ಉಡುಪಿ: ನ.21ರಿಂದ ರಂಗಭೂಮಿ ಕನ್ನಡ ನಾಟಕ ಸ್ಪರ್ಧೆ

Update: 2018-11-19 14:19 GMT

ಉಡುಪಿ, ನ.19: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲಿ ಒಂದಾದ ರಂಗಭೂಮಿ ಉಡುಪಿ ಆಯೋಜಿಸುವ 39ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ನ.21ರ ಬುಧವಾರದಿಂದ ಎರಡು ವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.21ರ ಸಂಜೆ 6 ಗಂಟೆಗೆ ಕನ್ನಡ ನಾಟಕ ಸ್ಪರ್ಧೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ ಉದ್ಘಾಟಿಸಲಿದ್ದಾರೆ. ಮಂಗಳೂರಿನ ಉದ್ಯಮಿ ಎಸ್.ಟಿ.ಕರ್ಕೇರ ಹಾಗೂ ಉಡುಪಿ ಟೌನ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಕೆ.ಕೃಷ್ಣರಾಜ ಸರಳಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಡಾ.ಟಿಎಂಎ ಪೈ, ಎಸ್.ಎಲ್.ನಾರಾಯಣ ಭಟ್ ಹಾಗೂ ಮಲ್ಪೆ ಮಧ್ವರಾಜ್ ಸ್ಮಾರಕ ನಡೆಯುವ ಈ ಸ್ಪರ್ಧೆಯಲ್ಲಿ ಒಟ್ಟು 14 ನಾಟಕಗಳು ಪ್ರತಿದಿನ ಸಂಜೆ 6:30ಕ್ಕೆ ಪ್ರದರ್ಶನಗೊಳ್ಳಲಿದ್ದು, ಬೆಂಗಳೂರಿನ 4, ಉಡುಪಿಯ 3, ಶಿವಮೊಗ್ಗ, ಮೈಸೂರಿನ ತಲಾ ಎರಡು ಹಾಗೂ ಮಂಡ್ಯ, ಮಂಗಳೂರು ಮತ್ತು ಬೆಳಗಾವಿಯ ತಲಾ ಒಂದು ತಂಡಗಳು ಭಾಗವಹಿಸಲಿವೆ ಎಂದರು.

ಈ ಬಾರಿ ಪ್ರಥಮ ಬಹುಮಾನ ಪಡೆವ ತಂಡ 35,000ರೂ, ದ್ವಿತೀಯ ಬಹುಮಾನ ಪಡೆವ ತಂಡ 25,000, ತೃತೀಯ ಬಹುಮಾನ ಪಡೆವ ತಂಡ 15,000 ರೂ. ನಗದು ಬಹುಮಾನ ಪಡೆಯಲಿವೆ. ಅಲ್ಲದೇ ಶ್ರೇಷ್ಠ ನಿರ್ದೇಶನ, ನಟ, ನಟಿ, ಪ್ರಸಾದನ, ರಂಗಪರಿಕರ, ಸಂಗೀತ ಸಹಿತ ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿಗಳನ್ನು ನಗದು ಬಹುಮಾನದೊಂದಿಗೆ ನೀಡಲಾಗುವುದು ಎಂದು ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಈ ಬಾರಿ ತಂಡಗಳು ನಾಲ್ಕು ಪೌರಾಣಿಕ, ಎರಡು ಐತಿಹಾಸಿಕ ಹಾಗೂ ಎಂಟು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಲಿವೆ. ಮೊದಲ ದಿನ (ನ.21) ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನ ನಾಟಕ ಸಂಘ, ಕುವೆಂಪು ಅವರ ‘ಬಿರುಗಾಳಿ’ ಐತಿಹಾಸಿಕ ನಾಟಕವನ್ನು ಜಯಶ್ರೀ ಇಡ್ಕಿಡು ನಿರ್ದೇಶನದಲ್ಲಿ ಪ್ರದರ್ಶಿಸಿದರೆ, ನ.23ರಂದು ಶಿವಮೊಗ್ಗದ ಚೆಲುವರಂಗ ಆನಂದ್ ತೇಲ್‌ತುಂಬ್ಡೆ ಅವರ ‘ಖೈರ್ಲಾಂಜೆ’ ನಾಟಕವನ್ನು ಅಜಯ ನೀನಾಸಂ ನಿರ್ದೇಶನದಲ್ಲಿ ಪ್ರದರ್ಶಿಸಲಿದೆ.

ಸುದ್ದಿಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷ ಎಂ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ, ಜತೆ ಕಾರ್ಯದರ್ಶಿ ರವಿರಾಜ ಎಚ್.ಪಿ.,ಸದಸ್ಯರಾದ ಮೇಟಿ ಮುದಿಯಪ್ಪ ಹಾಗೂ ಶ್ರೀಪಾದ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News