ರಾಮ ಮಂದಿರ ನಿರ್ಮಾಣಕ್ಕೆ ಮಸೂದೆ ಜಾರಿಗೆ ಆಗ್ರಹ: ನ.25ರಂದು ಮಂಗಳೂರಿನಲ್ಲಿ ಜನಾಗ್ರಹ ಸಭೆ

Update: 2018-11-20 09:46 GMT

ಮಂಗಳೂರು, ನ.20: ರಾಮ ಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಮಸೂದೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ನ.25ರಂದು ನಗರದ ನೆಹರೂ ಮೈದಾನದಲ್ಲಿ ಜನಾಗ್ರಹ ಸಭೆಯನ್ನು ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬಜರಂಗದದಳದ ರಾಷ್ಟ್ರೀಯ ಸಂಯೋಜಕ ಸೋಹನ್ ಸಿಂಗ್ ಸೋಲಂಕಿ ದಿಕ್ಸೂಚಿ ಭಾಷಣ ಮಾಡಲಿರುವರು. ಅಂದು ಸಂಜೆ 3:30ಕ್ಕೆ ಅಂಬೇಡ್ಕರ್ ವೃತ್ತದಿಂದ ಭಜನೆ, ಸಂಕೀರ್ತನೆ, ರಾಮದೇವರ ಸ್ತಬ್ಧಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಜನಾಗ್ರಹ ಸಭೆ ನಡೆಯಲಿದೆ ಎಂದು ಅವರು ಹೇಳಿದರು.

ಹಿಂದೂ ಜಾಗರಣ ವೇದಿಕೆ, ಹಿಂದೂ ಯುವಸೇನೆ, ಶ್ರೀರಾಮ ಸೇನೆ ಮೊದಲಾದ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿದ್ದು, ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜನಾಗ್ರಹ ಸಭೆಯ ಪೂರ್ವಭಾವಿಯಾಗಿ ನ.22ರಂದು ಜಿಲ್ಲೆಯ 8 ಕ್ಷೇತ್ರಗಳಲ್ಲಿ ಮಹಾ ಸಂಪರ್ಕ ಅಭಿಯಾನ ನಡೆಯಲಿದೆ. ಕಾರ್ಯಕರ್ತರು ಮನೆ ಮನೆ ಸಂಪರ್ಕ ಮೂಲಕ ಅಭಿಯಾನ ನಡೆಸಲಿದ್ದಾರೆ ಎಂದು ಶರಣ್ ಪಂಪ್‌ವೆಲ್ ತಿಳಿಸಿದರು.

ಪಿಣರಾಯಿ ರಾಜೀನಾಮೆಗೆ ಆಗ್ರಹ

ಶಬರಿಮಲೆ ಕ್ಷೇತ್ರಕ್ಕೆ ಎಲ್ಲಾ ವಯೋಮಾನದ ಸ್ತ್ರೀಯರಿಗೆ ಪ್ರವೇಶ ಕಲ್ಪಿಸುವುದು ಮಾತ್ರವಲ್ಲದೆ ಹಿಂದೂ ಭಕ್ತರನ್ನು ಬಂಧಿಸುವ ಮೂಲಕ ಹಿಂದೂಗಳ ಭಾವನೆಗೆ ಬೆಲೆ ಇಲ್ಲದ ರೀತಿಯಲ್ಲಿ ಕೇರಳ ಸರಕಾರ ವರ್ತಿಸುತ್ತಿದೆ. ಆದ್ದರಿಂದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಹಾಗೂ ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ 800 ವರ್ಷಗಳ ಪರಂಪರೆಯ ವಿಮರ್ಶೆಗೆ ಮುಂದಾಗಬೇಕು ಎಂದು ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ವಿಭಾಗ ಸಂಯೋಜಕ ಬುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್, ಗೋಪಾಲ್ ಕುತ್ತಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News