ಆಸ್ತಿಗಾಗಿ ತಮ್ಮನನ್ನು ಕೊಲೈಗೆದು ಮೃತದೇಹ ಸುಟ್ಟು ಹಾಕಿದ ಅಣ್ಣ: ಆರೋಪಿ ಬಂಧನ

Update: 2018-11-18 16:09 GMT
ಮೆಲ್ವಿನ್ ಸಂತೋಷ್ ಡಿಸೋಜ

ಕಾರ್ಕಳ, ನ.18: ಎಂಟು ತಿಂಗಳ ಹಿಂದೆ ನಡೆದ ಕಾರ್ಕಳ ಮಂಗಳಪಾದೆಯ ಅವಿಲ್ ಡಿಸೋಜ (24) ನಾಪತ್ತೆ ಪ್ರಕರಣವು ಇದೀಗ ಹೊಸ ತಿರುವು ಪಡೆದು ಕೊಂಡಿದ್ದು, ಅವರನ್ನು ಸ್ವಂತ ಅಣ್ಣನೇ ಆಸ್ತಿ ವಿಚಾರದಲ್ಲಿ ಕೊಲೆಗೈದು ಮೃತದೇಹವನ್ನು ಸುಟ್ಟು ಹಾಕಿ ಸಾಕ್ಷನಾಶ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ಮೃತರ ಅಣ್ಣ ಮೆಲ್ವಿನ್ ಸಂತೋಷ್ ಡಿಸೋಜ(31) ಎಂಬಾತನನ್ನು ಕಾರ್ಕಳ ಪೊಲೀಸರು ನ.17ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಅವಿಲ್ ಡಿಸೋಜ ಗುಡ್‌ಪ್ರೈಡೇ ದಿನ ಮನೆಯಿಂದ ನಾಪತ್ತೆಯಾಗಿರುವುದಾಗಿ ಅವರ ತಂದೆ ಅಲ್ಬರ್ಟ್ ಡಿಸೋಜ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೆಲ್ವಿನ್ ಡಿಸೋಜನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂತೆನ್ನಲಾಗಿದೆ.

ತಂದೆ ತಾಯಿಯ ಆಸ್ತಿ ವಿಚಾರದಲ್ಲಿ ಅವಿಲ್ ಹಾಗೂ ಮೆಲ್ವಿನ್ ಮಧ್ಯೆ ಮಾ. 30ರಂದು ರಾತ್ರಿ 10ಗಂಟೆಗೆ ಮನೆಯಲ್ಲಿ ಜಗಳ ನಡೆದಿತ್ತು. ಈ ವೇಳೆ ಮೆಲ್ವಿನ್ ಚೂರಿಯಿಂದ ಇರಿದು, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಅವಿಲ್ ಡಿಸೋಜನನ್ನು ಕೊಲೆ ಮಾಡಿದ್ದನು. ನಂತರ ಮೃತದೇಹವನ್ನು ಮನೆಯ ಸಮೀಪದ ರಾಮ ಸಮುದ್ರದ ಕರೆಯ ದಡಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿ ಸಾಕ್ಷವನ್ನು ನಾಶ ಮಾಡಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರ್ಗಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಕಾರ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ನಿರ್ದೇಶನದಂತೆ ತನಿಖಾಧಿಕಾರಿ ಕಾರ್ಕಳ ವೃತ್ತ ನಿರೀಕ್ಷಕ ವಿ.ಎಸ್. ಹಾಲಮೂರ್ತಿ ರಾವ್ ಮತ್ತು ಕಾರ್ಕಳ ನಗರ ಠಾಣಾಧಿಕಾರಿ ನಂಜಾ ನಾಯ್ಕ ನೇತೃತ್ವದಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್, ಪ್ರಶಾಂತ್, ರಾಘವೇಂದ್ರ, ಕಾರ್ಕಳ ನಗರ ಎಎಸ್ಸೈ ದಿನಕರ್, ಸಿಬ್ಬಂದಿಗಳಾದ ಕಿಶೋರ್, ನಾಗೇಶ್ ನಾಯಕ್, ಘನಶ್ಯಾಮ್ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News