ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಯೋಗ ರಚನೆ ಅಗತ್ಯ: ದತ್ತ

Update: 2018-11-17 06:35 GMT

ಮಂಗಳೂರು, ನ.17: ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಬಿಡುಗಡೆಯಾಗುವ ಅನುದಾನ ತೀರಾ ಕನಿಷ್ಠ ಮಟ್ಟದಲ್ಲಿದ್ದು, ರಾಜ್ಯ ಬಜೆಟ್‌ನಲ್ಲಿ ಸಮಾನ ಅನುದಾನ ಹಂಚಿಕೆಯಾಗುತ್ತಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಗೆ ನೂತನ ಆಯೋಗ ರಚನೆ ಅಗತ್ಯ ಎಂದು ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ ಸಮಾವೇಶದ ರತ್ನಾಕರ ವೇದಿಕೆ, ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಶನಿವಾರ ನಡೆದ ವಿಚಾರಗೋಷ್ಠಿಯಲ್ಲಿ ಅಖಂಡ ಕರ್ನಾಟಕ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ದಕ್ಷಿಣ ಕರ್ನಾಟಕದ ಮೂರು ಹೋಬಳಿಗಳು ಸೇರಿದರೆ ಅದು ಉತ್ತರ ಕರ್ನಾಟಕದ ಒಂದು ಹೋಬಳಿಗೆ ಸಮಾನವಾಗುತ್ತದೆ. ಹೀಗಿರುವಾಗ ಬಜೆಟ್ ಹಂಚಿಕೆ ಸಮಯದಲ್ಲಿ ಉತ್ತರ ಕರ್ನಾಟಕ ಮರೀಚಿಕೆಯಾಗುತ್ತಿದೆ. ಈ ಬಗ್ಗೆ ಪುನರ್ ವಿಮರ್ಶೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಅಗತ್ಯವಿದೆ. ಅಖಂಡ ಕರ್ನಾಟಕ ನಿರ್ಮಾಣವಾಗಲು ಸಮರ್ಪಕವಾಗಿ ಹಣ ವಿತರಣೆಯಾಗಬೇಕು ಎಂದು ಅವರು ಹೇಳಿದರು.

ಉತ್ತರ ಕರ್ನಾಟಕಕ್ಕೆ ಸಂಪತ್ತಿನ ಹಂಚಿಕೆಯಲ್ಲಿ ಮೋಸವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಠೇವಣಿಗಳು ಅತಿ ಹೆಚ್ಚಿನ ಮಟ್ಟದಲ್ಲಿವೆ. ಬೆಳಗಾವಿ 13,350 ಕೋಟಿ ರೂ., ಧಾರವಾಡ 10,919 ಬಳ್ಳಾರಿ 7,280 ಕೋಟಿ, ಉತ್ತರ ಕನ್ನಡ 6,200 ಕೋಟಿ, ಗುಲ್ಬರ್ಗಾ 5,444 ಕೋಟಿ, ಬಾಗಲಕೋಟಿ 4,265 ಕೋಟಿ, ರಾಯಚೂರು 3,229 ಕೋಟಿ, ಹಾವೇರಿ 2,300 ಕೋಟಿ, ಬೀದರ್ 2,000 ಕೋಟಿ, ಗದಗ 2081 ಕೋಟಿ ರೂ. ಠೇವಣಿಯನ್ನು ಹೊಂದಿವೆ. ಆದರೆ ನಗದೀಕರಣದಲ್ಲಿ ವಿಜಯಪುರ, ಹಾವೇರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಉತ್ತರ ಕರ್ನಾಟಕದ ನಗದೀಕರಣದ ಪ್ರಮಾಣ ರಾಜ್ಯದ ಸರಾಸರಿ ನಗದೀಕರಣಕ್ಕಿಂತ ಹೆಚ್ಚು ಇದೆ. ರಾಜ್ಯದ್ದು 21.2 ಇದ್ದರೆ, ಉತ್ತರ ಕರ್ನಾಟಕದ್ದು 40ರಷ್ಟಿದೆ. ಹೀಗಿದ್ದರೂ ಬಜೆಟ್ ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾಧಾನ್ಯತೆ ನೀಡುತ್ತಿಲ್ಲ ಎಂದು ಹೇಳಿದರು.

ಕರ್ನಾಟಕ ಅಖಂಡತೆಗೆ ಕವಿರಾಜ ಮಾರ್ಗ ಒಂದು ಮೈಲಿಗಲ್ಲಾಗಿದೆ. ರಾಜಕಾರಣಿಗಳ ಸ್ವಾರ್ಥ, ಜಾತಿ ಪ್ರೇರಿತ ಪಕ್ಷ, ವ್ಯಕ್ತಿ ಪ್ರತಿಷ್ಠಿತ ಮೂರ್ಖತನದಿಂದ ಅಖಂಡ ಕರ್ನಾಟಕ ವಿಚಾರಕ್ಕೆ ಧಕ್ಕೆ ಬರಲಿದೆ. ನಾವು ಇಂದು ಕನ್ನಡ ಕನ್ನಡವೆಂದು ಲೆಕ್ಕ ಹಾಕುತ್ತಿದ್ದೇವೆ. 13ನೇ ಶತಮಾಣದಲ್ಲಿ ಆಂಡಯ್ಯ ಎಂಬವರು ಕನ್ನಡ ಪದಗಳನ್ನು ಹೊರತುಪಡಿಸಿ ಯಾವುದೇ ಭಾಷೆಯನ್ನು ಮಾತನಾಡುವುದಿಲ್ಲ ಎಂದು ಶಪತ ಮಾಡಿದ್ದರು. ಹಾಗೆಯೇ ಅವರು ನಡೆದುಕೊಂಡಿದ್ದರು. 15ನೇ ಶತಮಾಣದಲ್ಲಿ ಕುಮಾರವ್ಯಾಸ, ಕನಕದಾಸ, ಚಾಮರಸ ಕವಿಗಳು ಕನ್ನಡವನ್ನು ಪ್ರತಿನಿಧಿಸಿದ್ದರು ಎಂದರು.

ಕುಮಾರವ್ಯಾಸರ ಭಾರತ ಪಂಡಿತ ಪಾಮರರ ಕನ್ನಡ ಎಲ್ಲ ಕನ್ನಡಿಗರ ನಾಲಿಗೆಯ ಮೇಲೆ ಹರಿದಾಡಿತ್ತು. 16ನೇ ಶತಮಾನ ಲಕ್ಷ್ಮೀಶ, ಸರ್ವಜ್ಞರ ಕಾಲ. 19ನೇ ಶತಮಾನ ಬ್ರಿಟಿಷರ ಆಗಮನವಾಯಿತು. ಸ್ವಾತಂತ್ರ್ಯ ಚಳವಳಿಯ ಪ್ರಖರತೆ, ಸಿಪಾಯಿ ದಂಗೆ ಈ ಎಲ್ಲ ರಾಜಕೀಯ ಸ್ಥಿತ್ಯಂತರವನ್ನು ಹೊಸ ಬೆಳವಣಿಗೆಗಳ ಹಿನ್ನೆಲೆ ಆಕಾಲದಲ್ಲೂ ಕನ್ನಡದ ಕೃಷಿ ನಿಂತಿರಲಿಲ್ಲ ಎಂದು ಗತಕಾಲದ ಕನ್ನಡದ ವೈಭವವನ್ನು ಸಭಿಕರ ಮುಂದೆ ತೆರೆದಿಟ್ಟರು.

20ನೇ ಶತಮಾನದಲ್ಲಿ ನವೋದಯ ಕಾಲಘಟ್ಟದಲ್ಲಿ ಕುವೆಂಪು, ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಯುಗದ ಕವಿ ದ.ರಾ. ಬೇಂದ್ರೆ, ಪ್ರಗತಿಶೀಲ ಸಾಹಿತ್ಯ, ನವ್ಯ, ಕಲಿಕಾ, ಬಂಡಾಯವು 1500 ವರ್ಷಗಳ ವಿಸ್ತಾರ ಹಾಸು ಬೀಸು ಅಯಾನುಗಳನ್ನು ಹೊಂದಿದಂತಹ ಕನ್ನಡದ ಅಸ್ಮಿತೆಯ ಭಾವ ರಾಜ್ಯ ಗಟ್ಟಿ ತಳಹದಿಯಾಗಿ ಉಳಿದಿದ್ದು, ಅಖಂಡ ಕರ್ನಾಟಕ ಎಂದಿಗೂ ಮುಕ್ಕಾಗುವುದಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು.

1799ರಲ್ಲಿ ಟಿಪ್ಪು ಸುಲ್ತಾನರ ನಂತರ ಬ್ರಿಟಿಷರು, ಮರಾಠರು, ಹೈದರಾಬಾದಿನ ನಿಝಾಮರು ಒಗ್ಗೂಡಿದ್ದರಿಂದ ಕರ್ನಾಟಕ ವಿಭಜನೆಯಾಯಿತು. ಈ ಸಂದರ್ಭವೇ ಕರ್ನಾಟಕದ ಅಖಂಡ ಭೌಗೋಳಿಕತೆ ವಿಭಜನೆಯಾಯಿತು. ಅಸ್ಮಿತೆ, ಭಾವ ರಾಜ್ಯವಿದೆ. ಆದರೆ ಭೌಗೋಳಿಕವಾಗಿ ವಿಭಜನೆಗೊಂಡಿತ್ತು. ಅದರ ಪರಿಣಾಮವೇ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು ಕರ್ನಾಟಕಗಳಾದವು. ಆ ಹಳೆಯ ಪರಂಪರೆ, ಸುದೀರ್ಘವಾದ ಭಾವನಾತ್ಮಕ ಸಂಬಂಧಗಳನ್ನು ಮತ್ತೊಮ್ಮೆ ಬೆಳೆಸಿಕೊಳ್ಳಲು ಛೀದ್ರೀಕರಣಗೊಂಡ ಕರ್ನಾಟಕ ಮತ್ತೇ ಏಕೀಕರಣಗೊಳ್ಳಲು ನಡೆದ ಹೋರಾಟವೇ ಕರ್ನಾಟಕ ಏಕೀಕರಣ ಹೋರಾಟ ಎಂದು ಹೇಳಿದರು.

ರಾಜಕೀಯಕ್ಕೆ ಕೈಹಾಕುವುದೆಂದರೆ ಜೇನುಗೂಡಿಗೆ ಕೈಹಾಕಿದಂತೆ. ಏಕೀಕರಣವಾಗಿರುವುದು ನಿಜ. ವಾಂಟೊ ಆಯೋಗ, ಸೈಮನ್ ಕಮಿಶನ್ ಆಯೋಗ, ಕೊಟ್ಟಿ ಶ್ರೀರಾಮುಲು ಮರಣ ಸೇರಿ ಹಲವು ಪ್ರಕರಣಗಳು ನಡೆದವು. ಕರ್ನಾಟಕ ಏಕೀಕರಣಕ್ಕೆ ಹಳೆ ಮೈಸೂರಿನವರಿಂದಲೇ ವಿರೋಧ ವ್ಯಕ್ತವಾಗಿತ್ತು. ಆದರೆ ಏಕೀಕರಣಕ್ಕೆ ಗಟ್ಟಿ ಧ್ವನಿಯಾಗಿ ನಿಂತವರೆಂದರೆ ಹಳೆ ಮೈಸೂರು ಸಂಸ್ಥಾನದ ಕೆಂಗಲ್ ಹನುಮಂತರಾಯರು ಮಾತ್ರ. 1952ರಲ್ಲಿ ಕುವೆಂಪು ಅವರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಕುವೆಂಪು ಏಕೀಕರಣದ ಬಗ್ಗೆ ಮಾತನಾಡಿದ್ದರು. ಇದಕ್ಕೆ ಸರಕಾರ ಕುವೆಂಪು ವಿರುದ್ಧ ನೋಟಿಸ್ ನೀಡಿತ್ತು. ಆಗ ಸರಕಾರಕ್ಕೆ ಪತ್ರ ಬರೆದ ಕುವೆಂಪು, ನೀವು ರಾಜಕಾರಣಿಗಳು 5 ವರ್ಷ ಮಾತ್ರ ಇರುತ್ತೀರಿ, ಆದರೆ ಕನ್ನಡ ಅಸ್ಮಿತೆ ಶಾಶ್ವತವಾಗಿ ನೆಲೆಸಿರುತ್ತದೆ. ನೃಪತುಂಗ ರಾಜನೇ ಚಕ್ರವರ್ತಿ, ಪಂಪನೇ ಆಳುವ ಮುಖ್ಯಮಂತ್ರಿ ಎಂದು ಪತ್ರದಲ್ಲಿ ಉಲ್ಲೇಖಸಿದ್ದರು ಎಂದು ಹೇಳಿದರು.

ಅಖಂಡತೆಗೆ ಮುಕ್ಕು ಮಾಡಲಾಗುವುದಿಲ್ಲ. ತಾರತಮ್ಯ, ಅನ್ಯಾಯ, ಅಸಮಾಧಾನದ ಲಕ್ಷಣಗಳು ಎದ್ದು ಕಾಣುತ್ತಿವೆ. ಇದನ್ನು ಈಗಲೇ ಚಿವುಟಿ ಹಾಕದಿದ್ದರೆ ಅಖಂಡತೆ ಭಾವ ರಾಜ್ಯ ಮತ್ತೆ ವಿಭಜನೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರ ವಹಿಸಿ ಚರ್ಚೆ ಮಾಡಬೇಕು. ಪ್ರಾದೇಶಿಕವಾಗಿ ತಾರತಮ್ಯಗಳು ನಡೆಯುತ್ತಿದ್ದು, ಮೂಲ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ವಿಚಾರಗೋಷ್ಠಿಯಲ್ಲಿ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ ಎಸ್. ಘಂಟಿ, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಹಾಗು ಇತರರು ಉಪಸ್ಥಿತರಿದ್ದರು.

Full View

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News