ಆಫ್‍ರೋಡ್ ಚಾಲನೆ ಚಾಲಕರ ಚಾಣಕ್ಯತನಕ್ಕೆ ಸಾಕ್ಷಿ-ಕರ್ನಲ್ ಶರತ್ ಭಂಡಾರಿ

Update: 2018-11-18 15:13 GMT

ಪುತ್ತೂರು, ನ. 18: ಯಾವುದೇ ಅಪಘಾತಕ್ಕೆ ಕಾರಣವಾಗದ ಅಪಘಾತ ಮುಕ್ತವಾಗಿರುವ ಅಫ್‍ರೋಡ್ ಚಾಲನೆ ಚಾಲಕರ ಚಾಣಕ್ಯತನಕ್ಕೆ ಸಾಕ್ಷಿಯಾಗಿದ್ದು, ಇಂತಹ ಸ್ಪರ್ಧೆಗಳು ಚಾಲಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅಪಘಾತ ಮುಕ್ತ ವಾತಾವರಣವನ್ನು ನಿರ್ಮಾಣ ಮಾಡಲು ಇಂತಹ ಸಾಹಸಮಯ ಕ್ರೀಡೆಗಳು ಸಹಕಾರಿಯಾಗಿದೆ. ಮಾತ್ರವಲ್ಲದೆ ಸುರಕ್ಷತಾ ಚಾಲನೆ ದೃಷ್ಟಿಯಿಂದಲೂ ಇದು ಉಪಯುಕ್ತಕಾರಿಯಾಗಿದೆ ಎಂದು ನಿವೃತ್ತ ಯೋಧ ಕರ್ನಲ್ ಶರತ್ ಭಂಡಾರಿ ಹೇಳಿದರು. 

ಅವರು `21 ಆಫ್‍ರೋಡ್ ಕ್ಲಬ್' ನ ವತಿಯಿಂದ ರವಿವಾರ ಪುತ್ತೂರಿನಲ್ಲಿ ನಡೆದ 3ನೇ ವರ್ಷದ ಅಂತಾರಾಜ್ಯ ಮಟ್ಟದ ಫೋರ್‍ವೀಲ್ ಜೀಪುಗಳ ಆಫ್‍ರೋಡ್ ಓಟದ ಸ್ಪರ್ದೆಗೆ ಸಂಪ್ಯದ ಶ್ರೀ ವೆಂಕಟೇಶ್ವರ ಸಾ ಮಿಲ್‍ನ ಬಳಿ ಚಾಲನೆ ನೀಡಿ ಮಾತನಾಡಿದರು. 

ಆಫ್‍ರೋಡ್ ಚಾಲನೆ ಚಾಲಕರ ಚಾಲನಾ ನೈಪುಣ್ಯವನ್ನು ಪರೀಕ್ಷಿಸುವ ವಿಧಾನವಾಗಿದ್ದು, ಜೀಪ್ ಚಾಲಕರು ತಮ್ಮ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಕೇರಳ ಹಾಗೂ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ನಡೆದ ಸಂದರ್ಭದಲ್ಲಿ ಎನ್‍ಡಿಆರ್ ಎಫ್ ತಂಡ ಹೋಗಲು ಅಸಾಧ್ಯವಾದ ಪ್ರದೇಶಗಳಿಗೆ ಆಫ್‍ರೋಡ್ ಚಾಲಕರು ತೆರಳಿ ನೆರೆ ಸಂತ್ರಸ್ತರನ್ನು ರಕ್ಷಣೆ ಮಾಡುವ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಸಾಹಸಮಯ ಕ್ರೀಡೆಯಾಗಿಯಾಗಿ ಗುರುತಿಸಿಕೊಂಡಿರುವ ಆಫ್‍ರೋಡ್ ಚಾಲನೆಯು ಸ್ವಯಂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಪ್ರೇರಣೆಯಾಗಿದೆ. ವಾಹನಕ್ಕೆ ಹಾನಿಯಾಗದಂತೆ ಚಲಾಯಿಸುವುದು ಈ ಓಟದ ಪ್ರಮುಖ ಉದ್ದೇಶ ಎಂದರು.

21 ಆಫ್‍ರೋಡ್ ಕ್ಲಬ್‍ನ ಸ್ಥಾಪಕ ಅಧ್ಯಕ್ಷ ಅಖಿಲ್ ನಾಯಕ್ ಮಾತನಾಡಿ ಕ್ಲಬ್‍ನ ವತಿಯಿಂದ 3ನೇ ವರ್ಷದ ಆಫ್‍ರೋಡ್ ವಾಹನ ಚಾಲನೆ ಓಟ ನಡೆಸಲಾಗುತ್ತಿದ್ದು, ಈ ಹಿಂದಿನ ಬಾರಿಯ ರಸ್ತೆಗಿಂತ ಹೆಚ್ಚು ಕ್ಲಿಷ್ಟವಾದ ರಸ್ತೆಗಳನ್ನು ಈ ಬಾರಿ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಚಾಲಕರು ತಮ್ಮ ಸುರಕ್ಷತೆ ಮತ್ತು ಜಾಗರೂಕತೆಯಿಂದ ಚಾಲನೆ ನಡೆಸಬೇಕು ಎಂದರು. 

ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಾ ಮಿಲ್‍ನ ಕೆ.ಆರ್. ನಾಯಕ್, ಕ್ಯಾ. ದೀಪಕ್, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, 21 ಆಫ್‍ರೋಡ್ ಕ್ಲಬ್‍ನ ಸದಸ್ಯರಾದ ವಿಘ್ನೇಶ್ ಪ್ರಭು, ಸನತ್ ರೈ, ಶಿವರಾಜ್ ಹೊಳ್ಳ ಮತ್ತು ಜೋನ್ ಮೈಕಲ್ ರೆಬೆಲ್ಲೋ, ಪೃಥ್ವಿ ಮತ್ತಿತರರು  ಉಪಸ್ಥಿತರಿದ್ದರು. 

ವಿಶ್ವನಾಥ್ ನಾಯಕ್ ಸ್ವಾಗತಿಸಿದರು. ನಿಖಿಲ್ ಶೆಟ್ಟಿ ವಂದಿಸಿದರು. ಬಳಿಕ ಜೀಪ್‍ಗಳ ಆಫ್‍ರೋಡ್ ಓಟದ ಕೂಟದಲ್ಲಿ ಪಾಲ್ಗೊಂಗ ಜೀಪುಗಳು ಮುಕ್ರಂಪಾಡಿ, ಕುಂಜೂರು ಪಂಜ, ದೊಡ್ಡಡ್ಕ, ಕೃಷ್ಣಗಿರಿ, ಗ್ರಾಮಾಂತರ ಬಲ್ನಾಡು, ಬಂಗಾರಡ್ಕ, ಪರ್ಲಡ್ಕ ಮತ್ತು ಬೈಪಾಸ್ ಮೂಲಕ ಗುಡ್ಡಗಾಡು ಮತ್ತು ಡಾಂಬರು ರಸ್ತೆಯಲ್ಲಿ 25ಕಿ.ಮೀ ಸಾಗಿ ಸಂಪ್ಯದಲ್ಲಿ ಸಮಾಪನಗೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News