ಸಮುದಾಯದ ಮೇಲಿನ ಸುಳ್ಳಾರೋಪಗಳು ಜನಸೇವೆಯ ಮೂಲಕ ದೂರವಾಗಲಿ: ಯಾಸೀನ್ ಮಲ್ಪೆ

Update: 2018-11-18 14:46 GMT

ಮಂಗಳೂರು, ನ.18: ಸತತ ಪರಿಶ್ರಮ, ಪ್ರತಿಭಾ ಪ್ರದರ್ಶನ, ಹೋರಾಟದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾದರೂ ಕೂಡ ಸಮಾಜದಲ್ಲಿ ಅದು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಲಿವೆ ಎಂಬ ಪ್ರಜ್ಞೆ ಎಲ್ಲ ಸಾಧಕರಲ್ಲಿರಬೇಕಾಗಿದೆ. ಆ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುವುದರೊಂದಿಗೆ ಸಮುದಾಯದ ಮೇಲೆ ಇತ್ತೀಚಿನ ದಿನಗಳಲ್ಲಿ ಹೊರಿಸಲಾಗುತ್ತಿರುವ ಸುಳ್ಳಾರೋಪಗಳನ್ನು ಜನಸೇವೆಯ ಮೂಲಕ ದೂರ ಮಾಡಬೇಕಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅಭಿಪ್ರಾಯಪಟ್ಟರು.

ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ವತಿಯಿಂದ ರವಿವಾರ ಕಂಕನಾಡಿಯ ಫಲಾಹ್ ಸಮುದಾಯ ಭವನದಲ್ಲಿ ಜರುಗಿದ ವಿವಿಧ ಕ್ಷೇತ್ರದ ಸಾಧಕರು, ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿ ಅವರು ಮಾತನಾಡುತ್ತಿದ್ದರು.

ಜಾತಿ-ಕೋಮುವಾದದ ವಿಷಬೀಜ ಬಿತ್ತುವ ಈ ಕಾಲದಲ್ಲಿ ಜನಪ್ರತಿನಿಧಿಗಳು ಯಾವ ಕಾರಣಕ್ಕೂ ಜನರನ್ನು ವಂಚಿಸಬಾರದು. ಬದಲಾಗಿ ಜನರ ಪ್ರೀತಿ-ವಿಶ್ವಾಸವನ್ನು ಗಳಿಸುವವರಾಗಬೇಕು. ಜನಸೇವೆಗೆ ಪ್ರವಾದಿ ಮುಹಮ್ಮದ್ (ಸ) ಅವರನ್ನು ಮಾದರಿಯನ್ನಾಗಿಸಿಕೊಳ್ಳಬೇಕು. ಸಂಕುಚಿತ ಮನೋಭಾವ, ಸಣ್ಣತನದಿಂದ ದೂರವಿದ್ದು, ಅವಿಶ್ವಾಸದ ಗೋಡೆಯನ್ನು ಕೆಡವುವರಾಗಬೇಕು ಎಂದು ಯಾಸೀನ್ ಮಲ್ಪೆ ಹೇಳಿದರು.

ಜನಪ್ರತಿನಿಧಿಗಳಾದ ಬಳಿಕ ಸಮುದಾಯದ ಪ್ರತಿನಿಧಿಗಳಾಗದೆ ಎಲ್ಲರ ಸೇವಕರಾಗಬೇಕು. ನಾಡಿಗೆ ಬೆಂಕಿ ಹಚ್ಚುವೆವು ಎಂದಾಗ ಬೆಂಕಿ ನಂದಿಸಲು ಮುಂದಾಗುವವರಾಗಬೇಕು, ರಕ್ತ ಹರಿಸುವೆವು ಎಂದಾಗ ರಕ್ತ ಕೊಡುವೆವು ಎನ್ನುವವರಾಗಬೇಕು, ದಾರಿಗೆ ಕಲ್ಲು-ಮುಳ್ಳು ಹಾಕುವೆವು ಎಂದಾಗ ಅವುಗಳನ್ನು ತೆಗೆಯುವವರಾಗಬೇಕು ಎಂದ ಯಾಸೀನ್ ಮಲ್ಪೆ ರಾಜಕಾರಣಿಗಳು ಸಚ್ಚಾರಿತ್ರರಾಗಿರಬೇಕು, ಭ್ರಷ್ಟಾಚಾರದಿಂದ ಮುಕ್ತರಾಗಬೇಕು ಮತ್ತು ಶಿಕ್ಷಕರು ಕೇವಲ ಸರಕಾರಿ ನೌಕರರಾಗಿರದೆ ಸಾಮಾಜಿಕ ಕಳಕಳಿಯುಳ್ಳವರಾಗಬೇಕು, ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ಮುಂದೆ ಬರಬೇಕು ಎಂದರು.

ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಮೀಯ್ಯತುಲ್ ಫಲಾಹ್‌ನ ಸ್ಥಾಪಕ ಮುಹಮ್ಮದ್ ಇಕ್ಬಾಲ್ ಯೂಸುಫ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಜಮೀಯ್ಯತುಲ್ ಫಲಾಹ್‌ನ ಎನ್‌ಆರ್‌ಸಿಸಿ ಘಟಕದ ಪದಾಧಿಕಾರಿಗಳಾದ ಅಬೂ ಮುಹಮ್ಮದ್, ಫರ್ವೇಝ್ ಅಲಿ, ಶಾಹುಲ್ ಹಮೀದ್, ಜಮೀಯ್ಯತುಲ್ ಫಲಾಹ್‌ನ ಕೋಶಾಧಿಕಾರಿ ಇಬ್ರಾಹೀಂ ಕೋಡಿಜಾಲ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಫಾಝಿಲ್ ಕಿರಾಅತ್ ಪಠಿಸಿದರು. ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಜಮೀಯ್ಯತುಲ್ ಫಲಾಹ್‌ನ ಪ್ರಧಾನ ಕಾರ್ಯದರ್ಶಿ ಸಲೀಂ ಹಂಡೇಲ್‌ ವಂದಿಸಿದರು.

ತಾಂತ್ರಿಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ

ಸನ್ಮಾನ ಸ್ವೀಕರಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ದ.ಕ.ಜಿಲ್ಲೆಯ ಶೈಕ್ಷಣಿಕ ಮತ್ತು ಸಾಮಾಜಿಕ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ಜಮೀಯ್ಯತುಲ್ ಫಲಾಹ್ ಮಂಗಳೂರಿನಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಮತ್ತು ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ನಿಲಯ ಸ್ಥಾಪಿಸಲು ಮುಂದೆ ಬರಬೇಕು ಎಂದು ಕರೆ ನೀಡಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ. ಮೋನು ಕಣಚೂರು, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಪಿ. ಇಬ್ರಾಹೀಂ, ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ. ಎ.ಎಂ.ಖಾನ್, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ನಡ, ವರ್ಷದ ಬ್ಯಾರಿ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ.ಎಂ.ತುಂಬೆ, ಆದಂ ಸಾಹೇಬ್, ಅಸೀದ್ ಪದಂಗಡಿ ಅವರನ್ನು ಸನ್ಮಾನಿಸಲಾಯಿತು.

ಕಳೆದ ಬಾರಿಯ ಎಸೆಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಅವಿಭಜಿತ ದ.ಕ.ಜಿಲ್ಲೆಯ ವಿದ್ಯಾರ್ಥಿಗಳಾದ ಮರಿಯಮ್ಮತುಲ್ ಸಲ್ಮಾ, ಆಮ್ನಾ ಸನಂ, ಫಾತಿಮಾ ಅಫ್ರೀನಾ, ಅಝ್‌ವೀನಾ ಬಿ.ಎ., ಮುಹಮ್ಮದ್ ಫವಾಝ್, ನಿಸ್ಬಾ ಸನಾ, ಆಯಿಶಾ ಸಲ್ವಾ, ಝೈನಬ್, ಸನಾ ಕೌಸರ್ ಅವರನ್ನು ಸನ್ಮಾನಿಸಲಾಯಿತು.

ಕಳೆದ ಬಾರಿಯ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಅವಿಭಜಿತ ದ.ಕ.ಜಿಲ್ಲೆಯ ವಿದ್ಯಾರ್ಥಿಗಳಾದ ರಂಶೀನಾ, ಬಾತುಲ್ ಮೊಹ್ಸಿನಾ, ಮುಹಮ್ಮದ್ ನವಾಲ್, ನಮೀರಾ ಫಾತಿಮಾ, ಶಾಝ್ ರಶೀದ್ ಹುಸೈನ್, ಹೀಬನಾ, ಆಯಿಶಾ ಇಫ್ರಾ, ಅನೀಶಾ, ನಿಧಾ ಫಿರ್ದೌಸ್, ಝಿನ್ನಿರಾ ಅವರನ್ನು ಸನ್ಮಾನಿಸಲಾಯಿತು.

ಕೊಣಾಜೆ ಅಡ್ಕರೆಪಡ್ಪುವಿನ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ ಅತ್ಯಧಿಕ ಅಂಕಗಳಿಸಿದ ಎಸೆಸೆಲ್ಸಿ ವಿದ್ಯಾರ್ಥಿಗಳಾದ ಫರ್ಝಾನಾ, ಆಯಿಶತುಲ್ ನಝ್ಮಾ, ರೆನಿಶ್ ಟ್ರಿಝಾ, ರೊಡ್ರಿಗಸ್, ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಆಯಿಶಾ, ಫಾಯಿಶಾ ಅವರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಮುದಾಯದ ಸುಮಾರು 33 ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಹನೀಫ್ ಪುತ್ತೂರು ನಿರ್ದೇಶನದಲ್ಲಿ ನಿರ್ಮಾಣಗೊಂಡ ಜಮೀಯ್ಯತುಲ್ ಫಲಾಹ್‌ನ 30 ವರ್ಷದ ಸಾಧನೆಯ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News