ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ರಾಜ್ಯ ಸರಕಾರ ಕಾರಣ: ಸಂಸದ ನಳಿನ್

Update: 2018-11-18 09:24 GMT

ಮಂಗಳೂರು, ನ.18: ರಾಜ್ಯ ಸರ್ಕಾರ ನಿಗದಿತ ಸಮಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸದ ಕಾರಣ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ತಡವಾಗಿದೆ ಎಂದು ಸಂಸದ ನಳಿನ್ ಕುಮಾರ್ ರಾಜ್ಯ ಸರಕಾರವನ್ನು ದೂರಿದ್ದಾರೆ.

ಇಂದು ಬೆಳಗ್ಗೆ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಪ್ರಸ್ತುತ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ತೊಕ್ಕೊಟ್ಟು ಮೇಲ್ಸೇತುವೆಯಲ್ಲಿಯೂ ಡಿಸೆಂಬರ್ ಅಂತ್ಯದ ವೇಳೆಗೆ ಸಂಚಾರ ಆರಂಭವಾಗಲಿದೆ ಎಂದು ಅವರು ಹೇಳಿದರು.

ಮಹಾವೀರ ವೃತ್ತದ ಬೃಹತ್ ಕಲಶ ಸ್ಥಳಾಂತರಕ್ಕೆ ವಿಳಂಬ, ಸರ್ವೀಸ್ ಬಸ್ ನಿಲ್ದಾಣವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನಿರ್ಮಿಸಲು ಮುಂದಾಗಿರುವುದು ಮೊದಲಾದ ಕಾರಣದಿಂದ 2010ರಲ್ಲಿ ಕೆಲಸ ಆರಂಭಿಸಿದರೂ, ಕೆಲಸಕ್ಕೆ ವೇಗ ಸಿಕ್ಕಿದ್ದು 2016ರಲ್ಲಿ. ರಾಷ್ಟ್ರೀಯ ಹೆದ್ದಾರಿ ವಿನ್ಯಾಸ ವನ್ನು 15 ವರ್ಷಗಳ ಹಿಂದೆಯೇ ರಚಿಸಲಾಗಿತ್ತು. ಆದರೆ ಪಂಪ್‌ವೆಲ್‌ನಲ್ಲಿ ಬಸ್‌ನಿಲ್ದಾಣ ನಿರ್ಮಾಣ ಹಿನ್ನೆಲೆಯಲ್ಲಿ ಹೆದ್ದಾರಿ ವಿನ್ಯಾಸ ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂತು. ರಾಜ್ಯ ಸರ್ಕಾರ, ಆಗಿನ ಜಿಲ್ಲಾಧಿಕಾರಿಯವರು ಈ ವಿಚಾರವಾಗಿ ನಿಧಾನಗತಿಯಲ್ಲಿ ಕೆಲಸ ಮಾಡಿದ್ದರಿಂದ ಹೆದ್ದಾರಿ ಕಾಮಗಾರಿ ಆರಂಭಿಸಲು ಆಗಿಲ್ಲ. ಈ ನಡುವೆ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿರುವ ಸಂಸ್ಥೆ ಆರ್ಥಿಕ ನಷ್ಟಕ್ಕೆ ಒಳಗಾಯಿತು. ಈ ಎಲ್ಲ ಕಾರಣದಿಂದ ಕಾಮಗಾರಿ ತಡವಾಯಿತು ಎಂದರು.

ಪಂಪ್‌ವೆಲ್ ಕಾಮಗಾರಿ ತಡವಾಗಲು ಕಾರಣ ಆಗಿನ ಜಿಲ್ಲಾಧಿಕಾರಿ, ಶಾಸಕರು ಮತ್ತು ಉಸ್ತುವಾರಿ ಸಚಿವರು. ಅವರು ತೆರವು ಮಾಡಿ ಕೊಡದಿದ್ದರಿಂದ ಕಾಮಗಾರಿ ನಡೆದಿಲ್ಲ. ಬಿಸಿ ರೋಡ್‌ನಲ್ಲಿ ಪರಿಹಾರ ಕೊಟ್ಟು 15 ವರ್ಷವಾದರೂ ಹೆದ್ದಾರಿ ಬದಿಯ 10 ಕಟ್ಟಡಗಳನ್ನು ಇನ್ನೂ ತೆರವುಗೊಳಿಸಿಲ್ಲ. ತೊಕ್ಕೊಟ್ಟಿ ನಲ್ಲಿ ಸರ್ವೀಸ್ ರಸ್ತೆಯ ಮಧ್ಯದಲ್ಲಿ ಮೂರು ಮನೆಗಳಿದ್ದು, ಈಗಾಗಲೇ ಪರಿಹಾರ ನೀಡಿದ್ದರೂ, ತೆರವುಗೊಳಿಸಿಕೊಟ್ಟಿಲ್ಲ. ತೆರವುಗೊಳಿಸಲು ಹೋದರೆ ಅಧಿಕಾರಿಗಳಿಗೆ ಬೆದರಿಕೆ ಕರೆ ಬರುತ್ತವೆ ಎಂದು ನಳಿನ್ ಆರೋಪಿಸಿದರು.

ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ ಎಂದು ಮೌನವಾಗಿದ್ದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಬಿಸಿ ರೋಡ್‌ನಿಂದ ಸುರತ್ಕಲ್ ಮುಕ್ಕವರೆಗಿನ 30 ಕಿಮೀ ರಸ್ತೆಗೆ 13 ವರ್ಷ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ಬೈಕಂಪಾಡಿ ಸೇತುವೆ ಸೇರಿರಲಿಲ್ಲ. ಅದನ್ನು ನನ್ನ ಅವಧಿಯಲ್ಲಿ ನವಯುಗದ ಮೂಲಕ ಮಾಡಲಾಯಿತು. ಪಾಣೆಮಂಗಳೂರು ನೇತ್ರಾವತಿ ಸೇತುವೆ ಕಾಮಗಾರಿ 14 ವರ್ಷ ನಡೆದಿದೆ. ಯಡಿಯೂಪ್ಪ ಮುಖ್ಯಮಂತಿಯಾಗಿದ್ದಾಗ ಮಂಗಳೂರು ಮಹಾನಗರ ಪಾಲಿಕೆಗೆ 300 ಕೋಟಿ ರೂ. ಅನುದಾನ ನೀಡಿದ್ದರು. ಆಗ ಪಾಲಿಕೆ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿತ್ತು. 11 ವರ್ಷವಾದರೂ ಇಲ್ಲಿಯ ವರೆಗೆ ಫುಟ್‌ಪಾತ್ ನಿರ್ಮಿಸಲು ಪಾಲಿಕೆಯಿಂದ ಸಾಧ್ಯವಾಗಿಲ್ಲ. ವಿರೋಧಿಸುವವರು ಇವೆಲ್ಲ ಯಾಕೆ ತಡವಾಯಿತು ಎಂದು ಉತ್ತರ ನೀಡಿ ಬಳಿಕ ವಿರೋಧಿಸಲಿ ಎಂದರು.

ಟೋಲ್ ಸ್ಥಗಿತಕ್ಕೆ ಪತ್ರ

ಮುಕ್ಕ ಹಾಗೂ ಬ್ರಹ್ಮರಕೂಟ್ಲು ಎರಡೂ ಟೋಟ್‌ಗೇಟ್‌ಗಳನ್ನು ಸ್ಥಗಿತಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಅದಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದ ಹೆದ್ದಾರಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ರಾಜ್ಯದ ಮುಖ್ಯಮಂತ್ರಿಯವರಿಗೆ ಈ ಕುರಿತು ಈಗಾಗಲೇ ಪತ್ರ ಬರೆಯಲಾಗಿದೆ. ಜತೆಗೆ ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿಯಿಂದ ಟೋಲ್ ತೆಗೆಯಬಹುದು ಎಂಬ ವರದಿಯನ್ನು ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿಯಿಂದ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು  ನಳಿನ್ ಕುಮಾರ್ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯ್ ಕುಮಾರ್, ಇಂಜಿನಿಯರ್ ಅಜಿತ್ ಕುಮಾರ್, ನವಯುಗ್ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News