ನಾಲ್ಕೈದು ಗಂಟೆ ಕಾಯಿಸಿಯೂ ಅಧಿಕಾರಿಗಳ ಸಭೆಗೆ ಬಾರದ ಸಚಿವ ಝಮೀರ್ ಅಹ್ಮದ್

Update: 2018-11-17 14:20 GMT

ಉಡುಪಿ, ನ.17: ಜಿಲ್ಲೆಯಲ್ಲಿ ಇಂದು ನಿಗದಿಪಡಿಸಿದಕ್ಕಿಂತ ಹೆಚ್ಚು ಖಾಸಗಿ ಕಾರ್ಯಕ್ರಮಗಳಲ್ಲಿಯೇ ಪಾಲ್ಗೊಂಡ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ನಾಲ್ಕು ತಾಸು ಕಾಯಿಸಿದರೂ ಅಧಿಕೃತವಾಗಿ ನಿಗದಿಯಾಗಿದ್ದ ವಕ್ಫ್ ಮಂಡಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸುವ ಕಾರ್ಯಕ್ರಮ ವನ್ನು ರದ್ದುಗೊಳಿಸುವ ಮೂಲಕ ಸಾಕಷ್ಟು ಅಸಮಾಧಾನಕ್ಕೆ ಕಾರಣರಾದರು.

ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ಸಚಿವರಾದ ಬಳಿಕ ಉಡುಪಿ ಜಿಲ್ಲೆಗೆ ಇಂದು ಪ್ರಥಮ ಬಾರಿಗೆ ಭೇಟಿ ನೀಡಿದ ಝಮೀರ್ ಅಹ್ಮದ್, ಒಂದೇ ಒಂದು ಸರಕಾರಿ ಅಧಿಕೃತ ಸಭೆಗಿಂತ ಖಾಸಗಿ ಕಾರ್ಯಕ್ರಮಗಳಿಗೆಯೇ ಆದ್ಯತೆ ನೀಡಿದರು. ಬೆಳಗ್ಗೆ 10ಗಂಟೆಗೆ ನಿಗದಿಯಾಗಿದ್ದ ಮೂಳೂರು ಸುನ್ನಿ ಸೆಂಟರ್ ಕಾರ್ಯ ಕ್ರಮಕ್ಕೆ ಎರಡೂವರೆ ಗಂಟೆ ತಡವಾಗಿ ಬಂದ ಸಚಿವರು, ಅಲ್ಲಿಂದ ಕಾರ್ಯ ಕ್ರಮದಲ್ಲಿ ನಿಗದಿಯಾಗಿರದ ಚಂದ್ರನಗರದ ಕಾರ್ಯಕ್ರಮಕ್ಕೆ ತೆರಳಿದರು. ಅಲ್ಲಿಂದ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಅವರು, ಬಳಿಕ ಉಡುಪಿ ಬಿಷಪ್‌ರನ್ನು ಭೇಟಿ ಮಾಡಿದರು. ಇದೆಲ್ಲ ಭೇಟಿ ಕಾರ್ಯಕ್ರಮ ಮುಗಿಯುವಾಗ ಅಪರಾಹ್ನ ಸುಮಾರು ಮೂರು ಗಂಟೆ ಆಗಿತ್ತು.

ಈ ಮಧ್ಯೆ ಬೆಳಗ್ಗೆ 11ಗಂಟೆಗೆ ಜಿಲ್ಲೆಯ ಒಂದೇ ಒಂದು ಅಧಿಕೃತ ಕಾರ್ಯಕ್ರಮವಾಗಿ ಮಣಿಪಾಲ ರಜತಾದ್ರಿಯಲ್ಲಿರುವ ವಕ್ಫ್ ಮಂಡಳಿಗೆ ಭೇಟಿ ನೀಡಿ, ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿ ಸುವ ಕಾರ್ಯಕ್ರಮವನ್ನು ನಿಗದಿ ಪಡಿಸಲಾಗಿತ್ತು. ಅಲ್ಲದೆ ಈ ಸಭೆಯಲ್ಲಿ ಮಸೀದಿಗೆ ಸಂಬಂಧಿಸಿದ ಅಹವಾಲುಗಳನ್ನು ಸಚಿವರಿಗೆ ಸಲ್ಲಿಸಬಹುದೆಂದು ಮೊದಲೇ ತಿಳಿಸಲಾಗಿತ್ತು. ಆದುದರಿಂದ ರಜತಾದ್ರಿಯಲ್ಲಿ 11ಗಂಟೆಯಿಂದ ಅಧಿಕಾರಿಗಳು ಕಡತಗಳನ್ನು, ಇಲಾಖೆಯವರು ಹಾಗೂ ಮಂಡಳಿ ಸದಸ್ಯರು ಹೂಹಾರ ಹಿಡಿದುಕೊಂಡು, ಮಸೀದಿಯ ಪದಾಧಿಕಾರಿ ಅಹವಾಲುಗಳನ್ನು ಹಿಡಿದುಕೊಂಡು ಕಾಯುತ್ತಿದ್ದರು. ಅಲ್ಲದೆ ಪತ್ರಕರ್ತರು ಕೂಡ ಇದ್ದರು.

ಆದರೆ ಸಚಿವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಳಂಬದ ನೆಪವೊಡ್ಡಿ ಅಧಿಕಾರಿಗಳ ಸಭೆಯನ್ನು ರದ್ದುಗೊಳಿಸಿ ಉಡುಪಿ ಬಿಷಪ್ ಭೇಟಿ ಬಳಿಕ ನೇರವಾಗಿ ಕುಂದಾಪುರ ಅಬ್ದುಲ್ ಖಾದರ್ ಯೂಸುಫ್‌ರ ಮನೆಗೆ ತೆರಳಿ ಭೋಜನ ಸ್ವೀಕರಿಸಿದರು. ಬಳಿಕ ಕುಂದಾಪುರ ಮಸೀದಿಗೆ, ನಾವುಂದ ಐಸ್‌ಪ್ಲಾಂಟ್ ಉದ್ಘಾಟನೆ, ಬಳಿಕ ಜೆಡಿಎಸ್ ಮುಖಂಡ ಮನ್ಸೂರ್ ಅಹ್ಮದ್‌ರ ಮನೆಗೆ ಭೇಟಿ ನೀಡಿ ವಾಪಾಸ್ಸಾದರು.

ಸಚಿವರ ಈ ನಡೆಗೆ ವಕ್ಫ್ ಮಂಡಳಿಯ ಸದಸ್ಯರು, ಸಮುದಾಯದ ಮುಖಂಡರು, ಮಸೀದಿಯ ಪದಾಧಿಕಾರಿಗಳು ತೀರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರ ಅಧಿಕೃತ ಭೇಟಿಗಾಗಿ ಕಾದು ಕುಳಿತ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೂಡ ಸುಸ್ತಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News