‘ನನ್ನ ಮಕ್ಕಳಿಬ್ಬರನ್ನು ವಾಪಾಸ್ಸು ತಂದು ಕೊಡಿ’ ಬಾಣಂತಿ ಅಮ್ಮನ ಕಣ್ಣೀರು

Update: 2018-11-17 14:21 GMT

ಉಡುಪಿ, ನ.17: ‘ನನಗೆ ಹೇಳದೆ ಆಟ ಆಡುತ್ತಿದ್ದ ನನ್ನ ಹಾಲು ಕುಡಿಯುವ ಮಗು ಸೇರಿದಂತೆ ಇಬ್ಬರು ಮಕ್ಕಳನ್ನು ಐಸ್‌ಕ್ರೀಂ ಕೊಡಿಸುವ ನೆಪದಲ್ಲಿ ಬಲಾತ್ಕಾರವಾಗಿ ಅಬುಧಾಬಿಗೆ ಕರೆದೊಯ್ದ ಪತಿ ಮುಹಮ್ಮದ್ ಶಾನಿಬ್(35) ನಿಂದ ನನ್ನ ಮಕ್ಕಳಿಬ್ಬರನ್ನು ವಾಪಾಸ್ಸು ತಂದು ಕೊಡಿ’ ಎಂದು ಬಾಣಂತಿ ಉಳ್ಳಾಲದ ರಿಶಾನಾ ನಿಲೋಫರ್ (27) ಅಂಗಲಾಚಿ ಬೇಡಿಕೊಂಡಿದ್ದಾರೆ.

ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೂಲಕ ಉಡುಪಿ ಕುಂಜಿಬೆಟ್ಟು ಕಾನೂನು ಮಹಾವಿದ್ಯಾಲಯದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ತನ್ನ 40 ದಿನದ ಮೂರನೆ ಹಸುಗೂಸನ್ನು ಹಿಡಿದುಕೊಂಡು ಬಂದಿರುವ ರಿಶಾನಾ, ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಪ್ರಕರಣದ ಕುರಿತು ವಿವರ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನ್‌ಭಾಗ್, ಈ ಬಗ್ಗೆ ಪೊಲೀಸ್ ಠಾಣೆ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರಿಂದ ಯಾವುದೇ ನ್ಯಾಯ ದೊರೆಯದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ವರದಿ ಸಲ್ಲಿಸಲಾಗಿದೆ. ಇಲ್ಲಿಯೂ ಸರಿಯಾಗಿ ನ್ಯಾಯ ಸಿಗದಿದ್ದರೆ ಮುಂದೆ ಹೈಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

8 ವರ್ಷಗಳ ಹಿಂದೆ ವಿವಾಹ

ಮಂಗಳೂರು ತಾಲೂಕು ಪೆರ್ಮನ್ನೂರು ನಿವಾಸಿ ಉದ್ಯಮಿ ಸಿದಿಯಬ್ಬ ಎಂಬವರ ಪುತ್ರಿ ರಿಶಾನಾ ಎಂಟು ವರ್ಷಗಳ ಹಿಂದೆ ಕುಂಬಳೆಯ ಇಂಜಿನಿಯರ್ ಮುಹಮ್ಮದ್ ಶಾನಿಬ್‌ರೊಂದಿಗೆ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ 130 ಪವನ್ ಚಿನ್ನ ಹಾಗೂ ಮಂಗಳೂರಿನ ವಸತಿ ಸಮುಚ್ಚಯದಲ್ಲಿ ಫ್ಲಾಟ್ ಒಂದನ್ನು ಶಾನಿಬ್‌ಗೆ ಉಡುಗೊರೆಯಾಗಿ ನೀಡಲಾಗಿತ್ತು. ಮದುವೆ ಆರಂಭದಲ್ಲಿ ಶಾನಿಬ್ ಹಾಗೂ ಅವರ ತಾಯಿ ರಿಶಾನಾಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದರು ಎನ್ನಲಾಗಿದೆ. 

ಆರಂಭದಲ್ಲಿ ಉಡುಪಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಶಾನಿಬ್, ನಂತರ ದುಬೈಗೆ ಹೋಗಿದ್ದರು. ಎರಡು ಬಾರಿ ಪತ್ನಿ ಮಕ್ಕಳನ್ನು ದುಬೈಗೆ ಕರೆದೊಯ್ದ ಶಾನಿಬ್, ಮೂರನೆ ಬಾರಿಗೆ ಮಕ್ಕಳು ಹಾಗೂ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಹೋಗಿದ್ದನು.

ಸೆ.10ರಂದು ಅಬುಧಾಬಿಯಿಂದ ಊರಿಗೆ ಬಂದ ಶಾನಿಬ್, ಸೆ.19ರಂದು ರಿಶಾನಾಗೆ ಹೇಳದೆ ಅಂಗಳದಲ್ಲಿ ಆಡುತ್ತಿದ್ದ ಶೇರಾಝ್ ಅಬ್ದುಲ್ಲಾ (6) ಹಾಗೂ ಒಂದು ವರ್ಷ ಐದು ತಿಂಗಳ ಹೆಣ್ಣು ಮಗು ಝುಹಾ ಫಾತಿಮಾ ಅವರನ್ನು ಕರೆದೊಯ್ದು, ಅದೇ ದಿನ ರಾತ್ರಿ ವಿಮಾನದಲ್ಲಿ ಅಬುಧಾಬಿಗೆ ಮಕ್ಕಳ ಸಹಿತ ಪರಾರಿಯಾಗಿದ್ದಾನೆ. ಆರಂಭದಲ್ಲಿ ಫೋನಿನ ಮೂಲಕ ಸಂಪರ್ಕದಲ್ಲಿದ್ದ ಪತಿ, ಇದೀಗ ಯಾವುದೇ ರೀತಿಯಲ್ಲಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರಲಾಗಿದೆ.

ಪ್ರತಿಷ್ಠಾನಕ್ಕೆ ದೂರು

ಅಕ್ಟೋಬರ್ ಮೊದಲ ವಾರದಲ್ಲಿ ಪ್ರತಿಷ್ಠಾನಕ್ಕೆ ದೂರು ನೀಡಿದ ರಿಶಾನಾ, ಮಕ್ಕಳಿಬ್ಬರನ್ನೂ ತರಿಸಿಕೊಡಿ ಎಂದು ಅಂಗಲಾಚಿದರು. ಎಳೆಯ ಮಕ್ಕಳನ್ನು ಹೊರದೇಶಕ್ಕೆ ಸಾಗಿಸಿರುವುದು ಗಂಭೀರ ಅಪರಾಧವಾಗಿರುವುದರಿಂದ ಅವಶ್ಯವಾಗಿ ಪೊಲೀಸರಿಗೆ ದೂರು ನೀಡಲು ಸೂಚಿಸಿದೆವು. ಕಳೆದೆರಡು ತಿಂಗಳಿಂದ ಎಳೆಯ ಕಂದಮ್ಮಗಳಿಗಾಗಿ ಪರಿತಪಿಸುತ್ತಿರುವ ರಿಶಾನಾ ಇದೀಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ರವೀಂದ್ರನಾಥ್ ಶಾನು ಭಾಗ್ ತಿಳಿಸಿದರು.

‘ಈ ಬಗ್ಗೆ ಉಳ್ಳಾಲ ಪೊಲೀಸರ ಸೂಚನೆಯಂತೆ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದು, ಆದರೆ ಪಾಂಡೇಶ್ವರ ಪೊಲೀಸರು ಇದು ಅಪರಾಧ ಪ್ರಕರಣವಾಗಿರುವುದರಿಂದ ಉಳ್ಳಾಲದಲ್ಲೇ ದೂರು ನೀಡುವಂತೆ ತಿಳಿಸಿದರು. ಹೀಗೆ ಪೊಲೀಸರು ಠಾಣೆಯಿಂದ ಠಾಣೆಗೆ ಅಲೆದಾಡಿಸಿಕೊಂಡರೆ ಹೊರತು ಯಾವುದೇ ಸ್ಪಂದನೆ ನೀಡಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತೆ ಮೆಹಬೂಬ ಆರೋಪಿಸಿದರು.

ಇದೀಗ ಅನೇಕ ಮಹಿಳಾ ಸಂಘಟನೆಗಳು ರಿಶಾನಾಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಉಡುಪಿಯ ಸಮ್ಮಾನ್ ಕೌನ್ಸೆಲಿಂಗ್ ಸೆಂಟರ್ ಅಬುಧಾಬಿ ಯಲ್ಲಿರುವ ಕನ್ನಡಿಗ ಸ್ನೇಹಿತರನ್ನು ಸಂಪರ್ಕಿಸಿ ಸೌಹಾರ್ದತೆಯಿಂದ ಸಮಸ್ಯೆ ಬಗೆರಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ಇದೀಗ ತಿಂಗಳೆರಡು ಕಳೆದರೂ ಸಮಸ್ಯೆ ಪರಿಹರಿಸುವಲ್ಲಿ ಸಮಾಜದ ಗಣ್ಯರಿಗೂ ಸಾಧ್ಯವಾಗಲಿಲ್ಲ. ಪೊಲೀಸರಿಂದಲೂ ಯಾವ ಕಾರ್ಯಚರಣೆಯೂ ನಡೆದಿಲ್ಲ. ಇದೀಗ ರಿಶಾನಾಳ ಗಂಡ ಹಾಗೂ ಅವರ ಕುಟುಂಬದವರು ಯಾವುದೇ ರೀತಿಯ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದರ ವಿರುದ್ಧ ಹೈಕೋರ್ಟ್‌ನಲ್ಲಿ ದೂರು ನೀಡಲು ಈಗಾಗಲೇ ನ್ಯಾಯವಾದಿಗಳನ್ನು ಸಂಪರ್ಕಿಸಲಾಗಿದೆ ಎಂದು ಶಾನುಭಾಗ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮ್ಮಾನ್ ಕೌನ್ಸಿಲಿಂಗ್ ಸೆಂಟರ್‌ನ ಲತೀಫ್, ಸಲಾವುದ್ದೀನ್ ಅಬ್ದುಲ್ಲಾ, ಕಾನೂನು ವಿದ್ಯಾಲಯದ ಪ್ರಾಂಶುಪಾಲ ಪ್ರಕಾಶ್ ಕಣಿವೆ, ನ್ಯಾಯವಾದಿ ವಿಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News