ಪತ್ರಕರ್ತರ ನಿವೇಶನಕ್ಕೆ ಶೀಘ್ರ ಕ್ರಮ: ಸಚಿವ ಯು.ಟಿ. ಖಾದರ್

Update: 2018-11-17 13:06 GMT

ಮಂಗಳೂರು, ನ.17: ದ.ಕ. ಜಿಲ್ಲೆಯ ಪತ್ರಕರ್ತರ ನಿವೇಶನಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಇತ್ಯರ್ಥಗೊಳಿಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಸಚಿವರು ಮತ್ತು ಪತ್ರಕರ್ತರ ಜತೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜದ ಮುಖ್ಯ ಅಂಗವಾಗಿರುವ ಪತ್ರಕರ್ತರಿಗೆ ನಿವೇಶನ ಬೇಡಿಕೆ ಈಡೇರಿಸುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಗರಕ್ಕೆ ಬಂದಾಗ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಜತೆ ಮಾತನಾಡಿದ ಸಚಿವರು, ವಿಶೇಷ ಯೋಜನೆಯಡಿ ಪತ್ರಕರ್ತರ ನಿವೇಶಕ್ಕೆ ಸೂಕ್ತ ಜಾಗವನ್ನು ಗುರುತಿಸಿ ವರದಿ ನೀಡುವಂತೆ ಸೂಚನೆ ನೀಡಿದರು. ಅಲ್ಲದೆ ದ.ಕ. ಜಿಲ್ಲೆಯ ಇತರ ತಾಲೂಕುಗಳಲ್ಲೂ ಕಾರ್ಯನಿರ್ವಹಿಸುವ ಪತ್ರಕರ್ತರಿಗೂ ನಿವೇಶನ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ ಎಂದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸಚಿವರಿಗೆ ಮನವಿ ಹಸ್ತಾಂತರಿಸಿದರು. ಈ ಸಂದರ್ಭ ರಾಜ್ಯ ಸಂಘದ ಕಾರ್ಯಕಾರಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ, ಉಪಾಧ್ಯಕ್ಷ ಅನ್ಸಾರ್ ಇನೋಳಿ, ಕೋಶಾಧಿಕಾರಿ ಎ.ಆರ್. ಲೋಹಾನಿ, ಪ್ರೆಸ್‌ಕ್ಲಬ್‌ನ ಆಂತರಿಕ ಲೆಕ್ಕಪರಿಶೋಧಕ ಮುಹಮ್ಮದ್ ಆರೀಫ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯ್ ಕೋಟ್ಯಾನ್, ಆರ್.ಸಿ. ಭಟ್, ಸುರೇಶ್ ಡಿ. ಪಳ್ಳಿ, ಆತ್ಮಭೂಷಣ್, ಜೀವನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News