'ಭಯ ಪಡುವ ವಿಚಾರ ಜಗತ್ತಿನಲ್ಲಿ ಏನೂ ಇಲ್ಲ, ನಿಮ್ಮನ್ನು ನೀವು ನಂಬಿ'

Update: 2018-11-16 15:05 GMT

ಪುತ್ತೂರು, ನ. 16: ಯಾವುದೇ ಸಂದರ್ಭದಲ್ಲಿಯೂ ನಮ್ಮ ಶಕ್ತಿಯ ಬಗ್ಗೆ ನಮಗೆ ಅನುಮಾನವಿರಬಾರದು. ಅನುಮಾನಗಳು ಧೈರ್ಯವನ್ನು ನಾಶ ಮಾಡುತ್ತದೆ. ಧೈರ್ಯ ನಾಶವಾದರೆ ನಮ್ಮಲ್ಲಿನ ಎಲ್ಲಾ ಉತ್ತಮ ಗುಣಗಳು ಹಾಳಾಗುತ್ತದೆ. ಭಯ ಪಡುವ ವಿಚಾರ ಈ ಜಗತ್ತಿನಲ್ಲಿ ಏನೂ ಇಲ್ಲ, ಆದರೆ ಅರ್ಥ ಮಾಡಿಕೊಳ್ಳುವಂತಹುದು ತುಂಬಾ ಇದೆ. ಮೊದಲಿಗೆ ನಿಮ್ಮನ್ನು ನೀವು ಮೊದಲು ನಂಬಿ.ನಂಬಿಕೆಯನ್ನು ಬೆಳೆಸಿಕೊಂಡಲ್ಲಿ ಸಾಧನೆಯ ಹಾದಿ ಸುಲಭ ಎಂದು ಚಿತ್ರನಟ, ನಿರ್ದೇಶಕ, ವೀಕೆಂಡ್ ರಮೇಶ್ ಖ್ಯಾತಿಯ ರಮೇಶ್ ಅರವಿಂದ್ ಹೇಳಿದರು.

ಅವರು ಶುಕ್ರವಾರ ಪುತ್ತೂರು ಕೊಂಬೆಟ್ಟು ಬಂಟರಭವನದಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್, ರಾಮಕೃಷ್ಣ ಪ್ರೌಢಶಾಲೆ, ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಜಂಟಿ ಆಶ್ರಯದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಶುಕ್ರವಾರ ನಡೆದ ‘ನಾಳೆ ನಿಮ್ಮದೇ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬದುಕು ಎಂಬುವುದು ನಂಬಿಕೆಯ ಮೇಲೆ ನಿಂತಿದೆ. ಕೊನೆಯ ಬೆಂಚಿನ ಹುಡುಗನಲ್ಲೂ ಅಪಾರವಾದ ಶಕ್ತಿಯಿದೆ. ಪರೀಕ್ಷೆಯ ಬಗ್ಗೆಯೂ ಭಯ ಪಡುವುದರಿಂದ ಅದನ್ನು ಎದುರಿಸಲು ಸಾಧ್ಯವಿಲ್ಲ. ಎಲ್ಲಾ ವಿಚಾರದಲ್ಲಿಯೂ ಚಿಂತೆಯ ದಾರಿಯಲ್ಲಿ ಸಾಗದೆ ಪ್ರೀತಿಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಿ. ದ್ವೇಷದ ಹಾದಿ ಎಂದಿಗೂ ಬೇಡ ಎಂದರು. ನಾವು ಯಾವ ಬೀಜವನ್ನು ಬಿತ್ತನೆ ನಡೆಸುತ್ತೇವೆಯೋ ಅದೇ ಗಿಡವಾಗುತ್ತದೆ. ಉತ್ತಮ ಗುಣಗಳನ್ನು ಬಿತ್ತಿದರೆ ಮಾತ್ರ ಉತ್ತಮ ನಾಗರಿಕನಾಗುತ್ತಾನೆ ಇದು ಪ್ರಕೃತಿಧರ್ಮವಾಗಿದೆ. ಬದುಕಿನಲ್ಲಿ ನೀವು ಯಶಸ್ವಿಯಾಗಬೇಕಾದರೆ ನಿಮಗೆ ಇಷ್ಟವಾದ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜೀವನದಲ್ಲಿ ಸಣ್ಣ ಸಣ್ಣ ಕೆಲಸಗಳನ್ನು ಸಮರ್ಪಕವಾಗಿ ಮಾಡಿ. ಮನದಲ್ಲಿನ ಚಿಂತನೆ ಹಾಗೂ ವಾಸ್ತವದ ಚಿತ್ರಣ ಒಂದಾಗದಿದ್ದರೆ ನಿಮ್ಮನ್ನು ಒತ್ತಡ ಕಾಡಲು ಪ್ರಾರಂಭ ಮಾಡುತ್ತದೆ. ನಿಮ್ಮಲ್ಲಿ ಶಕ್ತಿ ಇದೆ. ಅದರ ಅರಿವನ್ನು ಪಡೆದುಕೊಂಡು ಮುಂದುವರಿಯಿರಿ ಎಂದು ಹೇಳಿದರು.

ಇಂದು ಮತ್ತು ನಾಳೆಯ ನಡುವೆ ಇರುವದೇ ಜೀವನ. ನಾಳೆಯೇ ಇಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ಅರ್ಥಹೀನ. ಸೋಲು ಜೀವನದಲ್ಲಿ ಸಹಜ. ಆದರೆ ಅದಕ್ಕೆ ಆತ್ಮಹತ್ಯೆ ಚಿಂತನೆ ಬರಲೇಬಾರದು. ಎಷ್ಟೋ ಮಕ್ಕಳು ಪರೀಕ್ಷೆಯಲ್ಲಿ ಪಾಸಾಗಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಇನ್ನು ಮುಂದೆ ಇಂತಹ ಚಿಂತನೆ ಮಾಡಬೇಡಿ ಎಂದ ಅವರು ಮನ:ಶಾಂತಿ ಎಂಬುವುದು ನಿಜವಾದ ಯಶಸ್ಸು. ಸಮಾನ ಆಸಕ್ತಿ ಇರುವ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡಾಗ ಅವರು ನಿಮ್ಮ ಯಶಸ್ಸಿನ ಭಾಗವಾಗುತ್ತಾರೆ. ಬದುಕಿನಲ್ಲಿ ಬರುವ ಅವಕಾಶಗಳನ್ನು ಯಾವತ್ತೂ ಕಳೆದುಕೊಳ್ಳಬೇಡಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಸಲಹೆಗಾರ ಎ.ಪಿ.ರಾಧಾಕೃಷ್ಣ, ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಆಕಾಂಕ್ಷಾ ಟ್ರಸ್ಟ್ ಅಧ್ಯಕ್ಷ ಶ್ರೀಶ ಭಟ್ ಸ್ವಾಗತಿಸಿ, ವಂದಿಸಿದರು. ಸುಕ್ಷಿತಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News