ಮಳೆಹಾನಿ ಮುಂಜಾಗರೂಕತೆ: ಮೇ ತಿಂಗಳೊಳಗೆ ಅಗತ್ಯ ಕ್ರಮಗಳಿಗೆ ಸಂಸದ ನಳಿನ್ ನಿರ್ದೇಶನ

Update: 2018-11-17 13:10 GMT

ಮಂಗಳೂರು, ನ.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಹಾನಿಗೆ ಸಂಬಂಧಿಸಿ ಪೂರ್ವ ಮುಂಜಾಗರೂಕತಾ ತಯಾರಿಗಳನ್ನು ಮಾಡಿಕೊಳ್ಳುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ನಿರ್ದೇಶಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿ ಮುಂಗಾರು ಪೂರ್ವ ಮಳೆಯ ಸಂದರ್ಭ ಮೇ 29ರಂದು ಮಂಗಳೂರು ನಗರದಲ್ಲಿ ಕೃತಕ ನೆರೆಯಿಂದ ಅನಾಹುತವಾಗಿತ್ತು. ಮಳೆಗಾಲದಲ್ಲಿ ಹಲವೆಡೆ ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿದೆ. ಹಾಗಾಗಿ ಮುಂಜಾಗೃತಾ ಕ್ರಮ ಹಾಗೂ ಪೂರ್ವ ತಯಾರಿಗಳನ್ನು ಮುಂಚಿತವಾಗಿ ನೆರವೇರಿಬೇಕು ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪ್ರತಿ ತಾಲೂಕಿಗೆ ಮಳೆ ಹಾನಿಗೆ ಸಂಬಂಧಿಸಿ ಅಗತ್ಯವಿರುವ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಪ್ರತಿ ತಾಲೂಕು ಮಟ್ಟದಲ್ಲಿ ಪಂಚಾಯತ್‌ಗಳಿಂದ ಮಾಹಿತಿ ಪಡೆದು ತಯಾರಿಸಿ ಈ ತಿಂಗಳೊಳಗೆ ನೀಡಬೇಕು. ಅಗತ್ಯ ಮುಂಜಾಗೃತಾ ಕ್ರಮಗಳನ್ನು ಎಪ್ರಿಲ್ ಮೇನಲ್ಲಿಯೇ ಸಪ್ತಾಹ ರೀತಿಯಲ್ಲಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಫೆಬ್ರವರಿಯಲ್ಲಿ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಆರಂಭಿಸಿ

ಗಂಜಿಮಠದಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಫೆಬ್ರವರಿ ತಿಂಗಳಿನಿಂದ ಆರಂಭಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇದಕ್ಕೆ ಪ್ರತಿಯಿಸಿದ ಅಧಿಕಾರಿ, 152 ಕೋಟಿ ರೂ.ಗಳ ಯೋಜನೆ ಇದಾಗಿದೆ. 41 ಕೋಟಿ ರೂ. ಮೌಲ್ಯದ 104 ಎಕರೆ ಜಮೀನು ಸದ್ಯ ಲಭ್ಯವಿದೆ. 36 ಕಂಪನಿಗಳು ಈಗಾಗಲೇ ಯೋಜನೆಗೆ ಸಿದ್ಧವಿದ್ದು, ಮೂಲಭೂತ ಸೌಕರ್ಯ ಒದಗಿಸಿದ ಬಳಿಕ ಯೋಜನೆಗಾಗಿ ನಿಗದಿತ ಪ್ರದೇಶದಲ್ಲಿ 61 ಎಕರೆ ಜಮೀನು ಮಾತ್ರವೇ ಲಭ್ಯವಾಗಲಿದೆ ಎಂದರು.

ಸಂಪಾಜೆ ಘಾಟಿ ಸಂಚಾರಕ್ಕೆ ಯೋಗ್ಯ

ಸಂಪಾಜೆ ಘಾಟಿ ರಸ್ತೆಯನ್ನು ಸದ್ಯ ತಾತ್ಕಾಲಿಕವಾಗಿ ಸಂಚಾರಕ್ಕೆ ಯೋಗ್ಯಗೊಳಿಸಲಾಗಿದೆ. ಕೊಡಗು ಜಿಲ್ಲಾಧಿಕಾರಿಗೆ ಈಗಾಗಲೇ ವರದಿ ನೀಡಲಾಗಿದ್ದು, ಅವರು ಒಪ್ಪಿಗೆ ನೀಡಿದಾಕ್ಷಣದಿಂದ ಇಲ್ಲಿ ಘನ ವಾಹನಗಳಿಗೂ ಅವಕಾಶ ಕಲ್ಪಿಸಬಹುದು ಎಂದು ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಇಂಜಿನಿಯರ್ ಸುಬ್ಬರಾಯ ಹೊಳ್ಳ ತಿಳಿಸಿದರು. ಈ ಘಾಟಿಯನ್ನು ಶಾಶ್ವತವಾಗಿ 500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಪ್ರಸ್ತಾನೆ ಇದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಬಿಸಿರೋಡ್‌ನಿಂದ ಪಂಜಾಲಕಟ್ಟೆಯಲ್ಲಿ ಒಟ್ಟು 20 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. 4 ಮೀಟರ್ ರಸ್ತೆ 16 ಮೀಟರ್ ಅಗಲದೊಂದಿಗೆ ಕಾಂಕ್ರೀಟಕರಣಗೊಳ್ಳಲಿದ್ದು, 16 ಕಿ.ಮೀ. ರಸಸ್ತೆ 10 ಮೀಟರ್ ಅಗಲದಲ್ಲಿ ಅಭಿವೃದ್ಧಿಯಾಗಲಿದೆ. 159 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸುಬ್ಬರಾಯ ಹೊಳ್ಳ ತಿಳಿಸಿದರು. ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಾರಿ ಡಾ. ಸೆಲ್ವಮಣಿ ಉಪಸ್ಥಿತರಿದ್ದರು.

ಪಂಪ್‌ವೆಲ್ ಸೇತುವೆ: ಎನ್‌ಎಚ್ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ !

ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆಗೆ ಸಂಬಂಧಿಸಿದ ಚರ್ಚೆಯ ವೇಳೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಉತ್ತರಕ್ಕೆ ಸಂಸದ ನಳಿನ್ ಕುವಾರ್ ಅಸಮಾಧಾನ ವ್ಯಕ್ತಪಡಿಸಿದರು.

ಮಾರ್ಚ್‌ನೊಳಗೆ ಸಂಪೂರ್ಣಗೊಳಿಸುತ್ತೇವೆ ಎಂಬುದಾಗಿ ಭರವಸೆ ನೀಡಿದ್ದಾರೆ. ಆದರೆ ಅಲ್ಲಿ ಕಾಮಗಾರಿಯ ವೇಗವೇ ಕಾಣುತ್ತಿಲ್ಲ ಎಂದು ಸಂಸದ ನಳಿನ್ ಹೇಳಿದಾಗ,ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ನಿಧಾನ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಪ್ರತಿಕ್ರಿಯಿಸಿದರು.

ಈ ಸಂದರ್ಭ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪ್ರತಿಬಾರಿ ಇದೇ ರೀತಿಯ ಉತ್ತರವನ್ನು ನೀಡಲಾಗುತ್ತಿದೆ. ನಿಗದಿತ ಅವಧಿಯಲ್ಲಿ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಮುಗಿಸಬೇಕು. ಇಲ್ಲವಾದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಾತ್ರವಲ್ಲದೆ, ಪ್ರತಿ ವಾರ ಕಾಮಗಾರಿಯ ಪ್ರಗತಿಯ ಬಗ್ಗೆ ವರದಿಯನ್ನು ನೀಡಬೇಕು. ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದರೆ ಅದರ ಬಗ್ಗೆ ವಿವರ ನೀಡಬೇಕು. ಪ್ರತಿಬಾರಿ ಈ ರೀತಿ ಸಭೆಯಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ಮುಂದೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. 

ಕೂಳೂರು ಬಳಿ ನೂತನ ಸೇತುವೆ ನಿರ್ಮಾಣ ಸಂದರ್ಭ ದ್ವಿಚಕ್ರ ಹಾಗೂ ಲಘು ವಾಹನಗಳಿಗೆ ಒಂದು ಬದಿಯಲ್ಲಿ ಸಂಚರಿಸಲು ಅವಕಾಶ ನೀಡಿ ಕಾಮಗಾರಿ ನಡೆಸಬೇಕು ಎಂದು ಸಂಸದ ನಳಿನ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News