ಸ್ಥಳೀಯ ಟ್ಯಾಕ್ಸಿ ಮಾಲಕರು ಬೀದಿಪಾಲು: ಎಸ್‌ಡಿಪಿಐ

Update: 2018-11-16 16:51 GMT

ಮಂಗಳೂರು, ನ.16: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ 45 ವರ್ಷಗಳಿಂದ ಟೂರಿಸ್ಟ್ ಟ್ಯಾಕ್ಸಿ ವಾಹನಗಳನ್ನಿಟ್ಟುಕೊಂಡು ಜೀವನ ಸಾಗಿಸುತ್ತಿರುವ ಸ್ಥಳೀಯರು ಕಳೆದ ಕೆಲವು ದಿನಗಳಿಂದ ವಿಮಾನ ನಿಲ್ದಾಣ ಪ್ರಾಧಿಕಾರದ ಅನುಮತಿಯೊಂದಿಗೆ ಆ್ಯಪ್ ಆಧಾರಿತ (ಓಲಾ- ಉಬರ್) ಟ್ಯಾಕ್ಸಿಗಳಿಂದ ಸ್ಥಳೀಯ ಟ್ಯಾಕ್ಸಿ ಮಾಲಕರು ಬೀದಿಪಾಲಾಗಲಿದ್ದಾರೆ ಎಂದು ಎಸ್‌ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ.

ಸುಮಾರು 200ರಷ್ಟಿರುವ ಸ್ಥಳೀಯ ಟ್ಯಾಕ್ಸಿ ಚಾಲಕರು, ಮಾಲಕರಲ್ಲಿ ಹೆಚ್ಚಿನವರು ಸ್ಥಳೀಯ ವಿಮಾನ ನಿಲ್ದಾಣಕ್ಕೆ ಸ್ವಂತ ಕೃಷಿ ಜಮೀನು ಮತ್ತು ಮನೆಗಳನ್ನು ಕಳೆದುಕೊಂಡು ಆರ್ಥಿಕ ಸಂಸ್ಥೆಗಳಿಂದ ಸಾಲಮಾಡಿ ಹೊಸ ಟ್ಯಾಕ್ಸಿ ವಾಹನಗಳನ್ನು ಹಾಕಿ ದುಡಿಯುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾನದಲ್ಲಿ ದುಡಿಯುತ್ತಿರುವ ಈ ಟ್ಯಾಕ್ಸಿ ಚಾಲಕರು ಸರಕಾರಿ ನಿಗದಿತ ಬಾಡಿಗೆಯನ್ನು ವಸೂಲಿ ಮಾಡಿ, ಅವರ ಜೀವನೋಪಾಯದೊಂದಿಗೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ರೂಪಾಯಿ ಏಳು ಲಕ್ಷ ರೂ. ಲೈಸನ್ಸ್ ಫೀಸ್ ಅಲ್ಲದೇ ವಾಹನ ಪಾಕಿರ್ಂಗ್‌ಗೆ ಬೇರೆಯೇ ಹಣ ಪಾವತಿಸಿ ಬಹಳಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ತಿಳಿಸಿದೆ.

ಆ್ಯಪ್ ಆಧಾರಿತ ಓಲಾ-ಉಬರ್ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳನ್ನು ಅಳವಡಿಸಿದಲ್ಲಿ ಸ್ಥಳೀಯ ಜನತೆಗೆ ತುಂಬಲಾರದ ನಷ್ಟ ಅನುಭವಿಸಲು ಸಾಧ್ಯತೆಯಿದೆ. ತಮ್ಮ ಜೀವನೋಪಾಯ ಈ ವಿಮಾನ ನಿಲ್ದಾಣದ ಟ್ಯಾಕ್ಸಿಗಳನ್ನು ಓಡಿಸಿಯೇ-ನಡೆಸಿಯೇ ಮುಂದುವರಿಯುತ್ತಿರುವುದನ್ನು ಮನಗಂಡು ಯಾವುದೇ ಆ್ಯಪ್ ಆಧಾರಿತ ಓಲಾ-ಉಬರ್ ಟ್ಯಾಕ್ಸಿಗಳಿಗೆ ಅನುಮತಿಯನ್ನು ನೀಡಬಾರದು ಎಂದು ಮನವಿಯಲ್ಲಿ ಎಸ್‌ಡಿಪಿಐ ಒತ್ತಾಯಿಸಿತು.

ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಳೀಯ ಜನತೆಯೊಂದಿಗೆ ಸಹಕರಿಸಬೇಕೇ ಹೊರತು, ಬಹುರಾಷ್ಟಿಯ ಕಂಪೆನಿಯ ತರಹದ ಓಲಾ-ಉಬರ್‌ನಂತಹ ಸಂಸ್ಥೆಗೆ ಸಹಕರಿಸಬಾರದು. ಇದಕ್ಕೆ ದ.ಕ. ಜಿಲ್ಲಾಧಿಕಾರಿ ತಕ್ಷಣ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮನವಿಯಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ, ವಿಮಾನ ನಿಲ್ದಾಣ ಅಧಿಕಾರಿ, ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿಯ ಇಸ್ಮಾಯೀಲ್ ಇಂಜಿನಿಯರ್, ಹಮೀದ್ ಬಜ್ಪೆ, ಜಮಾಲ್, ನಿಸಾರ್ ಮರವೂರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News