ಎನ್‌ಪಿಎಸ್ ರದ್ದಾಗದಿದ್ದರೆ ಅಮರಣಾಂತ ಉಪವಾಸ: ಎನ್‌ಪಿಎಸ್ ನೌಕರರ ಜಿಲ್ಲಾ ಸಮಾವೇಶದಲ್ಲಿ ಎಚ್ಚರಿಕೆ

Update: 2018-11-18 09:02 GMT

ಮಂಗಳೂರು, ನ.18: ಎನ್‌ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ರಾಜ್ಯ ಸರಕಾರಿ ನೌಕರರ ಪಾಲಿಗೆ ಮರಣ ಶಾಸನವಾಗಿದ್ದು, ಅದನ್ನು ರದ್ದು ಗೊಳಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ ಎಚ್ಚರಿಕೆ ನೀಡಿದ್ದಾರೆ.

ನಗರದ ಎಸ್‌ಸಿಡಿಸಿಸಿ ಸಭಾಂಗಣದಲ್ಲಿ ಇಂದು ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಸಹಭಾಗಿತ್ವದಲ್ಲಿ ಎನ್‌ಪಿಎಸ್ ನೌಕರರ ಜಿಲ್ಲಾ ಸಮಾವೇಶ ಹಾಗೂ 12ನೆ ಕಾರ್ಯಕಾರಿಣಿ ಸಭೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಎನ್‌ಪಿಎಸ್‌ನಿಂದಾಗಿ ನೌಕರರ ಬದುಕು ಬೀದಿಗೆ ಬಿದ್ದ ಪರಿಣಾಮವಾಗಿ ನೌಕರರು ಇಂದು ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮ ಹೋರಾಟ ಸರಕಾರದ ವಿರುದ್ಧವಲ್ಲ, ಬದಲಾಗಿ ನಮ್ಮ ಹಕ್ಕಿಗಾಗಿ ಎಂದವರು ಹೇಳಿದರು.

37 ವರ್ಷ ಬಿಲ್ ಕಲೆಕ್ಟರ್ ಆಗಿ ದುಡಿದ ನಿವೃತ್ತ ಸರಕಾರಿ ನೌಕರನೊಬ್ಬ 685 ರೂ. ಮಾಸಿಕ ಪಿಂಚಣಿಯನ್ನು ಪಡೆಯುತ್ತಿದ್ದರೆ, ಅದೇ ವೇಳೆ 98 ವರ್ಷದ ವ್ಯಕ್ತಿ (ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕ) 40 ವರ್ಷ ಸೇವೆ ಮಾಡಿ 22,000 ರೂ. ಪಿಂಚಣಿ ಪಡೆಯುತ್ತಿದ್ದಾರೆ. ಈ ರೀತಿಯ ತಾರತಮ್ಯ ಏಕೆ. ರಾಜ್ಯ ಸರಕಾರ ಈ ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ನೌಕರರಿಗೆ ಜಾರಿಗೊಳಿಸಬೇಕು. ನಮ್ಮ ಬದುಕು ಮುಂದಿನ ದಿನಗಳಲ್ಲಿ ಬೀದಿಗೆ ಬೀಳಬಾರದು ಎಂಬ ಉದ್ದೇಶದಿಂದ ಈ ಸಮಾವೇಶದ ಮೂಲಕ ಸರಕಾರದ ಕಣ್ಣು ತೆರೆಸುವ ಕಾರ್ಯವನ್ನು ಮಾಡಲಾಗುತ್ತಿದೆ. ರಾಜ್ಯ ಸರಕಾರದಿಂದ ನಮ್ಮ ಹೋರಾಟಕ್ಕೆ ಸೂಕ್ತ ನ್ಯಾಯ ದೊರೆಯುವ ಉದ್ದೇಶವಿದೆ. ನ್ಯಾಯ ದೊರೆಯದಿದ್ದರೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲೂ ಹೋರಾಟವನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಎನ್‌ಪಿಎಸ್ ರದ್ದಾದ ಮರುದಿನವೇ ಸಂಘವು ವಿಜಯೋತ್ಸವದೊಂದಿಗೆ ಸಂಘದ ಬ್ಯಾನರನ್ನು ಸುಟ್ಟು ಹೋರಾಟವನ್ನು ಕೊನೆಗೊಳಿಸಲಾಗುವುದು ಎಂದು ನಾಗನಗೌಡ ಹೇಳಿದರು.

ಎನ್‌ಪಿಎಸ್ ಬೋಗಸ್ ಸ್ಕೀಮ್: ಐವನ್

ರಾಷ್ಟ್ರೀಯ ಪಿಂಚಣಿ ಯೋಜನೆ ಸರಕಾರಿ ನೌಕರರಿಗೆ ಹೊಂದಿಕೆ ಆಗುವುದಿಲ್ಲ. ಇದು ಬೋಗಸ್ ಸ್ಕೀಮ್. ಇದನ್ನು ರದ್ದುಪಡಿಸುವ ನೌಕರರ ಹೋರಾಟಕ್ಕೆ ಸಹಮತವಿದೆ. ಇದನ್ನು ಪರಿಗಣಿಸಬೇಕಾಗಿರುವುದು ಸರಕಾರದ ಕರ್ತವ್ಯ. ಮುಂದಿನ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಬೆಳಗಾಂನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಅವಕಾಶ ಸಿಕ್ಕಿದಾಗ ಎನ್‌ಪಿಎಸ್ ನೌಕರರ ಪರವಾಗಿ ಧ್ವನಿ ಎತ್ತುವುದಾಗಿ ಹೇಳಿದರು. ಸಮಾವೇಶವನ್ನುದ್ದೇಶಿಸಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು.

ಸಮಾವೇಶಕ್ಕೂ ಮೊದಲು ನಗರದ ಸರಕಾರಿ ನೌಕರರ ಸಭಾ ಭವನದ ಎದುರಿನಿಂದ ಸಾವಿರಾರು ನೌಕರರು ಎನ್‌ಪಿಎಸ್ ರದ್ಧತಿಗೆ ಒತ್ತಾಯಿಸಿ ಎಸ್‌ಸಿಡಿಸಿಸಿವರೆಗೆ ಜಾಥಾ ನಡೆಸಿದರು. ಜಾಥಾದಲ್ಲಿ ಮೇಯರ್ ಭಾಸ್ಕರ್ ಮೊಯ್ಲಿ ಭಾಗವಹಿಸಿದ್ದರು.

ಸಮಾವೇಶದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಇಬ್ರಾಹಿಂ ವಹಿಸಿದ್ದರು. ಎಸ್‌ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸಮಾವೇಶದಲ್ಲಿ ಭಾಗವಹಿಸಿದ್ದರು.

ರಾಜ್ಯಾಧ್ಯಕ್ಷ ಶಾಂತಾರಾಮ್, ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಪಿ., ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ, ಕೆಇಬಿಎ ಮಂಗಳೂರು ವಲಯದ ಅಧ್ಯಕ್ಷ ಮಂಜಪ್ಪ, ಸಂಘಟನೆಗಳ ಪದಾಧಿಕಾರಿಗಳಾದ ಶಿವಶಂಕರ ಭಟ್, ಸ್ಟಾನಿ ತಾವ್ರೊ, ವಿಠಲ್, ಜಗದೀಶ್, ದಿಲೀಪ್ ಕುಮಾರ್, ಹರಿಪ್ರಸಾದ್, ಎಚ್.ಎಸ್. ಗುರುಮೂರ್ತಿ, ರೂಪಾ, ಆದರ್ಶ್, ಪ್ರೊ. ರಾಜಶೇಖರ್ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.

ಶಾಸಕರಿಗೆ ಪಿಂಚಣಿ ಸಿಗುವಾಗ ನಿಮಗೆ ಯಾಕಿಲ್ಲ- ಭೋಜೇಗೌಡ ಪ್ರಶ್ನೆ ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನ ಪರಿಷತ್, ವಿಧಾನಸಭೆ ಸೇರಿದಂತೆ ಶಾಸಕರು, ಸಂಸದರಿಗೆ ನಿವೃತ್ತಿಯ ಬಳಿಕ ಗೌರವಧನದ ಹೆಸರಿನಲ್ಲಿ ಪಿಂಚಣಿ ದೊರೆಯುವಾಗ ಜೀವನಪೂರ್ತಿ ಸರಕಾರಿ ಸೇವೆಯಲ್ಲಿ ದುಡಿಯುವ ನೌಕರರಿಗೆ ಸೂಕ್ತ ಪಿಂಚಣಿ ಸೌಲಭ್ಯ ಯಾಕಿಲ್ಲ ಎಂಬುದು ಗಂಭೀರವಾದ ಪ್ರಶ್ನೆ. ಸಂವಿಧಾನಬದ್ಧವಾದ ಪಿಂಚಣಿ ಹಕ್ಕನ್ನು ಪಡೆಯಲು ನೌಕರರು ಬೀದಿಯಲ್ಲಿ ನಿಂತು ಹೋರಾಟ ಮಾಡುವ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹೇಳಿದರು.

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದಿಯಾಗಿ ಜನಪ್ರತಿನಿಧಿಗಳಿಗೂ ಗೌರವಧನ ಆಗಾಗ್ಗೆ ಪರಿಷ್ಕರಣೆಯಾಗುತ್ತಿರುತ್ತದೆ. ಭವಿಷ್ಯದ ಆತಂಕದೊಂದಿಗೆ ಸರಕಾರಿ ನೌಕರರ ಹೋರಾಟದಲ್ಲಿ ತಾನು ಸದಾ ಜತೆಗಿರುವುದಾಗಿ ಹೇಳಿದ ಅವರು, 15 ದಿನಗಳಲ್ಲಿ ಎನ್‌ಪಿಎಸ್ ನೌಕರರು ಮತ್ತು ಮುಖ್ಯಮಂತ್ರಿ ಜತೆ ಸಭೆಗೆ ಏರ್ಪಾಟು ಮಾಡುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News