ಸುರತ್ಕಲ್ ಟೋಲ್‌ಗೇಟ್ ರಿಯಾಯಿತಿ ಯಥಾಸ್ಥಿತಿ ಕಾಪಾಡಲು ಹೋರಾಟ ಸಮಿತಿ ಆಗ್ರಹ

Update: 2018-11-16 15:08 GMT

ಮಂಗಳೂರು, ನ.16: ಸುರತ್ಕಲ್ ಟೋಲ್ ಗೇಟ್ ಮುಚ್ಚುವ ಬೇಡಿಕೆಗೆ ಸಂಬಂಧಿಸಿ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿರುವ ಸಂದರ್ಭ ಸುಂಕ ವಸೂಲಿಯ ಗುತ್ತಿಗೆ ಪಡೆದಿರುವ ಹೊಸ ಗುತ್ತಿಗೆದಾರರು ಪಾಸ್ ದರಗಳನ್ನು ಹೆಚ್ಚಿಸಿರುವುದನ್ನು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತೀವ್ರವಾಗಿ ವಿರೋಧಿಸಿದೆ. ಸುರತ್ಕಲ್ ಟೋಲ್‌ಗೇಟ್ ಮುಚ್ಚುಗಡೆಗೆ ಸಂಬಂಧಿಸಿ ಸರಕಾರದ ನಿರ್ಧಾರ ಪ್ರಕಟವಾಗುವವರಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಮಿತಿ ಆಗ್ರಹಿಸಿದೆ.

ಸುರತ್ಕಲ್ ಅಕ್ರಮ ಟೋಲ್‌ಗೇಟ್ ಮುಚ್ವುಗಡೆಗೆ ಆಗ್ರಹಿಸಿ ಹೋರಾಟ ಸಮಿತಿ ನಡೆಸಿದ ಸತತ ಹೋರಾಟದ ನಂತರ ಟೋಲ್‌ಗೇಟ್ ಮುಚ್ಚುಗಡೆಗೆ ಸಂಬಂಧಿಸಿ ಸರಕಾರದ ಇಲಾಖೆಗಳ ನಡುವೆ ಮಾತುಕತೆ, ಪತ್ರವ್ಯವಹಾರ ನಡೆಯುತ್ತಿದೆ. ಟೋಲ್‌ಗೇಟ್ ರದ್ದುಗೊಳಿಸುವ ಕುರಿತು ಸ್ಥಳೀಯ ಕಚೇರಿಯಿಂದ ಕೇಂದ್ರ ಕಚೇರಿಗೆ ಪತ್ರ ತಲುಪಿಸಲಾಗಿದೆ.

ರಾಜ್ಯ ಸರಕಾರ ಮಟ್ಟದಲ್ಲಿ ಸಭೆಗೆ ಸಿದ್ಧತೆ ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ಫಲಿತಾಂಶವನ್ನು ಹೋರಾಟ ಸಮಿತಿ ಕಾಯುತ್ತಿದೆ. ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದೇ ಅವಧಿಯಲ್ಲಿ ಟೋಲ್ ಗುತ್ತಿಗೆಯನ್ನು ಪಡೆದಿರುವ ಹೊಸ ಗುತ್ತಿಗೆದಾರರು ಸ್ಥಳೀಯ ಗೂಡ್ಸ್ ವಾಹನ, ಕ್ಯಾಬ್, ಸಾರಿಗೆ ಬಸ್‌ಗಳ ರಿಯಾಯಿತಿ ದರಗಳನ್ನು ಮರುಪರಿಶೀಲಿಸಿ ಏಕಾಏಕಿ ಮಾಸಿಕ ಪಾಸ್ ದರಗಳನ್ನು ಏರಿಸಲು ನಿರ್ಧರಿಸಿದೆ ಎಂದು ಸಮಿತಿ ತಿಳಿಸಿದೆ.

ಗುತ್ತಿಗೆದಾರರ ಈ ನಡೆ ಯಾವುದೇ ಕಾರಣಕ್ಕೂ ಒಪ್ಪುವಂತಹದ್ದಲ್ಲ. ಟೋಲ್‌ಗೇಟ್ ಮುಚ್ವುವ ಕುರಿತು ಸರಕಾರದ ನಿರ್ಧಾರ ಪ್ರಕಟವಾಗುವವರಗೂ ರಿಯಾಯಿತಿ ಪಾಸ್‌ಗಳಿಗೆ ಸಂಬಂಧಿಸಿ ಹಳೆಯ ದರಗಳನ್ನೇ ಮುಂದುವರಿಸಬೇಕು. ವಾಹನ ಮಾಲಕರು, ಚಾಲಕರು ಸಹ ಏರಿಸಿರುವ ದರಗಳನ್ನು ನೀಡಬಾರದು ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಇದರ ಹೊರತಾಗಿ ಗುತ್ತಿಗೆದಾರರು ಬಲವಂತದ ವಸೂಲಿಗೆ ಮುಂದಾದರೆ ಸಾರಿಗೆ, ಗೂಡ್ಸ್ ವಾಹನದಾರರನ್ನು ಜೊತೆ ಸೇರಿಸಿ ತೀವ್ರ ರೀತಿಯ ಪ್ರತಿಭಟನೆ ನಡೆಸುವುದಾಗಿ ಅವರು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News