ದ.ಕ. ಜಿಲ್ಲಾ ದಲಿತ ಕುಂದುಕೊರತೆ ಸಭೆಯನ್ನೂ ಕಾಡಿದ ಮರಳು ಸಮಸ್ಯೆ!

Update: 2018-11-19 11:51 GMT

ಮಂಗಳೂರು, ನ.19: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮರಳುಗಾರಿಕೆಗೆ ಅವಕಾಶ ಹಾಗೂ ಮರಳು ಲಭ್ಯತೆ ಕುರಿತಂತೆ ಉಂಟಾಗಿರುವ ಸಮಸ್ಯೆ ಇಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ದಲಿತ ಕುಂದುಕೊರತೆಗಳ ಪರಿಶೀಲನೆ ಸಭೆಯಲ್ಲೂ ಪ್ರತಿಧ್ವನಿಸಿತು.

ದ.ಕ. ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕಾಂತೇ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಇದೀಗ ನಾನ್ ಸಿಆರ್‌ಝೆಡ್ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಜಿಲ್ಲಾಧಿಕಾರಿ ಅವಕಾಶ ಒದಗಿಸಿದ್ದಾರೆ. ಆದರೆ 2006ರಿಂದಲೂ ಮರಳುಗಾರಿಕೆ ನಡೆಸುತ್ತಿರುವ ದಲಿತರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆರ್ಥಿಕವಾಗಿ ಬಲಾಢ್ಯರಾಗಿರುವವರಿಗೆ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ದಲಿತ ಮುಖಂಡ ನಾರಾಯಣ ಎಂಬವರು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಡಾ.ರವಿಕಾಂತೇ ಗೌಡ, ಮರಳುಗಾರಿಕೆಗೆ ಸಂಬಂಧಿಸಿದ ಮುಂದಿನ ಕ್ರಿಯಾ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಕಾನೂನು ಪ್ರಕಾರ ಕ್ರಮಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಒಂದೆಡೆ ಮರಳು ತೆಗೆಯಲು ಸಮಸ್ಯೆಯಾದರೆ, ಮತ್ತೊಂದೆಡೆ ಮರಳಿಲ್ಲದೆ ಬಡ ಜನಸಾಮಾನ್ಯರು ಮನೆ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ ಎಂದು ದಲಿತ ನಾಯಕ ಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಮರಳು ನೀತಿ ಮೂಲಕ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ. ಆಶ್ರಯ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿ ಲೋಕೋಪಯೋಗಿ ಇಲಾಖೆ ಮೂಲಕ ಮರಳು ಪೂರೈಕೆಗೆ ಅವಕಾಶವಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಎಸ್ಪಿ ನುಡಿದರು.

ದಲಿತ ನಾಯಕ ಬಾಲಕೃಷ್ಣ ಎಂಬವರು ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ಪಾವತಿಯಲ್ಲಿ ಅನ್ಯಾಯವಾಗುತ್ತಿದೆ. ಶಿಕ್ಷಕರು ಈ ಬಗ್ಗೆ ದೂರು ನೀಡಿದರೆ ಅವರನ್ನು ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಗಳು ನಡೆಯುತ್ತಿವೆ. ಕನಿಷ್ಠ ವೇತನ 17,500 ರೂ. ನಿಗದಿಪಡಿಸಲಾಗಿದ್ದರೂ, ವೇತನ ನೀಡುವಾಗ ಸುಮಾರು 10,000 ರೂ.ನಷ್ಟು ಕಡಿತ ಮಾಡಲಾಗುತ್ತಿದೆ. ಜಿಲ್ಲೆಯ ಕೆಲವು ಶಾಲೆಗಳಲ್ಲಿ ದಲಿತ ವರ್ಗಕ್ಕೆ ಸೇರಿದ ಕೆಲವೊಂದು ಶಿಕ್ಷಕರಿಗೆ ಈ ರೀತಿಯ ಅನ್ಯಾಯವಾಗಿದ್ದು, ಅದರ ಮಾಹಿತಿಯನ್ನು ನೀಡುತ್ತಿರುವುದಾಗಿ ಹೇಳಿದರು.

ಸ್ಥಳೀಯ ಪೊಲೀಸರ ನೆರವಿನೊಂದಿಗೆ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಎಸ್ಪಿ ಸೂಚಿಸಿದರು.

ದಲಿತ ನಾಯಕ ಆನಂದ್ ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬಂದು ಉನ್ನತ ವಿದ್ಯಾಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳು ಸಿಗುವಂತಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ದಲಿತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ನೀಡಲಾಗುವ ಸಹಾಯಧನಕ್ಕೆ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಹಾಕುತ್ತಾರೆ. ಅರ್ಜಿ ಹಾಕಿದ ಎಲ್ಲರಿಗೂ ಅವಕಾಶ ಸಿಗಬೇಕು ಎಂದೂ ಅವರು ಈ ಸಂದರ್ಭ ಒತ್ತಾಯಿಸಿದರು.

ಬೆಳ್ತಂಗಡಿ ಲಾಯಿಲ ಗ್ರಾಮದಲ್ಲಿ ತಮ್ಮ ಪಿತ್ರಾರ್ಜಿತ ಡಿಸಿ ಮನ್ನಾ ಜಾಗದಲ್ಲಿ ಸಹೋದರ ಜತೆ ಸೇರಿ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಖಾಸಗಿ ವ್ಯಕ್ತಿಯೊಬ್ಬರು ಆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿ ಮನೆ ನಿರ್ಮಾಣಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ನಂದಿತಾ ಎಂಬವರು ದೂರಿದರು.

ಸಭೆಯ ಕೊನೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕಾಂತೇ ಗೌಡ, ದಲಿತ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಹಾಗಿದ್ದರೂ ಸಾಕ್ಷಿಗಳ ಕೊರತೆಯಿಂದಾಗಿ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಿದ್ದು ಹೋಗುತ್ತವೆ. ಆದ್ದರಿಂದ ಸಾಕ್ಷಿದಾರರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಪೊಲೀಸ್ ಠಾಣಾ ವತಿಯಿಂದ ಸಾಕ್ಷಿದಾರರ ದಿನವನ್ನು ಆಚರಿಸಲಾಗುತ್ತಿದ್ದು, ಅದರಲ್ಲಿ ಸಾಕ್ಷಿದಾರರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಜಿತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News