ಮನೆಗೆ ನುಗ್ಗಿ ಕಳ್ಳತನ: ದೂರು ದಾಖಲು

Update: 2018-11-16 16:57 GMT

ಪುತ್ತೂರು, ನ. 14: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಹಣ ಹಾಗೂ ಚಿನ್ನಾಭರಣ ದೋಚಿದ ಘಟನೆ ಗುರುವಾರ ರಾತ್ರಿ ಪುತ್ತೂರು ನಗರದ ಹೊರವಲಯದ ಬನ್ನೂರು ಎಂಬಲ್ಲಿ ನಡೆದಿದ್ದು, ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ

ಬನ್ನೂರು ಗ್ರಾಮದ ಆನೆಮಜಲು ಸಮೀಪದ ಮೇಲ್ಮಜಲು ಎಂಬಲ್ಲಿನ ನಿವಾಸಿ ಅನಂತರಾಮ ಮನೆಯಿಂದ ಕಳ್ಳತನ ನಡೆದಿದೆ. ಅನಂತರಾಮ ಅವರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಪತ್ನಿಯ ನಿಧನದ ಬಳಿಕ ಅವರು ಬನ್ನೂರು ಗ್ರಾಮದ ಮೇಲ್ಮಜಲು ಎಂಬಲ್ಲಿರುವ ಮನೆಯಲ್ಲಿ ಒಬ್ಬಂಟಿಯಾಗಿ ವಾಸ್ತವ್ಯವಿದ್ದರು. ಗುರುವಾರ ಅವರು ಊಟ ಮಾಡಿ ಮಲಗಿದ್ದು, ತಡರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು 3 ಪವನ್ ತೂಕದ ಚಿನ್ನದ ಸರ, ಒಂದು ಪವನ್ ತೂಕದ ಚಿನ್ನದ ಉಂಗುರ, ಎರಡು ಕೈಗಡಿಯಾರ ಹಾಗೂ ರೂ. 49 ಸಾವಿರ ನಗದು ಹಣವನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ. 

ಶುಕ್ರವಾರ ಅನಂತರಾಮ ಅವರು ಎದ್ದು ನೋಡುವಾಗ ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಬಳಿಕ ಅವರು ಪರಿಶೀಲನೆ ನಡೆಸಿದಾಗ ಚಿನ್ನಾಭರಣ ಹಾಗೂ ನಗದು ಹಣ ಕಳವು ನಡೆದಿರುವುದು ಅರಿವಿಗೆ ಬಂದಿತ್ತು. ಕಿಟಿಕಿ ಮೂಲಕ ಕೇಬಲ್ ಬಳಸಿ ಬಾಗಿಲಿನ ಚಿಲಕ ಸರಿಸಿ, ಕಳ್ಳರು ಒಳನುಗ್ಗಿರುವ ಸಾಧ್ಯತೆ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣೆಯ ಇನ್ಸ್‍ಪೆಕ್ಟರ್ ತಿಮ್ಮಪ್ಪ ನಾಯ್ಕ, ಎಸ್‍ಐ ಅಜೇಯ್‍ಕುಮಾರ್ ಡಿ.ಎಸ್ ಮತ್ತು ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಕ್ಕದ ಮನೆಯಲ್ಲಿಯೂ ವಿಫಲ ಯತ್ನ

ಬನ್ನೂರು ಮೇಲ್ಮಜಲು ಸಮೀಪದ ಮನೋಹರ್ ರೈ ಎಂಬವರ ಮನೆಗೆ ಶುಕ್ರವಾರ ರಾತ್ರಿ ವೇಳೆ ಕಳ್ಳನೊಬ್ಬ ನುಗ್ಗಿ ಕಳವಿಗೆ ಯತ್ನಿಸಿದ ಹಾಗೂ ಮನೆ ಮಂದಿ ಎಚ್ಚರಗೊಂಡ ಹಿನ್ನಲೆಯಲ್ಲಿ ಆತನ ಯತ್ನ ವಿಫಲಗೊಂಡ ಘಟನೆ ನಡೆದಿದೆ. 

ಶುಕ್ರವಾರ ತಡ ರಾತ್ರಿ ವೇಳೆ ಮನೋಹರ ರೈ ಅವರ ಮನೆಗೆ ಕಳ್ಳನೊಬ್ಬ ನುಗ್ಗಿ ಕೋಣೆಯೊಳಗೆ ಹಣ ಮತ್ತು ಚಿನ್ನಾಭರಣಕ್ಕಾಗಿ ಶೋಧಿಸುತ್ತಿದ್ದ ವೇಳೆ ಮನೋಹರ ರೈ ಅವರ ತಾಯಿ ಎಚ್ಚರಗೊಂಡಿದ್ದರು. ಈ ಹಿನ್ನಲೆಯಲ್ಲಿ ಕಳ್ಳ ಮನೆಯಿಂದ ಹೊರಗೆ ಓಡಿ ಪರಾರಿಯಾಗಿದ್ದ. ಮನೋಹರ ರೈ ಅವರ ಮನೆಯ ಕಿಟಿಕಿ ಗಾಜು ಸರಿಸಿ, ಆ ಮೂಲಕ ಕೇಬಲ್ ಬಳಸಿ ಮನೆಯ ಬಾಗಿಲಿನ ಚಿಲಕ ಸರಿಸಿ ಕಳ್ಳ ಮನೆಯೊಳಗೆ ಪ್ರವೇಶಿಸಿದ್ದ ಎಂದು ತಿಳಿದು ಬಂದಿದೆ. ಈ ಕಳ್ಳನೇ  ಅನಂತರಾಮ ಅವರ ಮನೆಗೆ ನುಗ್ಗಿರುವ ಶಂಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News