ಮೋದಿ ಸೋಲಿಸಲು ಪಾಕ್ ಜೊತೆ ಕೈ ಸಂಚು: ಉಮಾಭಾರತಿ

Update: 2018-11-20 15:34 GMT

ದಾಮೋಹ್,ನ.21: ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಪ್ರಚಾರ ಕಾವೇರುತ್ತಿದ್ದು, ಸೋಮವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಉಮಾಭಾರತಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸುವುದಕ್ಕಾಗಿ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಜೊತೆ ಕೈಜೋಡಿಸಿದ್ದಾರೆಂದು ಆಪಾದಿಸಿದ್ದಾರೆ.

‘‘ ಭಾರತ ಹಾಗೂ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಕಾದಾಡುತ್ತಿದ್ದಾಗ, ಆ ಸಮಯದಲ್ಲಿ ಲೋಕಸಭೆಯಲ್ಲಿ ಜನಸಂಘದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು, ಆಗಿನ ಪ್ರಧಾನಿ ಇಂದಿರಾಗಾಂಧಿ, ಭಾರತದ ಸಶಸ್ತ್ರ ಪಡೆಗಳು ಹಾಗೂ ಭಾರತ ಸರಕಾರವನ್ನು ಬೆಂಬಲಿಸಿದ್ದರು. ಏಕೆಂದರೆ ನಮಗೆ ಪಾಕಿಸ್ತಾನವನ್ನು ಪರಾಭವಗೊಳಿಸಬೇಕಾಗಿತ್ತು’’ ಎಂದು ಭಾರತಿ ತಿಳಿಸಿದರು.

‘‘ಆದರೆ ಭಾರತವು ಪಾಕ್ ಮೇಲೆ ಸರ್ಜಿಕಲ್ ದಾಳಿ ನಡೆಸಿದಾಗ, ಕಾಂಗ್ರೆಸ್ ನಾಯಕರು ನಮ್ಮ ಸೇನಾ ವರಿಷ್ಠರನ್ನು ‘ಗೂಂಡಾ’ ಎಂಬುದಾಗಿ ನಿಂದಿಸಿದ್ದರು. ಕಾಂಗ್ರೆಸ್ ನಾಯಕರೊಬ್ಬರು ಪಾಕಿಸ್ತಾನಕ್ಕೆ ತೆರಳಿ, ತಮಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಬೇಕಾಗಿದೆ ಎಂದು ಹೇಳಿದ್ದರು. ಅಂದರೆ ಅವರು ಪಾಕ್ ಜೊತೆ ಕೈಜೋಡಿಸಿ, ಮೋದಿಯ ಸೋಲಿಗೆ ಸಂಚು ಹೂಡಿದ್ದರು’’ ಎಂದು ಉಮಾ ಹೇಳಿದರು.

ನೂತನ ಪ್ರಧಾನಿ ಇಮ್ರಾನ್ ಖಾನ್‌ರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತನ್ನನ್ನು ಆಹ್ವಾನಿಸಿರುವುದಕ್ಕಾಗಿ ನರೇಂದ್ರ ಮೋದಿಯವರಿಗೆ ಅಸೂಯೆಯಾಗಿತ್ತು ಎಂದು ಪಂಜಾಬ್‌ನ ಸಚಿವ ನವಜೋತ್ ಸಿಂಗ್ ಸಿಧು ಅವರು ಟೀಕಿಸಿದ ಒಂದು ವಾರದ ಬಳಿಕ ಉಮಾಭಾರತಿ ಈ ಹೇಳಿಕೆ ನೀಡಿದ್ದಾರೆ.

‘‘ ಪ್ರಧಾನಿ ಮೋದಿಯವರು ನನ್ನ ಬಗ್ಗೆ ಅಸೂಯೆಗೊಂಡಿರುವುದಕ್ಕೆ ಸ್ಪಷ್ಟವಾದ ಕಾರಣವಿದೆ. ತನ್ನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇಮ್ರಾನ್ ಖಾನ್ ಅರು ಮೋದಿಯವರನ್ನು ಆಹ್ವಾನಿಸಿರಲಿಲ್ಲ’’ ಎಂದು ಸಿಧು, ಚತ್ತೀಸ್‌ಗಢದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News