ಬಿಷಪರ ‘ಬಂಧುತ್ವ ಕಾರ್ಯಕ್ರಮ’ಕ್ಕೆ ಸರಕಾರದ ನೇತೃತ್ವ: ಸಚಿವ ಖಾದರ್

Update: 2018-11-18 17:01 GMT

ಮಂಗಳೂರು, ನ.18: ನೂತನ ಬಿಷಪರು ಧರ್ಮಪ್ರಾಂತ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಹಮ್ಮಿಕೊಂಡಿದ್ದ ‘ಬಂಧುತ್ವ ಕಾರ್ಯಕ್ರಮ’ವು ಬಲಿಷ್ಠ ಭಾರತ ನಿರ್ಮಾಣಕ್ಕೆ ಸ್ಫೂರ್ತಿಯಾಗಿದೆ. ರಾಜ್ಯ ಸರಕಾರವೇ ನೇತೃತ್ವ ವಹಿಸಿ ಈ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಲ್ಲೂ ಕಾರ್ಯರೂಪಕ್ಕೆ ತರಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಭರವಸೆ ನೀಡಿದರು.

ನಗರದ ಬೋಳಾರದಲ್ಲಿನ ಹೋಲಿ ರೊಸಾರಿಯೊ ಕೆಥೆಡ್ರಲ್ ಚರ್ಚ್‌ನಲ್ಲಿ ರವಿವಾರ ಸಂಜೆ ನಡೆದ ಹೋಲಿ ರೊಸಾರಿಯೊ ಕೆಥೆಡ್ರಲ್ 450ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬಿಷಪರು ಎಲ್ಲ ಜಾತಿ, ಮತಗಳ ಜನರನ್ನು ಸೇರಿಸಿಕೊಂಡು ಬಂಧುತ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮ ದಿನದಿಂದ ದಿನಕ್ಕೆ ಹೆಸರುವಾಸಿಯಾಗುತ್ತಿದೆ. ಇದು ಪರಸ್ಪರ ವಿಶ್ವಾಸಭರಿತ ಸಮಾಜ, ಅಭಿವೃದ್ಧಿಯ ಕರ್ನಾಟಕ ಮತ್ತು ಬಲಿಷ್ಠ ಭಾರತ ನಿರ್ಮಾಣ ಮಾಡುವ ಕನಸನ್ನು ಹೊಂದಿದೆ. ಇದೊಂದು ಸೌಹಾರ್ದಯುತ ಕಾರ್ಯಕ್ರಮವಾಗಿದೆ ಎಂದರು.

ಸಚಿವನಾಗಿ ತಾನು ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುಖ್ಯಮಂತ್ರಿಯ ಗಮನಕ್ಕೆ ತರಲಾಗಿದೆ. ಬಂಧುತ್ವ ಕಾರ್ಯಕ್ರಮ ವನ್ನು ಸರಕಾರದ ಕಾರ್ಯಕ್ರಮವಾಗಿ ಎಲ್ಲ ಜಿಲ್ಲೆಗಳಲ್ಲಿ ಆಚರಿಸಲು ಮನವಿ ಮಾಡಲಾಗಿತ್ತು. ಇದಕ್ಕೆ ಮುಖ್ಯಮಂತ್ರಿಯೂ ಸಮ್ಮತಿ ಸೂಚಿಸಿದ್ದಾರೆ. ಶೀಘ್ರದಲ್ಲಿ ಬಂಧುತ್ವ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

ಇತಿಹಾಸ ಪ್ರಸಿದ್ಧ, ಪವಿತ್ರವಾದ ರೊಸಾರಿಯೊ 450 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನೆಲೆ ನಿಂತು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ದ.ಕ. ಜಿಲ್ಲೆ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ರೊಸಾರಿಯೊ ಚರ್ಚ್‌ನ ಕೊಡುಗೆ ಇದೆ. ಚರ್ಚ್ ಆರಂಭದಿಂದ ಬಂದ ಸೇವೆಗಳು ಇಲ್ಲಿಯವರೆಗೂ ಮುಂದುವರಿಸಿಕೊಂಡು ಬಂದಂತಹ ಪ್ರತಿಯೊಬ್ಬರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ನೂತನ ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿವ ಯು.ಟಿ.ಖಾದರ್ ಚರ್ಚ್ ವತಿಯಿಂದ 10 ಬಡ ಕುಟುಂಬಗಳ ಹಕ್ಕುಪತ್ರಗಳನ್ನು ಸುಜಾತಾ ಡಿಸೋಜ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಬಿಷಪ್ ಎಮೆರಿಟಸ್ ಅಲೋಶಿಯಸ್ ಪೌಲ್ ಡಿಸೋಜ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ಜೆ.ಆರ್.ಲೋಬೊ, ಆಸ್ಕರ್ ಫೆರ್ನಾಂಡಿಸ್ ಅವರ ಪತ್ನಿ, ಬ್ಲೋಸೆಮ್ ಫೆರ್ನಾಂಡಿಸ್, ಸಿ.ಜೆ.ಸೈಮನ್, ಎಲಿಜಬೆತ್ ರೋಜ್, ಶ್ರೇಷ್ಠ ಗುರು ಮ್ಯಾಕ್ಸಿಂ ನರೋನ್ಹ, ಫಾ.ಪ್ರವೀಣ್ ಮೊರ್ಸೆಸ್, ಸಿಸ್ಟರ್ ಮೆಬಿಲಿಯಾ, ಸಿಸ್ಟರ್ ಎಂ.ಫೆರ್ನಾಂಡಿಸ್, ಎಂ.ಪಿ. ನರೋನ್ಹ, ಮಂಗಳೂರು ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಎಂ.ಜಗದೀಶ್ ಪೈ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೋಜರಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರೆಕ್ಟರ್ ಫಾ.ಜೆ.ಬಿ.ಕ್ರಾಸ್ತಾ ಸ್ವಾಗತಿಸಿದರು. ಜಾನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಎಲಿಜಾಬೆತ್ ರೋಜ್ ವಂದಿಸಿದರು.

ಸಂಸ್ಥೆಗಳಿಗೆ ವಯಸ್ಸಾದಂತೆ ಪ್ರೌಢತೆ ಹೆಚ್ಚುತ್ತದೆ: ಆಸ್ಕರ್ ಫೆರ್ನಾಂಡಿಸ್

ಧರ್ಮಪ್ರಾಂತದಲ್ಲಿ ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಕಾರ್ಯಕ್ರಮಗಳನ್ನು ಹೆಸರುವಾಸಿಯಾಗುವಂತೆ ಕಾರ್ಯಾಚರಣೆಗೆ ತರುವುದು ಸಾಮಾನ್ಯ ವಾದುದಲ್ಲ. ಮನುಷ್ಯರು ವಯಸ್ಸಾದಂತೆ ವೃದ್ಧಾವಸ್ಥೆಗೆ ತಲುಪುತ್ತಾರೆ. ಆದರೆ ಚರ್ಚ್, ಆಸ್ಪತ್ರೆ, ಶಾಲೆ, ಸಂಸ್ಥೆಗಳು ತಮ್ಮ ಸೇವೆಗಳನ್ನು ನೀಡುವ ಮೂಲಕ ವಯಸ್ಕ ಪ್ರೌಢತೆಯನ್ನು ಹೆಚ್ಚಿಸಿಕೊಳ್ಳುತ್ತವೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ತಿಳಿಸಿದರು.

ಹೋಲಿ ರೊಸಾರಿಯೊ ಕೆಥೆಡ್ರಲ್ 450ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ‘ರೊಸಾರಿಯೊ ವಿಶೇಷ ಅಂಚೆಚೀಟಿ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಡಿನಾದ್ಯಂತ ಆಸ್ಪತ್ರೆಗಳಲ್ಲಿ ‘ಕುಷ್ಠರೋಗಿಗಳಿಗೆ ಪ್ರವೇಶಾವಕಾಶವಿಲ್ಲ’ ಎಂದು ಬೋರ್ಡ್‌ಗಳನ್ನು ಹಾಕಿಕೊಂಡಿದ್ದಾಗ, ಫಾದರ್ ಮುಲ್ಲರ್ ಸಂಸ್ಥೆಯು ಆಸ್ಪತ್ರೆ ಸ್ಥಾಪಿಸಿ ‘ಕುಷ್ಠರೋಗಿಗಳಿಗೆ ಪ್ರವೇಶವಿದೆ’ ಎಂದು ಬೋರ್ಡ್‌ನ್ನು ಹಾಕಿ ರೋಗಿಗಳಿಗೆ ಉಚಿತ ಚಿಕಿತ್ಸೆ, ಸೇವೆ ನೀಡಿದೆ. ದೇಶದ ವಿವಿಧ ಭಾಗಗಳಿಂದ ಬಂದ ರೋಗಿಗಳಿಗೆ ಆಶ್ರಯ ನೀಡಿ ಸೇವೆ ಸಲ್ಲಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News