಗಾಗಿ ವ್ಯಯ ಮಾಡುತ್ತಿದೆ ಎಂದು ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News