ನ. 27: ಜೆಎನ್‌ಯುವಿನಲ್ಲಿ ‘ಕರ್ನಾಟಕ ಪರಿಕಲ್ಪನೆ’ ವಿಚಾರ ಸಂಕಿರಣ

Update: 2018-11-19 17:17 GMT

ಮಂಗಳೂರು, ನ.19: ಕಳೆದ ಮೂರು ವರ್ಷಗಳಿಂದ ದಿಲ್ಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದಲ್ಲಿ ಕನ್ನಡ ಬೋಧನೆ ಮತ್ತು ಸಂಶೋಧನೆಗಳ ಮೂಲಕ ಕ್ರಿಯಾಶೀಲವಾಗಿರುವ ಕನ್ನಡ ಅಧ್ಯಯನ ಪೀಠವು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನ.27ರಂದು ‘ಕರ್ನಾಟಕ ಪರಿಕಲ್ಪನೆ’ ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ಸಂಕಿರಣಕ್ಕೆ ಕನ್ನಡ ಸಂಸ್ಕತಿ ಇಲಾಖೆಯು ಸಹಯೋಗ ನೀಡಿದೆ.

ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಪ್ರೊ. ಸತೀಶ್ ದೇಶಪಾಂಡೆ ಹಾಗೂ ಸಂಶೋಧಕಿ ಪ್ರೊ.ಎ.ಆರ್. ವಾಸವಿ ಪ್ರಧಾನ ಭಾಷಣ ಮಾಡಲಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಹಿಂದಿಯ ಪ್ರಸಿದ್ಧ ಕವಿ ಪ್ರೊ.ಗೋಬಿಂದ ಪ್ರಸಾದ್ ಕನ್ನಡ ಅಧ್ಯಯನ ಪೀಠದ ಪ್ರಕಟಣೆಗಳನ್ನು ಬಿಡುಗಡೆ ಮಾಡಲಿದ್ದಾರೆ. ದಿಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅಪರಾಹ್ನ ಇತಿಹಾಸ ಪ್ರಾಧ್ಯಾಪಕಿ ಪ್ರೊ.ಜಾನಕಿ ನಾಯರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರಧಾನ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಡಾ.ರಹಮತ್ ತರೀಕೆರೆ (ಕರ್ನಾಟಕದ ಸಾಂಸ್ಕೃತಿಕ ಪರಿಕಲ್ಪನೆ), ಡಾ.ವಿನಯಾ ಒಕ್ಕುಂದ, ದಾಂಡೇಲಿ (ಕರ್ನಾಟಕದ ಮಹಿಳಾ ಪರಿಕಲ್ಪನೆ), ಪರಿಸರವಾದಿ ಡಾ.ನಾಗೇಶ್ ಹೆಗಡೆ (ಕರ್ನಾಟಕದ ನೈಸರ್ಗಿಕತೆ), ಬೆಂಗಳೂರು ವಿಶ್ವವಿದ್ಯಾನಿಲಯದ ಡಾ.ನಟರಾಜ್ ಹುಳಿಯಾರ್ (ಕರ್ನಾಟಕದ ಸಾಹಿತ್ಯದ ಪರಿಕಲ್ಪನೆ) ಮತ್ತು ರಾಯಚೂರು ವಿಶ್ವವಿದ್ಯಾನಿಲಯದ ಡಾ.ಮುಜಾಫರ್ ಅಸಾದಿ (ಕರ್ನಾಟಕದ ರಾಜಕೀಯ ಪರಿಕಲ್ಪನೆ) ಕುರಿತು ಪ್ರಬಂಧ ಗಳನ್ನು ಮಂಡಿಸಲಿದ್ದಾರೆ. ವಿದ್ವಾಂಸರು ಮಂಡಿಸಿದ ಎಲ್ಲ ಪ್ರಬಂಧಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ.

ನೃತ್ಯ ಕಾರ್ಯಕ್ರಮ: ಕಾರ್ಯಕ್ರಮದ ಕೊನೆಯಲ್ಲಿ ಸಂಜೆ 6:30ಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಗುರು ಶುಭಾ ಧನಂಜಯ ಮತ್ತು ತಂಡದವರು ಕನ್ನಡ ಕಾವ್ಯ ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ದಿಲ್ಲಿ ಕನ್ನಡಿಗರ ಜೊತೆಗೆ ಸುಮಾರು 300 ಜನ ಐಎಎಸ್‌ಗೆ ತಯಾರಿ ನಡೆಸುವ ಅಭ್ಯರ್ಥಿಗಳನ್ನುವಿಶೇಷವಾಗಿ ಆಹ್ವಾನಿಸಲಾಗಿದೆ ಎಂದು ದಿಲ್ಲಿಯ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News