4.43ಕೋಟಿ ವೆಚ್ಚದಲ್ಲಿ ಕುಂದಾಪುರ ಘಟಕ ಮರುನಿರ್ಮಾಣ: ತಮ್ಮಣ್ಣ

Update: 2018-11-16 14:50 GMT

ಕುಂದಾಪುರ, ನ.16: ಕುಂದಾಪುರದ ಹಳೆಯ ಕೆಎಸ್‌ಆರ್‌ಟಿಸಿ ಘಟಕವನ್ನು ಕೆಡವಿ 4.43ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಈಗಾಗಲೇ ಯೋಜನೆ ಸಿದ್ಧಪಡಿಸಿದ್ದು, ಟೆಂಡರ್ ಕರೆಯುವ ಹಂತದಲ್ಲಿದೆ ಎಂದು ರಾಜ್ಯ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ಕುಂದಾಪುರದ ಕೆಎಸ್‌ಆರ್‌ಟಿಸಿ ಘಟಕಕ್ಕೆ ಶುಕ್ರವಾರ ಭೇಟಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಈಗ ಇರುವ ಜಾಗದಲ್ಲೇ ಸುಸಜ್ಜಿತ, ಹೆಚ್ಚಿನ ಬಸ್ ನಿಲ್ಲಿಸಲು ಅನುಕೂಲವಾಗುವಂತೆ ಡಿಪೋ ಪುನರ್ ನಿರ್ಾಣ ಮಾಡಲಾಗುವುದು ಎಂದರು.

ಕುಂದಾಪುರ, ಬೈಂದೂರು ಗ್ರಾಮೀಣ ಭಾಗಕ್ಕೆ ಆದ್ಯತೆ ನೆಲೆಯಲ್ಲಿ ಸರಕಾರಿ ಬಸ್ ಸೇವೆ ಆರಂಭಿಸಲಾಗುವುದು. ಕೆಲವೊಂದು ಕಡೆಗಳಲ್ಲಿ ಬಸ್‌ಗಳು ಮಂಜೂರಾಗಿದ್ದರೂ ಕೂಡ ಆರ್‌ಟಿಒ ಕಡೆಯಿಂದ ಸಮಯ ನಿಗದಿಯಾಗದೇ ಬಾಕಿಯಾಗಿದೆ. ಈ ಹಿಂದೆ ಓಡುತ್ತಿದ್ದ ಬಸ್‌ಗಳ ಪೈಕಿ ಕೆಲವು ಬಸ್‌ಗಳು ಸ್ಥಗಿತಗೊಂಡಿರುವ ಬಗ್ಗೆ ಸರ್ವೆ ನಡೆಸಲು ಸೂಚನೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಈ ಹಿಂದಿನ ಬಸ್‌ಗಳನ್ನು ನಿಲ್ಲಿಸುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಶಂಕರನಾರಾಯಣದಲ್ಲಿ ಗ್ರಾಪಂ ವತಿಯಿಂದ ಕಾಯ್ದಿರಿ ಸಲಾಗಿರುವ ಜಾಗದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ತೆರೆಯಬೇಕೆಂದು ಅಲ್ಲಿನ ಹೋರಾಟ ಸಮಿತಿಯ ನಿಯೋಗ ಸಚಿವರಿಗೆ ಮನವಿ ಸಲ್ಲಿಸಿತು. ಈ ಸಂದರ್ಭ ದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ಉಡುಪಿ ಆರ್‌ಟಿಓ ರಮೇಶ್ ವರ್ಣೇಕರ್, ಡಿಟಿಒ ಜೈಶಾಂತ್, ಮುಖ್ಯ ಇಂಜಿನಿಯರ್ ಜಗದೀಶ್‌ಚಂದ್ರ, ಕಾರ್ಯನಿರ್ವಾಹಕ ಇಂಜಿನಿಯರ್ ಪಾಲ ನೇತ್ರ, ವ್ಯವಸ್ಥಾಪಕ ರಾಜೇಶ್, ಜೆಡಿಎಸ್ ಮುಖಂಡ ಹುಸೇನ್ ಹೈಕಾಡಿ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ಆರ್‌ಟಿಒ ಕಚೇರಿ: ಸಚಿವರಿಗೆ ಮನವಿ
ಬೈಂದೂರಿನ ಶಿರೂರು, ಕುಂದಾಪುರದ ಮಡಾಮಕ್ಕಿಯಿಂದ ವಾಹನ ನೋಂದಣಿ ಕೆಲಸಕ್ಕೆ ಸುಮಾರು 200 ಕಿ.ಮೀ. ದೂರದ ಮಣಿಪಾಲಕ್ಕೆ ಹೋಗ ಬೇಕಾಗಿದ್ದು, ಆದ್ದರಿಂದ ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲೆ ಹಾಗೂ ಕುಂದಾಪುರದ ಲಾರಿ ಮಾಲಕರ ಸಂಘ ಶುಕ್ರವಾರ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿತು.

ಮನವಿ ಸ್ವೀಕರಿಸಿದ ಸಚಿವರು, ಆರ್‌ಟಿಒ ಕಚೇರಿ ಬೇಡಿಕೆ ಗಮನದಲ್ಲಿದೆ. ಆದರೆ ಸಾರಿಗೆ ಇಲಾಖೆಯಲ್ಲಿ ಸಿಬಂದಿ ಕೊರತೆಯಿದೆ. ಇದರಿಂದ ಹೊಸದಾಗಿ ಆರ್‌ಟಿಒ ಕಚೇರಿ ತೆರೆಯಲು ಸಮಸ್ಯೆಯಾಗಿದೆ ಎಂದು ತಿಳಿಸಿದರು. ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ, ಮಾಜಿ ಅಧ್ಯಕ್ಷ ರವಿರಾಜ್ ವಂಡ್ಸೆ, ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಅನಿಲ್ ಡಿ.ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News