‘ಇಂದಿರಾಗಾಂಧಿ ವ್ಯಕ್ತಿತ್ವ ರೂಪುಗೊಂಡಿದ್ದೆ ರಾಷ್ಟ್ರೀಯ ಚಳವಳಿಯಲ್ಲಿ’

Update: 2018-11-19 14:21 GMT

ಉಡುಪಿ, ನ.19: ಸ್ವಾತಂತ್ರ ಹೋರಾಟಗಾರರ ಕುಟುಂಬದಿಂದ ಬಂದ ಇಂದಿರಾಗಾಂಧಿ, ಚಿಕ್ಕಂದಿನಿಂದಲೂ ಅದರ ಭಾಗವಾಗಿಯೇ ಬೆಳೆದವರು. ಹೀಗಾಗಿ ಅವರ ವ್ಯಕ್ತಿತ್ವ ರೂಪುಗೊಂಡಿದ್ದು ಕುಟುಂಬ ರಾಜಕಾರಣದಲ್ಲಲ್ಲ, ಬದಲು ರಾಷ್ಟ್ರೀಯ ಚಳವಳಿಯಲ್ಲಿ ಎಂದು ಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ಲೇಖಕ ಹರ್ಷಕುಮಾರ್ ಕುಗ್ವೆ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಇಂದಿರಾ ಗಾಂಧಿ ಅವರ 101ನೇ ಜನ್ಮ ದಿನೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡುತಿದ್ದರು.

ಪ್ರಧಾನಿಯಾಗಿ ಇಂದಿರಾಗಾಂಧಿ ಅವರು ಮಾಡಿದ ಸಾಧನೆ ಹಾಗೂ ದೇಶಕ್ಕೆ ಅವರ ಕೊಡುಗೆಯನ್ನು ಇಂದು ಅಪ್ರಸ್ತುತಗೊಳಿಸಿ, ಅವರನ್ನು ಕುಟುಂಬ ರಾಜಕಾರಣಕ್ಕೆ ಸೀಮಿತಿಗೊಳಿಸುವ ಹುನ್ನಾರ ನಡೆಯುತ್ತಿದೆ. ಆದರೆ ಎಲ್ಲಾ ಪೂರ್ವಾಗ್ರಹಗಳನ್ನು ಬಿಟ್ಟು ಅವಲೋಕಿಸಿದರೆ ಅವರ ಕೊಡುಗೆಗಳು ನಮಗೆ ಗೊತ್ತಾಗುತ್ತದೆ ಎಂದರು.

ಇಂದಿರಾಗಾಂಧಿ ಅವರನ್ನು ‘ಉಕ್ಕಿನ ಮಹಿಳೆ’ ಎಂದು ಕರೆಯಲಾಗುತ್ತಿದೆ. ಅವರ ಈ ವ್ಯಕ್ತಿತ್ವ ರೂಪುಗೊಂಡಿದ್ದು ಬಾಲ್ಯದಲ್ಲಿ. ಜವಾಹರಲಾಲ್ ನೆಹರು ಅವರು ಇಂದಿರಾ ಅವರಿಗೆ 10 ವರ್ಷದ ಬಾಲಕಿಯಾಗಿದ್ದಾಗಿನಿಂದ ಬರೆದ ಪತ್ರಗಳನ್ನು ಓದಿದರೆ, ದೇಶದ ಇತಿಹಾಸವೂ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ತಂದೆ ನೀಡಿದ ಶಿಕ್ಷಣದ ಅರಿವಾಗುತ್ತದೆ ಎಂದು ಕುಗ್ವೆ ನುಡಿದರು.

ಇಂದಿರಾಗಾಂಧಿ ಅಂದು ಮಾಡಿದ ಬ್ಯಾಂಕ್‌ಗಳ ರಾಷ್ಟ್ರೀಕರಣ, ವಿಮಾ ಕ್ಷೇತ್ರದ ರಾಷ್ಟ್ರೀಕರಣ, ಭೂಸುಧಾರಣಾ ಕಾಯ್ದೆಗಳು ಜಾರಿಗೊಳ್ಳದೇ ಇರುತಿದ್ದರೆ, ದೇಶದ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ಅದೇ ರೀತಿ ಅಂತಾರಾಷ್ಟ್ರೀಯ ಸಂಬಂಧದಲ್ಲಿ ನೆಹರು ಅವರು ಹಾಕಿಕೊಟ್ಟ ಅಲಿಪ್ತ ನೀತಿಯನ್ನು ಮುಂದುವರಿಸದೇ ಇರುತಿದ್ದರೆ, ಭಾರತ ಇಂದು ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡು ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳುತ್ತಿರಲಿಲ್ಲ ಎಂದರು.

ಇಂದಿರಾ ದೇಶದ ಬಡವರು, ಮಹಿಳೆಯರು, ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರಲ್ಲಿ ಹೊಂದಿದ್ದ ಜನಪ್ರಿಯತೆಗೆ 1978ರಲ್ಲಿ ಆಕೆ ಪಡೆದ ಅಭೂತಪೂರ್ವ ವಿಜಯವೇ ಸಾಕ್ಷಿಯಾಗಿದೆ. ಜನರ ಮನಸ್ಸಿನಲ್ಲಿ ಉಳಿಯುವಂತ ಕೆಲಸವನ್ನು ಅವರು ಮಾಡಿರುವುದಕ್ಕೆ ಇದೇ ಸಾಕ್ಷಿಯಾಗಿದೆ. ಆಕೆಯನ್ನು ಉಕ್ಕಿನ ಮಹಿಳೆ ಎಂದು ಗುರುತಿಸಲಾಗುತಿದ್ದರೂ, ಮಾತೃಹೃದಯದ ಮಹಿಳೆಯೂ ಆಕೆಯಾಗಿದ್ದರು ಎಂದು ಹರ್ಷಕುಮಾರ್ ಕುಗ್ವೆ ನುಡಿದರು.

ಇಂದಿನ ಯುವಜನತೆ ದೇಶದ ಇತಿಹಾಸದ ಯಾವುದೇ ಅರಿವಿಲ್ಲದೇ, ನಮ್ಮ ಹಿರಿಯರ ತ್ಯಾಗದ ಪರಿಜ್ಞಾನ ಹೊಂದದೇ, ಕೆಲವರ ಕುರಿತಂತೆ ದ್ವೇಷವನ್ನೇ ಉಸಿರಾಡುತ್ತಿರುವುದು ತೀರಾ ಕಳವಳಕರ ಸಂಗತಿ. ಇವರು ಇತಿಹಾಸವನ್ನು ಅರಿಯುವುದೇ ಸಾಮಾಜಿಕ ಜಾಲತಾಣಗಳ ಮೂಲಕ ಎಂಬುದು ಅತ್ಯಂತ ಖೇಧಕರ ಅಂಶ. ದೇಶದ ಸಹಿಷ್ಣುತೆ, ಸೌಹಾರ್ದತೆ, ಜಾತ್ಯತೀತ ಪರಂಪರೆಯ ಸರಿಯಾದ ಅರಿವನ್ನು ಇವರಿಗೆ ನೀಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಕಾಂಗ್ರೆಸ್ ನಾಯಕರಾದ ಎಂ.ಎ.ಗಫೂರ್, ಕೃಷ್ಣರಾಜ ಸರಳಾಯ, ನರಸಿಂಹಮೂರ್ತಿ, ಅಶೋಕಕುಮಾರ್ ಕೊಡವೂರು, ಸತೀಶ್ ಅಮೀನ್ ಪಡುಕೆರೆ, ರೋಶನಿ ಒಲಿವೇರಾ, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು. ಅಲೆವೂರು ಹರೀಶ್ ಕಿಣಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News